ಫೈನಲ್ ಹಂತಕ್ಕೆ ತಲುಪಿದ ಕುಂಡ್ಯೋಳಂಡ ಹಾಕಿ ಕ್ರೀಡಾಕೂಟ
ಕೊಡಗು ಜಿಲ್ಲೆಯಲ್ಲಿ ಹಾಕಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಫೈನಲ್ ಹಂತಕ್ಕೆ ತಲುಪಿದ ಕುಂಡ್ಯೋಳಂಡ ಹಾಕಿ ಕ್ರೀಡಾಕೂಟ. ಕ್ರೀಡಾಕೂಟದಲ್ಲಿ ಉದ್ದುದ್ದ ಜಡೆ, ಕೊಂಬು ಮೀಸೆಗಳ ಪೈಪೋಟಿಯ ನೋಡಿ ಸಂಭ್ರಮಿಸಿದ ಕ್ರೀಡಾಭಿಮಾನಿಗಳು
ಕೊಡಗು ಜಿಲ್ಲೆಯಲ್ಲಿ ಇದೀಗ ಹಾಕಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಒಂದು ತಿಂಗಳಿಂದ ನಡೆಯುತ್ತಿರುವ ಹಾಕಿ ಹಬ್ಬಕ್ಕೆ ತೆರೆ ಬೀಳುತ್ತಿದ್ದು, ಇಂದು ಕೊಡವ ಕುಟುಂಬಗಳ ನಡುವೆ ಫೈನಲ್ ಪಂದ್ಯಾವಳಿಯು ಕೊಡಗು ಜಿಲ್ಲೆ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನೆಡೆಯಿತು.
ಹಾಕಿ ಪಂದ್ಯಾವಳಿಯ ಜೊತೆಗೆ ವಿವಿಧ ರೀತಿಯ ಸ್ಪರ್ಧೆಗಳು ನಡೆದಿದ್ದು ಅದರಲ್ಲಿ ಮಹಿಳೆಯರ ಉದ್ದಜಡೆಯ ಸ್ಪರ್ಧೆ ಹಾಗೂ ಪುರುಷರ ದಪ್ಪ ಮೀಸೆಯ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. ಕೊಡವ ಕುಟುಂಬಗಳ ಕೊಡವ ಕೊಡವತ್ತಿಯರು ಸ್ಪರ್ಧಿಗಳಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಇತ್ತೀಚಿನ ದಿಗಳಲ್ಲಿ ಮಹಿಳೆಯರು, ಯುವತಿಯರು ಉದ್ದುದ್ದ ಕೂದಲಿದ್ರೆ ಸಮಸ್ಯೆ ಅಂತಾ ಶಾರ್ಟ್ ಹೇರ್ ಮಾಡಿಕೊಂಡು ಫ್ಯಾಷನ್ ಅಂತ ಶೋಕಿ ಮಾಡುತ್ತಾರೆ. ಇಂತವರ ಮಧ್ಯೆ ಈ ಮಹಿಳೆಯರು ಉದ್ದ ಕೂದಲು ಬಿಡಲು ಕೂಡ ಒಂದು ಫ್ಯಾಷನ್ ಅಂತ ನೀಳ ಜಡೆಗಳನ್ನ ಬೆಳೆಸುವ ಮೂಲಕ ಗಮನ ನೆರೆದಿದ್ದವರ ಗಮನ ಸೆಳೆದಿದ್ದಾರೆ. ಇಲ್ಲಿ ಕೇವಲ ಮಹಿಳೆಯರು ಮಾತ್ರವಲ್ಲ ಚಿಕ್ಕ ಹೆಣ್ಣು ಮಕ್ಕಳು ಹಾಗೂ ಹಿರಿಯ ಮಹಿಳೆಯರು ಕೂಡ ನಾವೇನು ಕಮ್ಮಿ ಇಲ್ಲಾ ಅಂತ ಫ್ಯಾಷನ್ ಶೋನಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿ ಪ್ರತೀಕ್ಷ ಎಷ್ಟೋ ಯವತಿಯರು ಸ್ಟೈಲ್ ಹೆಸರಿನಲ್ಲಿ ತಲೆಗೂದಲನ್ನು ಕತ್ತರಿಸಿಕೊಳ್ಳುತ್ತಾರೆ. ನಾನೂ ಹಾಗೆಯೇ ಕತ್ತರಿಸಿಕೊಳ್ಳಬೇಕೆಂದುಕೊಂಡಿದ್ದೆ. ಆದರೆ ಹಲವಾರು ಜನರು ನಿನ್ನ ಕೂದಲು ಉದ್ದ ಹಾಗೂ ತುಂಬಾ ಚೆನ್ನಾಗಿದೆ ಎಂದು ಹೇಳುತ್ತಿದ್ದರು. ಹೀಗಾಗಿ ನಾನು ತಲೆಕೂದಲು ಬೆಳೆಸಲು ಆರಂಭಿಸಿದೆ. ಈಗ ಅದೇ ತುಂಬಾ ಖುಷಿಕೊಡುತ್ತದೆ. ಇದರ ಪೋಷಣೆಗಾಗಿ ಸಾಮಾನ್ಯ ತೆಂಗಿನ ಎಣ್ಣೆಯನ್ನೇ ಹಾಕುತ್ತೇನೆ ಎಂದು ಉದ್ದುದ್ದ ಜಡೆಗಳ ನಡುವೆ ನಡೆದ ಸ್ಪರ್ಧಿ ಪ್ರತೀಕ್ಷಾ ಹೇಳಿದರು.
ಪುರುಷರು ಕೂಡ ದಪ್ಪ ಮೀಸೆ ಉದ್ದ ಮೀಸೆ, ಕೊಂಬು ಮೀಸೆಗಳನ್ನ ಬಿಡುವ ಮೂಲಕ ಗಮನ ಸೆಳೆದರು. ಫ್ಯಾಷನ್ ಹೆಸರಿನಲ್ಲಿ ಮೀಸೆಗಳನ್ನ ತೆಗೆದು ಶೋಕಿ ಮಾಡೊ ಯುವಕರ ಮಧ್ಯೆ ಈ ಪುರುಷರು ತಮ್ಮದೆ ಶೈಲಿಯ ಮೀಸೆಗಳನ್ನ ಬೆಳೆಸುವ ಮೂಲಕ ಗಂಡಸರ ಗತ್ತನ್ನು ಪ್ರದರ್ಶಿಸಿದ್ರು. ಈ ಸ್ಪರ್ಧೆಗಳ ಬಳಿಕ ವಿವಿಧ ತಂಡಗಳ ನಡುವೆ ಸೆಮಿ ಫೈನಲ್ ಪಂದ್ಯಾಟಗಳು ನಡೆದವು. ಸಹಜವಾಗಿ ಕೊಡಗು ಎಂದರೆ ಹಾಕಿ ಕ್ರೀಡೆಯ ತವರೂರು. ಆ ಕ್ರೀಡೆಯನ್ನು ಕಣ್ತುಂಬಿಕೊಳ್ಳಲು ಕ್ರೀಡಾ ಪ್ರೇಮಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಒಂದೊಂದು ಗೋಲ್ಗಾಗಿ ತಂಡಗಳು ಸೆಣೆಸಾಡುತ್ತಿದ್ದರೆ ಕ್ರೀಡಾಪ್ರೇಮಿಗಳು ಸಿಳ್ಳೆ ಕೇಕೆ ಹಾಕಿ ಎಂಜಾಯ್ ಮಾಡಿದರು.
ಇನ್ನು ಮೀಸೆಗಳ ನಡುವಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಾರ್ಯಪ್ಪ ಅವರು ಮಾತನಾಡಿ ಮೀಸೆ ಗಂಡಸಿನ ಸಂಕೇತ. ಎಷ್ಟೋ ಯುವಕರು ಗಡ್ಡ ಮೀಸೆಗಳನ್ನು ನುಣ್ಣಗೆ ಬೋಳಿಸಿಕೊಂಡಿರುತ್ತಾರೆ. ಇದರಿಂದ ಅವರು ಗಂಡಸರೋ ಹೆಂಗಸರೋ ಎನ್ನುವುದೇ ಗೊಂದಲವಾಗಿಬಿಡುತ್ತದೆ. ಬದಲಾಗಿ ಮೀಸೆಯನ್ನು ಬಿಟ್ಟುಕೊಂಡರೆ ಅದರ ಘನತೆಯೇ ಬೇರೆ ಎಂದಿದ್ದಾರೆ. ಒಟ್ಟಿನಲ್ಲಿ ಕೊಡವ ಕೌಟಂಬಿಕ ಹಾಕಿಯ ಸಂಭ್ರಮ ಒಂದೆಡೆಯಾದರೆ ಹಾಕಿ ಪಂದ್ಯಾವಳಿಯ ಫೈನಲ್ ಸಂದರ್ಭದಲ್ಲಿ ವಿಶೇಷವಾದ ಇಂತಹ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಮತ್ತೊಂದು ರೀತಿಯ ಸಂಭ್ರಮಕ್ಕೆ ಕಾರಣವಾಗಿತ್ತು
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್