ರಾಕೇಶ್ ಪೂಜಾರಿ ಕಾಂತಾರ ಚಾಪ್ಟರ್-1 ನಗುವಿನ ರಾಯಭಾರಿ; ನಗಿಸುವ ವ್ಯಕ್ತಿ ಜೊತೆಗಿಲ್ಲದಿರುವುದೇ ಬೇಸರ!
'ಕಾಂತಾರ: ಚಾಪ್ಟರ್ 1' ಟ್ರೇಲರ್, ದೈವದ ಮೂಲ, ಕಾಡಿನ ಜನರ ಹೋರಾಟ ಮತ್ತು ನಾಯಕ-ರಾಣಿಯ ಪ್ರೇಮಕಥೆಯ ಸುಳಿವು ನೀಡುತ್ತದೆ. ರಾಜ ಮತ್ತು ಕಾಡಿನ ಜನರ ನಡುವಿನ ಯುದ್ಧ, ದೈವದ ಪ್ರವೇಶ ಹಾಗೂ ಅದ್ಭುತ ದೃಶ್ಯ ವೈಭವವಿದೆ. ಇದರ ನಡುವೆ ಇತ್ತೀಚೆಗೆ ನಿಧನ ಹೊಂದಿದ ರಾಕೇಶ್ ಪೂಜಾರಿ ನಟನಾ ದೃಶ್ಯವೂ ಸದ್ದು ಮಾಡುತ್ತಿದೆ.

ಕಾಂತಾರ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿ, ಮಧ್ಯದಲ್ಲಿ ಸ್ನೇಹಿತನ ಮದುವೆಗೆ ಹೋಗಿ ಡ್ಯಾನ್ಸ್ ಮಾಡುತ್ತಲೇ ಕುಸಿದುಬಿದ್ದು ಮೃತಪಟ್ಟ ಹಾಸ್ಯನಟ ರಾಕೇಶ್ ಪೂಜಾರಿಯನ್ನೂ ಟ್ರೇಲರ್‌ನಲ್ಲಿ ತೋರಿಸಲಾಗಿದೆ.
ಅಪ್ಪಯ್ಯ ಈ ಜಾಗದಲ್ಲಿ ಎಂತಕ್ಕೆ ಮಾಯವಾಗಿದ್ದು, ನಮ್ಮ ಹಿರಿಯರು ಇದ್ದಿದ್ದು ಇಲ್ಲೇ. ಅದೊಂದು ದೊಡ್ಡ ದಂತಕಥೆ ಎನ್ನುವ ಮೂಲಕ ಕಾಂತಾರದ ದೈವ ಕಾಣೆಯಾದ ಸ್ಥಳದಿಂದಲೇ ಟ್ರೇಲರ್ ಆರಂಭವಾಗುತ್ತದೆ.
ಧರ್ಮವನ್ನು ಕಾಪಾಡುವುದಕ್ಕೆ ಈಶ್ವರ ದೇವರು ಯಾವಾಗಲೂ ಗಣಗಳನ್ನು ಕಳಿಸುತ್ತಲೇ ಇರುತ್ತಾನೆ. ಈಶ್ವರ ಬಂದು ನೆಲೆಸಿದ್ದು ಈ ಪುಣ್ಯ ಭೂಮಿಯಲ್ಲಿ ಎಂಬ ಡೈಲಾಗ್ ದೈವದ ಹಿನ್ನೆಲೆಯ ಕಥಾಹಂತರವನ್ನು ಬಿಚ್ಚಿಡುತ್ತದೆ.
ಕಾಂತಾರದ ಒಳಗೆ ಯಾವತ್ತೂ ಹೋಗಬೇಡಿ ಎಂದು ರಾಜ ತನ್ನ ಮಕ್ಕಳಿಗೆ ಹೇಳುವ ದೃಶ್ಯವೂ ಇದೆ. ಇಲ್ಲಿ ಕಾಂತಾರ ಎನ್ನುವುದು ಒಂದು ದೊಡ್ಡ ಕೋಟೆಯಂತೆ ಇದ್ದು, ಅಲ್ಲಿಗೆ ಹೋದರೆ ಸಾವೇ ಗತಿ ಎನ್ನುವಂತೆ ತೋರಿಸಲಾಗಿದೆ.
ಕಾಂತಾರ ಲೆಜೆಂಡ್ ಚಾಪ್ಟರ್-1 ಟ್ರೇಲರ್‌ನಲ್ಲಿ ಎಲ್ಲಿಯೂ ಕಾಂತಾರದ ಸಪ್ತಮಿ ಗೌಡಳನ್ನು ತೋರಿಸಿಲ್ಲ. ಇಲ್ಲಿ ನಟಿಯಾಗಿ ರುಕ್ಮಿಣಿ ವಸಂತ ಅವರನ್ನು ತೋರಿಸಲಾಗಿದೆ. ರುಕ್ಮಿಣಿ ಥೇಟ್ ರಾಣಿಯಂತೆ ಸಿನಿಮಾದಲ್ಲಿ ಕಂಗೊಳಿಸಿದ್ದಾಳೆ.
ಕಾಂತಾರ ಕಾಡಿನ ಜನ:
ಕಾಂತಾರದ ಚಾಪ್ಟರ್ 1 ರುಕ್ಮಿಣಿ ವಸಂತ ಅವರ ಸುತ್ತಲೂ ಕಟ್ಟಿಕೊಳ್ಳುತ್ತದೆ. ಕಾಂತಾರ ನಾಡಿನ ಜನರ ನಾಯಕ ಹಾಗೂ ರಾಣಿಗೆ ಪ್ರೀತಿಯಾಗುತ್ತದೆ. ಅವರಿಬ್ಬರ ಪ್ರೀತಿಯಿಂದಲೇ ರಾಜ ಮತ್ತು ಕಾಂತಾರ ಕಾಡಿನ ಜನರ ನಡುವಿನ ಯುದ್ಧ ಆರಂಭವಾಗಲಿದೆ. ಇದರಲ್ಲಿ ದೈವದ ಪ್ರವೇಶ ಹೇಗೆ ಆಗಲಿದೆ ಎಂಬುದು ಕುತೂಹಲವಿದೆ.
ಇನ್ನು ಕರಾವಳಿ ತೀರದಲ್ಲಿ ವ್ಯಾಪಾರಿ ಕೇಂದ್ರವನ್ನು ಸ್ಥಾಪಿಸಿಕೊಂಡು ಅಲ್ಲಿ ಕಾಂತಾರ ನಾಡಿನ ಜನರನ್ನು ಒತ್ತೆಯಾಳುಗಳ ರೀತಿಯಲ್ಲಿ ಕೆಲಸ ಮಾಡಿಸಿಕೊಳ್ಳುತ್ತಾರೆ ಎಂಬ ದೃಶ್ಯವೂ ಕಂಡುಬರುತ್ತದೆ.
ಕಾಡಿನಲ್ಲಿ ಜನರ ಚಿತ್ರಣವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಕಾಡಿನ ಬಂಡೆಗಳ ಮೇಲೆ ನಿಂತ ನಾಯಕನ ಮುಂದೆ ಬೆಂಕಿಯ ಪಂಜಿ ಹಿಡಿದು ನಿಂತಿರುವ ಜನರು ಹಾಗೂ ಕಾಡಿನ ತಾತ್ಕಾಲಿಕ ತೂಗು ಸೇತುವೆ ಎಲ್ಲವೂ ಕಾಡಿನ ದೃಶ್ಯಗಳನ್ನು ಕಟ್ಟಿಕೊಟ್ಟಿದೆ.
ಹಾಲಿವುಡ್, ಬಾಲಿವುಡ್, ಕಾಲಿವುಡ್ ಸಿನಿಮಾದ ದೃಶ್ಯ ಶೈಲಿಗಳನ್ನು ಇಲ್ಲಿ ನೋಡಬಹುದು. ಬಾಹುಬಲಿ, ಪುಷ್ಪ, ಕೆಜಿಎಫ್ ರೀತಿಯ ಅನೇಕ ಸನ್ನಿವೇಶಗಳು ಈ ಕಥೆಯಲ್ಲಿ ಅಡಗಿವೆಯೇ ಎಂಬ ಅನುಮಾನ ಬಂದರೂ ಕಾಂತಾರದ ಕಥೆಯಲ್ಲಿಯೇ ಎಲ್ಲವೂ ಒಳಗೊಂಡಿವೆ ಎಂಬುದಂತೂ ಪಕ್ಕಾ ಆಗುತ್ತದೆ.
ರುಕ್ಮಿಣಿ-ರಿಷಬ್ ರೊಮ್ಯಾನ್ಸ್ ಕಾಂಬಿನೇಷನ್:
ಯುವರಾಣಿ ರುಕ್ಮಿಣಿ ಜೊತೆಗೆ ರಿಷಬ್ ಶೆಟ್ಟಿ ಅಭಿನಯ ಮಾತ್ರ ಅದ್ಭುತ ಕಾಂಬಿನೇಷನ್ ರೀತಿ ವರ್ಕ್ ಆಗಿದೆ. ಇಬ್ಬರ ಯುದ್ಧಕಲೆ ಪ್ರದರ್ಶನ, ರೊಮ್ಯಾನ್ಸ್, ಬೀದಿಗಳಲ್ಲಿ ಹಾಗೂ ಕಾಡಿನಲ್ಲಿ ಸುತ್ತಾಡುವ ದೃಶ್ಯಗಳು ಪ್ರೇಕ್ಷಕರನ್ನು ಸೆಳೆಯುತ್ತವೆ.
ಯುದ್ಧದ ಭೀಕರತೆ:
ಕುಲಕ್ಕೆ ಅಂಟಿದ ರಕ್ತವನ್ನು ಕಾಂತಾರದ ಜನರ ರಕ್ತದಿಂದ ತೊಳೆಯುತ್ತೇವೆ ಎನ್ನುವ ಮಾತಂತೂ ಯುದ್ಧದ ಭೀಕರತೆಯನ್ನು ಹಾಗೂ ಕಾಡಿನ ಜನರನ್ನು ಮೃಗಗಳಂತೆ ಬೇಟೆ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ.
ಕಾಡಿನ ಜನರನ್ನು ನಾಶ ಮಾಡುತ್ತಾ ಕಾಡಿನ ದೈವಕ್ಕೆ ಅಪಮಾನ ಮಾಡಿದ ರಾಜರ ಸೈನ್ಯದ ವಿರುದ್ಧ ಹೋರಾಡುವುದಕ್ಕೆ ಹಾಗೂ ಕುತಂತ್ರಿಗಳನ್ನು ದಮನ ಮಾಡುವುದಕ್ಕೆ ಕಾಡಿನ ಜನರ ದೈವವೇ ಬೆಂಕಿಯಾಗಿ ಕಾಣಿಸಿಕೊಳ್ಳುತ್ತದೆ. ಈ ದೃಶ್ಯ ಮೈನವಿರೇಳಿಸುತ್ತದೆ.