ಯಶವಂತಪುರ ಮಾರುಕಟ್ಟೆ ದಾಸನಪುರ ಸ್ಥಳಾಂತರಕ್ಕೆ ಜೂನ್ 1 ಡೆಡ್‌ಲೈನ್, ಮಳೆ ತಂದ ತಿರುವು
ಯಶವಂತಪುರ ಎಪಿಎಂಸಿ ಅಂಗಡಿಗಳನ್ನು ದಾಸನಪುರಕ್ಕೆ ಸ್ಥಳಾಂತರ ಯೋಜನೆ ಮತ್ತೆ ಮುನ್ನಲೆಗೆ ಬಂದಿದೆ. ಮಳೆ ಮತ್ತು ಪ್ರವಾಹದಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಈ ಯೋಜನೆಯನ್ನು ಕಠಿಣವಾಗಿ ಜಾರಿಗೆ ತರಲು ನಿರ್ಧರಿಸಿದೆ.

ಬೆಂಗಳೂರು: ಕಳೆದ ಎರಡು ವರ್ಷಗಳ ಹಿಂದೆ ಯೋಜಿಸಲಾದ ಯಶವಂತಪುರ ಎಪಿಎಂಸಿ ಎಪಿಎಂಸಿಯಲ್ಲಿರುವ ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳನ್ನು ದಾಸನಪುರಕ್ಕೆ ಸ್ಥಳಾಂತರಿಸುವ ಯೋಜನೆ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಈ ಬಾರಿ, ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಚರಂಡಿಗಳು ತುಂಬಿ ಹರಿದ ಪರಿಣಾಮ ಪ್ರವಾಹ ಉಂಟಾಗಿದ್ದು, ಇದು ಸರ್ಕಾರಕ್ಕೆ ಹೊಸ ಅವಕಾಶವನ್ನೇ ಒದಗಿಸಿದೆ. ಈಗ ಈ ಯೋಜನೆಗೆ ಎಪಿಎಂಸಿ ಸಚಿವ ಶಿವಾನಂದ್ ಪಾಟೀಲ್ ಅವರು ಪೂರಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಈ ಹಿಂದೆ ವಿಫಲವಾದ ಸ್ಥಳಾಂತರ ಪ್ರಯತ್ನ
2017-18ರಲ್ಲೇ ಕೆಲ ವ್ಯಾಪಾರಿಗಳಿಗೆ ದಾಸನಪುರ ಎಪಿಎಂಸಿ ಯಾರ್ಡ್‌ನಲ್ಲಿ ಅಂಗಡಿಗಳನ್ನು ಮಂಜೂರು ಮಾಡಲಾಗಿತ್ತು. 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಮೊದಲು ಕೆಲ ವ್ಯಾಪಾರಿಗಳು ಅಲ್ಲಿ ಸ್ಥಳಾಂತರಗೊಂಡರೂ, ವ್ಯಾಪಾರ ಚಟುವಟಿಕೆಗಳಲ್ಲಿ ಕುಸಿತ ಕಂಡು, ಬಹುತೇಕರು ಮತ್ತೆ ಯಶವಂತಪುರಕ್ಕೆ ಮರಳಿದರು. ಇದರ ಪರಿಣಾಮವಾಗಿ ಸ್ಥಳಾಂತರ ಯೋಜನೆ ಬಹುತೇಕ ಸ್ಥಗಿತಗೊಂಡಿತ್ತು. ಸುಮಾರು 200ಕ್ಕೂ ಹೆಚ್ಚು ಅಂಗಡಿಗಳನ್ನು ಸ್ಥಳಾಂತರಿಸಲು ಸರ್ಕಾರ ಆದೇಶಿಸಿದ್ದರೂ ಅದು ವಿಫಲ ಕಾಣುತ್ತಲೇ ಇದೆ.
ಪ್ರವಾಹ, ತ್ಯಾಜ್ಯ, ಮತ್ತು ಭಾರಿ ಸಂಚಾರದ ಸಮಸ್ಯೆ
ಈ ವರ್ಷದ ಮಳೆಯ ಸಮಯದಲ್ಲಿ ಯಶವಂತಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತ್ಯಾಜ್ಯ ಆಹಾರದಿಂದ ಚರಂಡಿಗಳು ಮುಚ್ಚಿ ಪ್ರವಾಹ ಉಂಟಾಯಿತು. ಇದರಿಂದ ತೀವ್ರ ಟೀಕೆಗಳಿಗೆ ಒಳಗಾದ ಸರ್ಕಾರ, ಈಗ ತೀರ್ಮಾನವನ್ನು ಕಠಿಣವಾಗಿ ಜಾರಿಗೆ ತರಲು ನಿರ್ಧಾರ ತೆಗೆದುಕೊಂಡಿದೆ. ನಗರದೊಳಗೆ ಸಗಟು ಮಾರುಕಟ್ಟೆ ನಡೆಸುವುದು ಅನಗತ್ಯ, ದಾಸನಪುರಕ್ಕೆ ಸ್ಥಳಾಂತರ ಮಾಡಿದರೆ, ಗೋರಗುಂಟೆಪಾಳ್ಯ ಸೇರಿ ಹಲವಾರು ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ತಗ್ಗುತ್ತದೆ ಎಂದು ಸಚಿವ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ
ದಾಸನಪುರ – ಹೊಸ ಮಾರಾಟ ಕೇಂದ್ರದ ಸಿದ್ಧತೆ
ತುಮಕೂರು ರಸ್ತೆಯ ಮಾದನಾಯಕನಹಳ್ಳಿ ಬಳಿ ನಿರ್ಮಿತವಾಗಿರುವ ದಾಸನಪುರ ಎಪಿಎಂಸಿ ಉಪ-ಮಾರುಕಟ್ಟೆ ಯಾರ್ಡ್, ಈಗ ಕಡಾಖಂಡಿತವಾಗಿ ಓಪನ್ ಆಗಲಿದೆ. ಜೂನ್ 1ರೊಳಗೆ ಹೊಸ ಸ್ಥಳಾಂತರ ಆದೇಶ ಹೊರಡಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಇಲಾಖೆಯ ಮೂಲಗಳು ತಿಳಿಸಿವೆ. 310 ಅಂಗಡಿಗಳಲ್ಲಿ ಈಗಾಗಲೇ ಹಲವರು ತಾವು ಹೊರಡಲು ಸಜ್ಜುಮಾಡಿಕೊಳ್ಳುತ್ತಿದ್ದಾರಂತೆ.
ವ್ಯಾಪಾರಿಗಳ ಸಮಸ್ಯೆಗಳಿಗೆ ಪರಿಹಾರ
ಸ್ಥಳಾಂತರದ ಮೊದಲಿಗೆ ಅಡ್ಡಿಯಾಗಿದ್ದ ಪಾರ್ಕಿಂಗ್ ಸಮಸ್ಯೆಗೆ ಸರ್ಕಾರ ಪರಿಹಾರ ಕಂಡುಕೊಂಡಿದೆ. BMTC ಸಂಸ್ಥೆಯ 16 ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದು, ಟ್ರಕ್‌ಗಳು ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. "3 ಲಕ್ಷ ರೂ. ಶುಲ್ಕಕ್ಕೆ ನಾವು BMTC ಭೂಮಿಯನ್ನು ಬಳಸುತ್ತಿದ್ದೇವೆ. ವ್ಯಾಪಾರಿಗಳ ವಾಹನಗಳ ತೊಂದರೆ ಇಲ್ಲ," ಎಂದು ಪಾಟೀಲ್ ಹೇಳಿದ್ದಾರೆ.
ವ್ಯಾಪಾರಿಗಳ ಭಯಗಳು ಮತ್ತು ಅವರ ಸ್ಪಷ್ಟತೆ
ದಾಸನಪುರ ಎಪಿಎಂಸಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶ್ರೀರಾಮ ರೆಡ್ಡಿ ಅವರು ಮಾತನಾಡಿ, ಕೆಲ ಅಧಿಕಾರಿಗಳು ಅಂಗಡಿಗಳನ್ನು ಹಿಂದಿರುಗಿಸಲು ಒತ್ತಡ ಹೇರುತ್ತಿದ್ದರು. ಆದರೆ ಸರ್ಕಾರ ಈ ಸಮಸ್ಯೆಯನ್ನು ಇತ್ತೀಚೆಗಷ್ಟೆ ಬಗೆಹರಿಸಿದೆ ಎಂದಿದ್ದಾರೆ. ಸರ್ಕಾರ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಪಿ ಅವರನ್ನು ನಿಯೋಜನೆ ಮಾಡಿ ವ್ಯಾಪಾರಿಗಳೊಂದಿಗೆ ಸಭೆ ನಡೆಸಿ, ಅಧಿಕಾರಿಗಳಿಗೆ ಒತ್ತಡ ಹಾಕದಂತೆ ಸೂಚನೆ ನೀಡಲಾಗಿದೆ.
ಆರಂಭದಲ್ಲಿ ದಾಸನಪುರದಲ್ಲಿ ವ್ಯಾಪಾರ ಚೆನ್ನಾಗಿತ್ತು. ಆದರೆ ನಂತರ ಕುಸಿತವಾಯಿತು. ಅದರಿಂದ ಅನೇಕರು ಪುನಃ ಯಶವಂತಪುರಕ್ಕೆ ಮರಳಿದರು. ಈಗ ಪರಿಸ್ಥಿತಿ ಬದಲಾಗಿದೆ. ಎಲ್ಲಾ 310 ಅಂಗಡಿಗಳೂ ಮತ್ತೆ ಕಾರ್ಯನಿರ್ವಹಣೆಗೆ ಸಿದ್ಧವಾಗಿವೆ. ಈ ಸಲ ಸರ್ಕಾರ ಉತ್ಸಾಹದಿಂದ ಮುಂದಾಗಿದ್ದು, ವ್ಯಾಪಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ. ವ್ಯಾಪಾರದ ನಿರಂತರತೆ, ಸಂಚಾರ ಸುಗಮತೆ, ಮತ್ತು ನಗರ ಮರುಸಂರಚನೆಗೆ ಇದು ಒಂದು ಪ್ರಮುಖ ಹೆಜ್ಜೆಯಾಗಬಹುದು. ಮಳೆ ಮತ್ತು ಪ್ರವಾಹ ವಿಳಂಬಗೊಂಡ ಯೋಜನೆಗೆ ಹೊಸ ಉಸಿರು ನೀಡಿದೆ. ಈಗಾಲಾದರೂ ಯೋಜನೆ ಯಶಸ್ವಿಯಾಗಿ ಪೂರ್ಣಗೊಳ್ಳುವ ನಿರೀಕ್ಷೆಯಂತೂ ದಟ್ಟವಾಗಿದೆ.