ಕರಾವಳಿ ಜಿಲ್ಲೆಯಲ್ಲಿ ಮತ್ತೆ ವರುಣಾರ್ಭಟ, ಬೆಂಗಳೂರಿಗೆ ಜೂ.4ರಿಂದ ಮತ್ತೆ ಮಳೆ
ಜೂನ್ 4 ರಿಂದ ಬೆಂಗಳೂರಿನಲ್ಲಿ ಮತ್ತೆ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ. ಜೂನ್ 3 ರಂದು ಒಣಹವೆ ಇದ್ದು, ನಂತರ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಮಳೆಯಾಗುವ ಮುನ್ಸೂಚನೆ ಇದೆ.

ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಕಾಣಿಸಿಕೊಳ್ಳಲಿದೆ ಎಂದು ಭಾರತ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ. ಜೂನ್ 3, 2025 ರಂದು ಬೆಂಗಳೂರಿನಲ್ಲಿ ಬಹುತೇಕ ಒಣ ಮತ್ತು ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಜೂನ್ 4 ರಿಂದ 6 ರವರೆಗೆ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ಮೋಡ ಕವಿದ ವಾತಾವರಣವಿರುತ್ತದೆ. ಗರಿಷ್ಠ ತಾಪಮಾನವು ಸುಮಾರು 30-31°C ಮತ್ತು ಕನಿಷ್ಠ ತಾಪಮಾನವು ಸುಮಾರು 20-22°C ಇರಲಿದೆ. ಆರ್ದ್ರತೆಯು ಅಧಿಕವಾಗಿರುತ್ತದೆ ಎಂದು ವರದಿ ತಿಳಿಸಿದೆ. ಇನ್ನು ಮಂಗಳೂರಿನಲ್ಲಿ ಸುಮಾರು 34°C ತಾಪಮಾನ ಇರಲಿದೆ ಎಂದು ಐಎಂಡಿ ಹೇಳಿದೆ.
ಜೂನ್ 4 ರಿಂದ ಬೆಂಗಳೂರಿನಲ್ಲಿ ಕ್ರಮೇಣ ಬದಲಾವಣೆ ನಿರೀಕ್ಷಿಸಬಹುದು, ಬುಧವಾರ ಲಘು ಮಳೆಯಿಂದ ಆರಂಭವಾಗಿ, ಜೂನ್ 5 ಮತ್ತು 6 ರಂದು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಇದು ಬೆಂಗಳೂರಿಗೆ ಮತ್ತೊಂದು ಮಳೆಗಾಲದ ಆರಂಭ ಎಂದು ಐಎಂಡಿ ಹೇಳಿದೆ. ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿ ಜೂನ್ 3ರವರೆಗೆ ಒಣ ಮತ್ತು ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಬಳಿಕ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಂತೆಯೇ, ಮೈಸೂರಿನಲ್ಲೂ ಮೋಡ ಕವಿದ ವಾತಾವರಣವಿರಲಿದ್ದು, ಮಧ್ಯಾಹ್ನದ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಕರ್ನಾಟಕಕ್ಕೆ ಈ ಬಾರಿ ಮುಂಗಾರು ಮಳೆ ಬೇಗನೆ ಪ್ರವೇಶ ಮಾಡಿದ್ದು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರ ಸೇರಿದಂತೆ ದಕ್ಷಿಣದ ಆರು ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ಹುಬ್ಬಳ್ಳಿ-ಧಾರವಾಡ ತುಂತುರು ಮಳೆ, ದಿನದ ಕೊನೆಯಲ್ಲಿ ಹೆಚ್ಚಾಗಿ ಮೋಡ ಕವಿದ ವಾತಾವರಣವಿರುತ್ತದೆ ಮತ್ತು ತಂಗಾಳಿಯುಂಟಾಗುವ ಸಾಧ್ಯತೆ ಇದೆ.
ಜೂನ್ 4 ಮತ್ತು 5ರಂದು ಬಹುತೇಕ ರಾಜ್ಯದ ಎಲ್ಲ ಭಾಗಗಳಲ್ಲೂ ವಾತಾವರಣ ಬದಲಾಗಲಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡದಲ್ಲಿ ಹೆಚ್ಚು ಮಳೆ ನಿರೀಕ್ಷೆ ಇದೆ. ಹೀಗಾಗಿ ಜೂನ್ 4ರವರೆಗೆ ಎಲ್ಲೋ ಅಲರ್ಟ್ ಇದೆ. ಜೂನ್ 7ರವರೆಗೆ ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅತಿ ಸಾಧಾರಣ ಮಳೆಯಾಗುವ ಸಂಭವವಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸದ್ಯಕ್ಕೆ ಒಣಹವೆ ಮುಂದುವರಿಯೋದ್ರಿಂದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಉತ್ತಮ ಸಮಯವಾಗಿದೆ.