ಜೈಲಿಂದ ಹೊರಗೆ ಬಂದವರೇ ಸಚಿವ ಜಮೀರ್ ಮನೆಗೆ ಹೋಗಿ ತಬ್ಬಿಕೊಂಡ ಮಾಜಿ ಸಚಿವ ನಾಗೇಂದ್ರ!
ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಬಿ.ನಾಗೇಂದ್ರ ಜೈಲಿನಿಂದ ಬಿಡುಗಡೆಯಾದ ಬಳಿಕ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿಯಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಸ್ ಐಟಿ ತನಿಖೆ ನಡೆಸಿದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಹೆಸರು ಹೇಳುವಂತೆ ಇಡಿ ಒತ್ತಡ ಹಾಕುತ್ತಿತ್ತು ಎಂದು ಆರೋಪಿಸಿದ್ದಾರೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು ಮೂರು ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿ ಮಾಜಿ ಸಚಿವ ಬಿ.ನಾಗೇಂದ್ರ ಅವರು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಮರುಕ್ಷಣವೇ ಸಚಿವ ಜಮೀರ್ ಅಹಮದ್ ಖಾನ್ ಅವರ ಮನೆಗೆ ತೆರಳಿದ್ದಾರೆ. ಅಲ್ಲಿ ಇಬ್ಬರೂ ಸಂತಸದಿಂದ ತಬ್ಬಿಕೊಂಡು ಕುಶಲೋಪರಿ ವಿಚಾರಣೆ ಮಾಡಿಕೊಂಡಿದ್ದಾರೆ.
ಸಚಿವ ಜಮೀರ್ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಬಿ.ನಾಗೇಂದ್ರ ಅವರು, ಕಳೆದಮೂರು ತಿಂಗಳಿದ ದುಷ್ಟ ರಾಜಕೀಯ ಮಾಡಿಕೊಂಡು ಬಿಜೆಪಿಯವರು ಬರ್ತಾ ಇದ್ದಾರೆ. ಬಿಜೆಪಿ ಇಡಿಯನ್ನ ಕೈ ಗೊಂಬೆ ಮಾಡಿಕೊಂಡಿದ್ದಾರೆ. ಎಲ್ಲಿ ಬಿಜೇಪಿಯೇತರ ಸರ್ಕಾರ ಇರುತ್ತದೋ, ಅಲ್ಲಿ ಸರ್ಕಾರವನ್ನ ತೆಗೆಯುವ ಪ್ರಯತ್ನ ಮಾಡಿದ್ತಿದ್ದಾರೆ. ಮೂರು ತಿಂಗಳಿಂದ ಜೈಲಿನಲ್ಲಿ ಇದ್ದೆ. ಇವತ್ತು ನ್ಯಾಯಾಧೀಶರು ಬಿಡುಗಡೆ ಮಾಡಿದ್ದಾರೆ. ಇವತ್ತು ಬಿಜೆಪಿ 66 ಜನ ಶಾಸಕರಿದ್ದಾರೆ. ಮುಂದೆ ಅದು ಇನ್ನು ಕಡಿಮೆ ಆಗುತ್ತದೆ ಎಂದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ತರ್ತಿದ್ದಾರೆ. ಅವರಿಗೆ ಸಂಧಿಗ್ಧ ಪರಿಸ್ಥಿತಿ ತರ್ತಾ ಇದ್ದಾರೆ. ನ್ಯಾಯ ಅನ್ನೋದು ಇರುತ್ತೆ, ನಮ್ಮ ಪಾತ್ರ ಏನು ಇಲ್ಲ. ಮುಡಾದಲ್ಲೂ ಸಹ ಸಿಎಂ ಅವರ ಪಾತ್ರ ಇಲ್ಲ. ಜಾರಿ ನಿರ್ದೇಶನಾಲಯ (ಇಡಿ) ಅವರು ಒತ್ತಡ ಹಾಕ್ತಾ ಇದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಹೆಸರು ಹೇಳು ಡಿಸಿಎಂ ಹೆಸರು ಹೇಳಿ, ಅವರ ಇವರ ಹೆಸರು ಹೇಳುವಂತೆ ಒತ್ತಡ ಹಾಕುತ್ತಿದ್ದರು. ಸರ್ಕಾರವನ್ನ ಅಸ್ಥಿರ ಮಾಡೋ ಕೆಲಸ ಮಾಡ್ತಾ ಇದ್ದರು. ಮುಂದಿನ ದಿನಗಳಲ್ಲಿ ನೀವೆಲ್ಲರೂ ಸಾಕ್ಷಿ ಆಗ್ತೀರಾ. ಈ ಕೇಸ್ ಬಿದ್ದು ಹೋಗುತ್ತದೆ ಎಂದು ನಾಗೇಂದ್ರ ಹೇಳಿದರು.
ಟೈಗರ್ ಈಸ್ ಬ್ಯಾಕ್ ಅವರ ನೇತೃತ್ವದಲ್ಲೇ ಸಂಡೂರು ಚುನಾವಣೆ: ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಕೇಸನ್ನು ಎಸ್ ಐಟಿ ತನಿಖೆಗೆ ಕೊಡಲಾಗಿತ್ತು. ಎಲ್ಲಾ ಹಣವನ್ನ ಎಸ್ ಐಟಿ ರಿಕವರಿ ಮಾಡಿದೆ. ಇನ್ನು 3.80 ಲಕ್ಷ ರಿಕವರಿ ಆಗಬೇಕಿದೆ. ಇಡಿಯವರು ಚಾರ್ಜ್ ಶೀಟ್ ಹಾಕಿದ್ದಾರೆ. ಬೈ ಎಲೆಕ್ಷನ್ ಗೆ ನಾಗೇಂದ್ರ ಕರೆದುಕೊಂಡು ಹೋಗ್ತಿರಾ ಎಂಬ ಪ್ರಶ್ನೆ ಬಗ್ಗೆ ಮಾತನಾಡಿ, ಅವರೇ ಎಲೆಕ್ಷನ್ ಮಾಡಬೇಕು. ಟೈಗರ್ ಈಸ್ ಬ್ಯಾಕ್, ಅವರ ನೇತೃತ್ವದಲ್ಲೆ ಚುನಾವಣೆಯಾಗುತ್ತದೆ ಎಂದು ಹೇಳಿದರು.
ಸಂಡೂರಲ್ಲಿ ರಾಮುಲು ಅಲ್ಲ ಮೋದಿ ಬಂದು ನಿಂತುಕೊಳ್ಳಲಿ ನಾವು ಇಲ್ಲಿ ಖಚಿತವಾಗಿ ಗೆಲ್ಲುತ್ತೇವೆ. ಸಂಡೂರು ಅಭ್ಯರ್ಥಿಯನ್ನ ಶೀಘ್ರದಲ್ಲೇ ಫೈನಲ್ ಮಾಡ್ತೀವಿ. ಶಿಗ್ಗಾಂವಿಯಲ್ಲಿ ಅಲ್ಪಸಂಖ್ಯಾತರ ಪ್ರಾಬಲ್ಯ ಇದೆ. ಕಳೆದ ಐದಾರು ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಲಾಗಿದೆ. ಈ ಬಾರಿಯೂ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡ್ತೀವಿ. ಚನ್ನಪಟ್ಟಣದಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ. ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಮಾಡೋದು ಅವರ ಪಕ್ಷಕ್ಕೆ ಬಿಟ್ಟದ್ದು. ಯೋಗೇಶ್ವರ್ ಕಾಂಗ್ರೆಸ್‌ಗೆ ಕರೆತರುವ ಬಗ್ಗೆ ಆಲೋಚನೆ ಇಲ್ಲ. ಅಲ್ಲಿ ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಎಂದು ಸಚಿವ ಜಮೀರ್ ಹೇಳಿದರು.