ಗಂಡುಕಲೆ ಯಕ್ಷಗಾನದ ಹೆಣ್ಣು ಕಂಠ! ಮೊದಲ ಮಹಿಳಾ ಭಾಗವತೆ ಲೀಲಾವತಿ ಬೈಪಡಿತ್ತಾಯ ನಿಧನ
ಯಕ್ಷಗಾನ ಕ್ಷೇತ್ರದಲ್ಲಿ ಪ್ರಥಮ ವೃತ್ತಿಪರ ಮಹಿಳಾ ಭಾಗವತರಾಗಿ ಮೆರೆದ ಲೀಲಾವತಿ ಬೈಪಡಿತ್ತಾಯ (77) ನಿಧನರಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ತೆಂಕುದಿಟ್ಟು ಯಕ್ಷರಂಗದಲ್ಲಿ ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತರಾಗಿ ಮೆರೆದ ಲೀಲಾವತಿ ಬೈಪಡಿತ್ತಾಯ (77) ಡಿ.14ರಂದು ಕೆಲಕಾಲದ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಾಸರಗೋಡು ಜಿಲ್ಲೆಯ ಮಧೂರಿನಲ್ಲಿ 1947ನೇ ಮೇ.23ರಂದು ಜನಿಸಿದ ಲೀಲಾವತಿಯವರು ಗಂಡು ಕಲೆ ಎಂಬ ಯಕ್ಷಗಾನಕ್ಕೆ ಸಿಕ್ಕ ಹೆಣ್ಣು ಕಂಠ. ಹಿರಿಯ ಹಿಮ್ಮೇಳವಾದಕ ಹರಿನಾರಾಯಣ ಬೈಪಡಿತ್ತಾಯರ ಪತ್ನಿಯಾಗಿರುವ ಲೀಲಾವತಿ ಅವರು ಪತ್ರಕರ್ತ ಅವಿನಾಶ್ ಹಾಗೂ ಗುರುಪ್ರಸಾದ್ ಎಂಬ ಪುತ್ರರನ್ನು ಅಗಲಿದ್ದಾರೆ.
ಬೆಳ್ತಂಗಡಿಯಲ್ಲಿ ಅರುವ ನಾರಾಯಣ ಶೆಟ್ಟಿ ಅವರ ಅಳದಂಗಡಿ ಮೇಳದಲ್ಲಿ ಪತಿ ಹರಿನಾರಾಯಣ ಬೈಪಡಿತ್ತಾಯ ಅವರೊಂದಿಗೆ ಭಾಗವತಿಗೆ ಮಾಡಿ, ಯಕ್ಷಪ್ರೇಮಿಗಳನ್ನು ರಂಜಿಸಿದ್ದಾರೆ. ಯಕ್ಷ ರಂಗದ ಪ್ರಪ್ರಥಮ ಮಹಿಳಾ ಯಕ್ಷಗಾನ ಭಾಗವತೆ ಎಂಬ ಖ್ಯಾತಿ ಕೂಡ ಇವರದ್ದಾಗಿತ್ತು. ಕುಂಬಳೆ, ಬಪ್ಪನಾಡು, ಸುಬ್ರಹ್ಮಣ್ಯ, ಧರ್ಮಸ್ಥಳ, ತಲಕಳ, ಪುತ್ತೂರು, ಕದ್ರಿ, ಅಳದಂಗಡಿ ಮೇಳಗಳಲ್ಲಿ ನಿರಂತರ ಇಪ್ಪತ್ತು ವರ್ಷಗಳ ಕಾಲ ವೃತ್ತಿ ಕಲಾವಿದರಾಗಿಯೂ 17ಕ್ಕೂ ಹೆಚ್ಚು ವರ್ಷಗಳಿಂದ ಅತಿಥಿ ಕಲಾವಿದರಾಗಿಯೂ ಭಾಗವತಿಕೆ ಮಾಡಿದ ಹಿರಿಮೆ ಇದೆ.
ಲೀಲಾವತಿ ಅವರ ಕಲಾಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ 2010ನೇ ಕರ್ನಾಟಕದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2012ರಲ್ಲಿ ಕರ್ನಾಟಕ ಸರ್ಕಾರ ಕೊಡಮಾಡುವ ಸಾಧಕ ಹಿರಿಯ ನಾಗರಿಕರು ಪ್ರಶಸ್ತಿ, 2023ರಲ್ಲಿ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಅದು ನಾಲ್ಕು ದಶಕಗಳ ಹಿಂದಿನ ಕಾಲ. ಇರುಳಿನ ನೀರವ ಮೌನದಲ್ಲಿ ಚೆಂಡೆ ಸದ್ದಿನೊಂದಿಗೆ ಹೊಸ ಹೆಣ್ಣು ದನಿಯ ಭಾಗವತಿಕೆಯೂ ಮಾರ್ದನಿಸತೊಡಗಿತ್ತು. ತನ್ನ ದನಿಗೆ ಕುತೂಹಲ, ಉಡಾಫೆ, ವ್ಯಂಗ್ಯ, ಮೆಚ್ಚುಗೆ ಏಕಕಾಲದಲ್ಲಿ ಕಿವಿಗೆ ಬಿದ್ದಾಗ ಗುಬ್ಬಚ್ಚಿಯಂತೆ ಮುದುಡಿ ಕೇಳಿಸಿಕೊಳ್ಳುತ್ತಿದ್ದ ಆ ಹೆಣ್ಣು ಜೀವ ಬಳಿಕ ಯಕ್ಷ ಜಗತ್ತಿನಲ್ಲಿ ಏರಿದ ಎತ್ತರ ಸಾಮಾನ್ಯದ್ದಲ್ಲ. ಭಾಗವತಿಕೆಯಲ್ಲಿ ತನ್ನದೇ ಶೈಲಿ ಸೃಷ್ಟಿಸಿ, ನೂರಾರು ಮಕ್ಕಳಿಗೆ ಯಕ್ಷಗಾನ ಕಲಿಸಿ ಆ ಪರಂಪರೆಯನ್ನು ಮುಂದುವರಿಸಿದ್ದು ಈ ಹೆಣ್ಮಗಳ ಹೆಗ್ಗಳಿಕೆ. ಯಕ್ಷ ಜಗತ್ತಿನಲ್ಲಿ ‘ಲೀಲಮ್ಮ’ ಅಂತಲೇ ಪ್ರಸಿದ್ಧರಾದ ಲೀಲಾವತಿ ಬೈಪಡಿತ್ತಾಯರ ಆತ್ಮಕಥನ ಪುಟಗಳನ್ನು ತಿರುವುತ್ತಾ ಹೋದರೆ ಯಾವುದೋ ಕಾಲಕ್ಕೆ ಹೋದಂತೆ ಭಾಸವಾಗುತ್ತದೆ.
ಚಿಕ್ಕವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡು, ಅಜ್ಜಿಮನೆಯ ಬಡತನದ ನಡುವೆಯೇ ಶಾಲೆ ಕಲಿಯದೇ ಹಿಂದಿ ವಿಶಾರದ ಪರೀಕ್ಷೆಗಳನ್ನು ಪಾಸು ಮಾಡುತ್ತಾ, ಸಂಗೀತವನ್ನೂ ಕಲಿಯುತ್ತಾ, ಸಂಗೀತದಲ್ಲಿ ಹದ ಕಂಡುಕೊಳ್ಳುತ್ತಿರುವಾಗಲೇ ಗುರುಗಳಿಂದ ‘ಇನ್ನು ನೀನು ಬರುವುದು ಬೇಡ’ ಎಂದು ಹೇಳಿಸಿಕೊಂಡ ಹುಡುಗಿಗೆ ಮುಂದೆ ತಾನು ಬಹುದೊಡ್ಡ ಯಕ್ಷಗಾನ ಭಾಗವತೆಯಾಗಿ ಬೆಳೆಯುತ್ತೇನೆ ಅಂತ ಕನಸೂ ಬಿದ್ದಿರಲಿಕ್ಕಿಲ್ಲ. ಆದರೆ ಯಥಾರ್ಥದಲ್ಲಿ ಅದು ಆಯಿತು. ತಾನು ಬಹಳ ಪ್ರೀತಿಸುತ್ತಿದ್ದ ಸಂಗೀತ ಕ್ಷೇತ್ರದಲ್ಲಿ ಯಕ್ಷಗಾನ ಭಾಗವತಿಕೆಗೆ ಇವರು ಇಳಿದದ್ದೇ ಅಚ್ಚರಿಯ ಬೆಳವಣಿಗೆ.
ಚೆಂಡೆ ಮದ್ದಳೆ ವಾದಕರಾಗಿದ್ದ ಪತಿ ಹರಿನಾರಾಯಣ ಬೈಪಡಿತ್ತಾಯರ ಜೊತೆಗೆ ಸಂಜೆ ಮೇಲೆ ಸೈಕಲ್ಲೇರಿ ಯಕ್ಷಗಾನ ಆಟಗಳಿಗೆ ಹೋಗುತ್ತಿದ್ದದು, ಅಲ್ಲಿ ಇವರಿಗಾಗುತ್ತಿದ್ದ ಅನುಭವಗಳನ್ನೆಲ್ಲ ಈ ಕೃತಿಯಲ್ಲಿ ಆಪ್ತವಾಗಿ ನಿರೂಪಿಸಲಾಗಿದೆ. ಹೆಣ್ಣು ಜಗತ್ತು ದೂರವೇ ಉಳಿದಿದ್ದ ಯಕ್ಷಗಾನದಲ್ಲಿ ಲೀಲಾವತಿ ಬೈಪಡಿತ್ತಾಯರ ಹದವಾದ ದನಿ ಹರಿಯುತ್ತಲೇ ಹೋದದ್ದು, ಅದರ ವಿಸ್ತಾರ ಹೆಚ್ಚುತ್ತಲೇ ಹೋದ ಬಗೆಯನ್ನು ಓದುತ್ತಲೇ ತಿಳಿದರೆ ಚೆಂದ. ಅನೇಕ ಕಾರಣಗಳಿಗೆ ಓದಲೇ ಬೇಕಾದ ಪುಸ್ತಕ ಯಕ್ಷಗಾನ ಲೀಲಾವಳಿ.
ಹೆಣ್ಣು ಮಕ್ಕಳಿಗೆ ಯಕ್ಷಗಾನ ನೋಡುವುದಕ್ಕೂ ಅವಕಾಶವಿಲ್ಲದ ಸಂಪ್ರದಾಯವಿದ್ದ ಆ ಕಾಲದಲ್ಲಿ ತೆಂಕು ತಿಟ್ಟಿನ ಅಗ್ರಮಾನ್ಯ ಭಾಗವತರಲ್ಲೊಬ್ಬರಾಗಿ ಅವರು ಬೆಳೆದುದು ಮಾತ್ರವಲ್ಲ ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಇಂದು ಕರಾವಳಿಯಲ್ಲಿ ಅನೇಕ ಹೆಣ್ಣು ಮಕ್ಕಳು ಭಾಗವತರಾಗಿ ಇಂದು ಗುರುತಿಸಿಕೊಳ್ಳಲು ಸ್ಫೂರ್ತಿಯಾಗಿದ್ದಾರೆ.