ಶಿಲ್ಪಾ ಶೆಟ್ಟಿ ದಂಪತಿಯಿಂದ ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಡುಗೆ!
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ ಚಿಕ್ಕಮಗಳೂರಿನ ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ರೋಬೋಟಿಕ್ ಆನೆ ನೈಜ ಆನೆಯಂತೆ ಕಾಣುತ್ತದೆ ಮತ್ತು ಚಲಿಸುತ್ತದೆ.
ಚಿಕ್ಕಮಗಳೂರು (ಡಿ.15): ಬಾಲಿವುಡ್ ಸ್ಟಾರ್ ದಂಪತಿ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರು ಚಿಕ್ಕಮಗಳೂರು ಜಿಲ್ಲೆಯ ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಡುಗೆಯನ್ನು ಕೊಟ್ಟಿದ್ದಾರೆ.
ಹೌದು, ಚಿಕ್ಕಮಗಳೂರು ಜಿಲ್ಲೆಯ ನಾರಾಯಣಪುರ ತಾಲೂಕಿನ ಭದ್ರಾ ನದಿ ತಟದಲ್ಲಿರುವ ರಂಭಾಪುರಿ ಮಠಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರಿಂದ ಆನೆ ಕೊಡುಗೆ ನೀಡಿದ್ದಾರೆ. ಇದು ರೋಬೋಟಿಕ್ ಆನೆಯಾಗಿದ್ದು, ನೋಡುವುದಕ್ಕೆ ಯಥಾವತ್ತಾಗಿ ರಿಯಲ್ ಆನೆಯಂತೆಯೇ ಕಾಣಿಸುತ್ತದೆ. ಸದಾ ಕಿವಿ, ತಲೆ, ಸೊಂಡಿಲು ಹಾಗೂ ಬಾಲವನ್ನ ಅಲುಗಾಡಿಸುತ್ತಿರುತ್ತದೆ. ನೋಡಲು ದೈತ್ಯ ಗಾತ್ರದಾಗಿದ್ದು, ಸದಾ ಆಕ್ಟೀವ್ ಆಗಿರುವ ಈ ಆನೆಯನ್ನು ನೋಡಿದವರಿಗೆ ಜೀವಂತ ಆನೆಯೇ ಇಲ್ಲಿ ನಿಂತುಕೊಂಡಿದೆ ಎಂಬಂತೆ ಭಾಸವಾಗಿತ್ತದೆ.
ಇನ್ನು ದೇಶದ ಪಂಚಪೀಠಗಳಲ್ಲೇ ಮೊದಲ ಪೀಠವಾದ ರಂಭಾಪುರಿ ಮಠವು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿದೆ. ಈ ಮಠದ ಭಕ್ತರಾಗಿರುವ ಬಾಲವುಡ್ ನಟಿ ಶಿಲ್ಪಾ ಶೆಟ್ಟಿ ದಂಪತಿ ಆಗಿಂದಾಗ್ಗೆ ಮಠಕ್ಕೆ ಭೇಟಿ ನೀಡಿದ್ದಾರೆ. ಇದೀಗ ಒಂದು ಸಂಕಲ್ಪವನ್ನು ಮಾಡಿಕೊಂಡು ಮಠಕ್ಕೆ ರೋಬಾಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಇನ್ನು ನೈಸರ್ಗಿಕ ಆನೆಯನ್ನು ನೀಡುವುದಕ್ಕೆ ಹಲವು ನಿಯಮಗಳು ಅಡ್ಡಿ ಬರುವ ಹಿನ್ನೆಲೆಯಲ್ಲಿ ಇದೀಗ ರೋಬೋಟಿಕ್ ಆನೆ ದಾನ ನೀಡುವವರ ಸಂಖ್ಯೆಯೂ ಹೆಚ್ಚಾಗಿದೆ. ಕರ್ನಾಟಕದಲ್ಲಿ ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿಯೂ ರೋಬೋಟಿಕ್ ಆನೆಯಿದೆ.