Karnataka Assembly Session: 20 ವರ್ಷ ಬಳಿಕ ಮೆಟ್ಟಿಲು ಬಳಸಿ ವಿಧಾನಸೌಧಕ್ಕೆ ಬಂದ ರಾಜ್ಯಪಾಲ
ಬೆಂಗಳೂರು(ಫೆ.15): ವಿಧಾನಮಂಡಲದ ಜಂಟಿ ಅಧಿವೇಶನ(Joint Session) ಉದ್ದೇಶಿಸಿ ಭಾಷಣ ಮಾಡಲು ರಾಜಭವನದಿಂದ ಅಶ್ವಪಡೆ ಬೆಂಗಾವಲಿನಲ್ಲಿ ಆಗಮಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್(Thaawarchand Gehlot) ಅವರು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೂಲಕ ಜಂಟಿ ಅಧಿವೇಶನಕ್ಕೆ ಆಗಮಿಸಿದರು.
ಈ ಮೂಲಕ ಬಹಳ ವರ್ಷಗಳ ಬಳಿಕ ವಿಧಾನಸೌಧದ(Vidhanasoudha) ಭವ್ಯ ಮೆಟ್ಟಿಲುಗಳ ಮೂಲಕ ರಾಜ್ಯಪಾಲರೊಬ್ಬರು ಅಧಿವೇಶನಕ್ಕೆ ಆಗಮಿಸಿದಂತಾಗಿದೆ. ವಿಧಾನಸೌಧದ ಪೂರ್ವ ದಿಕ್ಕಿನಲ್ಲಿ 70 ಅಡಿ ಎತ್ತರ ಹಾಗೂ 204 ಅಡಿ ಅಗಲದ ಸ್ಥಳದಲ್ಲಿರುವ 45 ಮೆಟ್ಟಿಲುಗಳಿಗೆ ಭವ್ಯ ಮೆಟ್ಟಿಲು (Grand Steffs) ಎಂದೇ ಹೆಸರು. ಕಾರಣಾಂತರಗಳಿಂದ ಹಲವು ವರ್ಷಗಳಿಂದ ಭವ್ಯಮೆಟ್ಟಿಲು ಮೂಲಕ ವಿಧಾನಸೌಧ ಪ್ರವೇಶಿಸದೆ ರಾಜ್ಯಪಾಲರು ನೆಲಮಹಡಿಯಲ್ಲಿರುವ ಲಿಫ್ಟ್ ಮೂಲಕ ಪ್ರವೇಶಿಸುತ್ತಿದ್ದರು.
ಮೂಲಗಳ ಪ್ರಕಾರ 2002ರವರೆಗೆ ರಾಜ್ಯಪಾಲರಾಗಿದ್ದ ವಿ.ಎಸ್. ರಮಾದೇವಿ(VS Ramadevi) ಅವರ ಬಳಿಕ ರಾಜ್ಯಪಾಲರು ಭವ್ಯ ಮೆಟ್ಟಿಲುಗಳ ಮೂಲಕ ಅಧಿವೇಶನಕ್ಕೆ ಆಗಮಿಸುವ ಸಂಪ್ರದಾಯ ಬದಲಾಗಿತ್ತು. ಇದೀಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಅವರ ಮನವಿ ಮೇರೆಗೆ ಸೋಮವಾರ ಥಾವರ್‌ಚಂದ್ ಗೆಹಲೋತ್ ಅವರು ಭವ್ಯ ಮೆಟ್ಟಿಲುಗಳ ಮೇಲೆ ಹಾಸಿದ್ದ ಕೆಂಪು ಹಾಸಿಗೆ ಮೇಲೆ ಅಧಿವೇಶನಕ್ಕೆ ಪ್ರವೇಶಿಸಿದರು.
ನಗರದ ಸಶಸ್ತ್ರ ಮೀಸಲು ಪಡೆ ಬ್ಯಾಂಡ್ ಹಾಗೂ ಅಶ್ವಪಡೆಯ ಬೆಂಗಾವಲಿನೊಂದಿಗೆ ರಾಜಭವನದಿಂದ(Rajbhavan) ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ವಿಧಾನಸೌಧ ಭವ್ಯ ಮೆಟ್ಟಿಲು ಎದುರಿಗೆ ಆಗಮಿಸಿದರು.
ಈ ವೇಳೆ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ಅವರೊಂದಿಗೆ ವಿಧಾನಮಂಡಲ ಅಧಿವೇಶನಕ್ಕೆ ಆಗಮಿಸಿದ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು.