- Home
- News
- State
- ಗೃಹಲಕ್ಷ್ಮಿ ಯೋಜನೆ ಕಳ್ಳಾಟ ಬಿಚ್ಚಿಟ್ಟ ಸಿಎಜಿ ರಿಪೋರ್ಟ್; 19 ಸಾವಿರ ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ!
ಗೃಹಲಕ್ಷ್ಮಿ ಯೋಜನೆ ಕಳ್ಳಾಟ ಬಿಚ್ಚಿಟ್ಟ ಸಿಎಜಿ ರಿಪೋರ್ಟ್; 19 ಸಾವಿರ ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ!
ಕರ್ನಾಟಕದ 'ಗೃಹಲಕ್ಷ್ಮಿ' ಯೋಜನೆಯಲ್ಲಿ ಭಾರೀ ತಾಂತ್ರಿಕ ಮತ್ತು ಆಡಳಿತಾತ್ಮಕ ಲೋಪಗಳಿರುವುದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ. ಒಂದೇ ಬ್ಯಾಂಕ್ ಖಾತೆಗೆ ಸಾವಿರಾರು ಜನರಿಗೆ ಹಣ ಸಂದಾಯ, ಖಾತೆಯೇ ಇಲ್ಲದವರಿಗೆ ಕೋಟಿಗಟ್ಟಲೆ ಜಮೆ, ಮತ್ತು ಪುನರಾವರ್ತಿತ ಪಾವತಿಗಳಂತಹ ಗಂಭೀರ ಅಕ್ರಮಗಳು ಬೆಳಕಿಗೆ ಬಂದಿವೆ.

ಬೆಂಗಳೂರು (ಜೂ.23): ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಅತ್ಯಂತ ಜನಪ್ರಿಯ ಹಾಗೂ ದುಬಾರಿ ಯೋಜನೆಯಾದ 'ಗೃಹಲಕ್ಷ್ಮಿ' ಯೋಜನೆಯಲ್ಲಿ ಭಾರೀ ಪ್ರಮಾಣದ ತಾಂತ್ರಿಕ ಹಾಗೂ ಆಡಳಿತಾತ್ಮಕ ಲೋಪಗಳು ನಡೆದಿರುವುದು ಭಾರತೀಯ ಲೆಕ್ಕಪರಿಶೋಧಕರು ಮತ್ತು ತನಿಖಾಧಿಕಾರಿಗಳ (CAG) ವರದಿಯಿಂದ ಬೆಳಕಿಗೆ ಬಂದಿದೆ. ಇದುವರೆಗೆ ಸುಮಾರು 75,000 ಕೋಟಿ ರೂಪಾಯಿಗಳನ್ನು ವಿತರಿಸಿರುವ ಈ ಯೋಜನೆಯಲ್ಲಿ ಈಗ ಸಾವಿರಾರು ಕೋಟಿ ರೂಪಾಯಿಗಳ ವ್ಯತ್ಯಯ ಉಂಟಾಗಿರುವ ಆತಂಕ ಎದುರಾಗಿದೆ.
ಸಿಎಜಿ ಆಡಿಟ್‌ನಲ್ಲಿ ಬಯಲಾದ ಸತ್ಯ:
ಸಿಎಜಿಯ ಡೇಟಾ ಅನಾಲಿಟಿಕ್ಸ್ ವಿಭಾಗವು ನಡೆಸಿದ ವಿಶೇಷ ಆಡಿಟ್‌ನಲ್ಲಿ ದಂಗುಬಡಿಸುವ ಅಂಶಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಪ್ರಸ್ತುತ 1.30 ಕೋಟಿ ಫಲಾನುಭವಿಗಳಿದ್ದು, ಇವರಲ್ಲಿ ಸಾವಿರಾರು ಜನರಿಗೆ ನಿಯಮಬಾಹಿರವಾಗಿ ಹಣ ಸಂದಾಯವಾಗಿರುವುದು ಪತ್ತೆಯಾಗಿದೆ. ವರದಿಯ ಪ್ರಕಾರ, ಬರೋಬ್ಬರಿ 19,020 ಫಲಾನುಭವಿಗಳು ಒಂದೇ ಬ್ಯಾಂಕ್ ಖಾತೆಯನ್ನು ಹಂಚಿಕೊಂಡಿದ್ದಾರೆ! ಸರ್ಕಾರದ ಡಿಬಿಟಿ (ನೇರ ನಗದು ವರ್ಗಾವಣೆ) ವ್ಯವಸ್ಥೆಯಲ್ಲಿ ಒಬ್ಬ ಫಲಾನುಭವಿಗೆ ಒಂದು ಪ್ರತ್ಯೇಕ ಖಾತೆ ಇರಬೇಕೆಂಬ ನಿಯಮವಿದ್ದರೂ, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಒಂದೇ ಖಾತೆಗೆ ಹಣ ಹರಿದಿರುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.
ಖಾತೆಯೇ ಇಲ್ಲದವರಿಗೂ ಕೋಟಿ ಕೋಟಿ ಹಣ ಜಮೆ!
ವರದಿಯಲ್ಲಿರುವ ಮತ್ತೊಂದು ಆಘಾತಕಾರಿ ಅಂಶವೆಂದರೆ, ಬ್ಯಾಂಕ್ ಖಾತೆಯೇ ಇಲ್ಲದ ಸುಮಾರು 23,262 ಫಲಾನುಭವಿಗಳಿಗೆ 46.52 ಕೋಟಿ ರೂಪಾಯಿ ಹಣ ಸಂದಾಯವಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಸಲಿಗೆ ಬ್ಯಾಂಕ್ ಖಾತೆಯೇ ಇಲ್ಲದಿದ್ದಾಗ ಡಿಬಿಟಿ ಮೂಲಕ ಹಣ ವರ್ಗಾವಣೆ ಸಾಧ್ಯವೇ ಇಲ್ಲ. ಹೀಗಿದ್ದರೂ ಹಣ ಪಾವತಿಯಾಗಿರುವುದು ತಾಂತ್ರಿಕ ವಂಚನೆಯೋ ಅಥವಾ ವ್ಯವಸ್ಥಿತ ಭ್ರಷ್ಟಾಚಾರವೋ ಎಂಬ ಅನುಮಾನ ಮೂಡಿದೆ. ಇದರೊಂದಿಗೆ 8,995 ಖಾತೆಗಳಿಗೆ ಸುಮಾರು 1.80 ಕೋಟಿ ರೂಪಾಯಿಗಳನ್ನು ಪದೇ ಪದೇ (Repeatedly) ಜಮೆ ಮಾಡಲಾಗಿದೆ.
ಇಲಾಖೆಯ ಕಳ್ಳಾಟ ಮತ್ತು ಮುಂದಿನ ಕ್ರಮ:
ಈ ಗಂಭೀರ ಲೋಪಗಳ ಕುರಿತು ಮಾಹಿತಿ ಕೇಳಿದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸಿಎಜಿಗೆ ಸರಿಯಾದ ಮಾಹಿತಿ ನೀಡದೆ ಕಳ್ಳಾಟವಾಡುತ್ತಿದೆ ಎಂದು ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಸಿಎಜಿ ಕೇಳಿದ ದಾಖಲೆಗಳನ್ನು ನೀಡಲು ಇಲಾಖೆ ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈಗಾಗಲೇ ಮುಖ್ಯಮಂತ್ರಿಗಳ ಸಭೆಯಲ್ಲೂ ಈ ಸಿಎಜಿ ವರದಿಯ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಸರ್ಕಾರ ಈಗ ಎಚ್ಚೆತ್ತುಕೊಂಡಿದೆ. ಈ ವರದಿಯನ್ನು ಆಧರಿಸಿ ರಾಜ್ಯಾದ್ಯಂತ ಅನರ್ಹ ಫಲಾನುಭವಿಗಳ ಪತ್ತೆಗೆ ಬೃಹತ್ ಕಾರ್ಯಾಚರಣೆ ನಡೆಸಲು ಸರ್ಕಾರ ಮುಂದಾಗಿದೆ. ಬ್ಯಾಂಕ್ ಖಾತೆ ಬದಲಿಸಿದ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ವಿವರಗಳನ್ನು ಮರುಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಲೋಪದೋಷಗಳಿಂದಾಗಿ ಬೊಕ್ಕಸಕ್ಕೆ ಉಂಟಾಗಿರುವ ನಷ್ಟವನ್ನು ಹೇಗೆ ಸರಿದೂಗಿಸಲಾಗುತ್ತದೆ ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಯಾವ ಕ್ರಮ ಜರುಗಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

