ಮೈಕ್ರೋ ಫೈನಾನ್ಸ್ ಸಾಲದ ಶೂಲ; ಯಶಸ್ವಿ ರೈತನ ಕುಟುಂಬವಾಯ್ತು ಬೀದಿ ಪಾಲು
ಚಾಮರಾಜನಗರದ ಬೂದಿತಿಟ್ಟು ಗ್ರಾಮದ ನಂಜಶೆಟ್ಟಿ ಅವರು ಅಡಿಕೆ ವ್ಯಾಪಾರಕ್ಕಾಗಿ ಖಾಸಗಿ ಫೈನಾನ್ಸ್‌ನಿಂದ ಸಾಲ ಪಡೆದಿದ್ದರು. ಕೋವಿಡ್ ಸಮಯದಲ್ಲಿ ವ್ಯಾಪಾರ ನಷ್ಟದಿಂದಾಗಿ ಸಾಲ ತೀರಿಸಲಾಗದೆ ಮನೆ ಜಪ್ತಿಯಾಗಿ ಬೀದಿಗೆ ಬಿದ್ದಿದ್ದಾರೆ.

ಚಾಮರಾಜನಗರ (ಏ.27): ಚಿಕ್ಕ ಹಳ್ಳಿಯಲ್ಲಿ ಅಡಿಕೆ ವ್ಯಾಪಾರದ ಮೂಲಕ ಒಳ್ಳೆ ಹೆಸರು ಕುಟುಂಬ ಇವರದ್ದು. ಉದ್ಯಮವನ್ನ ಇನ್ನಷ್ಟು ಹೆಚ್ಚಿಸುವ ಸಲುವಾಗಿ ಖಾಸಗಿ ಫೈನಾನ್ಸ್ ನಿಂದ ಸಾಲ ಪಡೆದಿದ್ದರು. ಆದರೆ, ಕೋವಿಡ್‌ನ ಪರಿಣಾಮ ಆದಾಯವಿರಲಿ ಹೂಡಿಕೆ ಮಾಡಿದ ಹಣವೂ ವಾಪಸ್ ಸಿಗದೇ ಭಾರೀ ನಷ್ಟವನ್ನು ಅನುಭವಿಸಿದರು. ಈಗ ಸಾಲದ ಶೂಲಕ್ಕೆ ಮನೆಯನ್ನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಯಶಸ್ವಿ ರೈತ ಈಗ ಬೀದಿಗೆ ಬಿದ್ದಿರುವ ದುರಂತ ಕಥೆ ಇಲ್ಲಿದೆ ನೋಡಿ.
ಇಲ್ಲಿ ನೀವು ನೋಡುತ್ತಿರುವ ಸೀಲ್ ಹಾಕಿ ಬಂದ್ ಮಾಡಿರುವ ಬಾಗಿಲು, ಜಪ್ತಿಯಾದ ಮನೆಯ ಮುಂದೆ ವಾಸ, ಸಹಾಯಕ್ಕಾಗಿ ಹಾತೊರೆಯುತ್ತಿರೊ ಕಂಗಳು, ಅಸಾಯಕವಾಗಿ ಕುಳಿತಿರೊ ವೃದ್ಧ ದಂಪತಿ ಎಲ್ಲಾ ದೃಶ್ಯಗಳನ್ನು ಗಡಿ ನಾಡು ಚಾಮರಾಜನಗರದಲ್ಲಿ ನೋಡುತ್ತಿದ್ದೀರಿ. ಚಾಮರಾಜನಗರ ತಾಲೂಕಿನ ಬೂದಿತಿಟ್ಟು ಗ್ರಾಮದ ನಂಜಶೆಟ್ಟಿಯವರ ದುರಂತ ಕಥೆಯಿದು.
ಅಡಿಕೆ ವ್ಯಪಾರಕ್ಕಾಗಿ ನಂಜಶೆಟ್ಟಿ ಇಕ್ವಿಟಿ ಫೈನಾನ್ಸ್ ಕಂಪನಿಯಿಂದ 6 ಲಕ್ಷ ರೂ. ಸಾಲ ಪಡೆದಿದ್ದರು. ಪ್ರತಿ ತಿಂಗಳು 16 ಸಾವಿರ ಕಂತಿನ ಹಣವನ್ನ ಸರಿಯಾಗಿಯೆ ಕಟ್ಟುತ್ತಿದ್ದರು. ಆದರೆ, ಕೋವಿಡ್ ಬಂದ ಕಾರಣ ಲಾಕ್ ಡೌನ್ ಆಗಿ ತಮ್ಮ ವ್ಯಪಾರ ಸಂಪೂರ್ಣ ನಷ್ಟವಾಗಿದೆ. ಇದರ ಪರಿಣಾಮ ಸಾಲ ಮರು ಪಾವತಿ ಮಾಡದ ಕಾರಣ ಮನೆಯನ್ನ ಜಪ್ತಿ ಮಾಡಲಾಗಿದ್ದು, ಈಗ ಮನೆ ಕಳೆದುಕೊಂಡು ಅಂಗಳದಲ್ಲಿ ವಾಸ ಮಾಡುತ್ತಿದ್ದಾರೆ.
ಇವರ ದಯನೀಯ ಪರಿಸ್ಥಿತಿ ಹೇಗಿದೆ ಎಂದರೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸೋಕೆ ವಕೀಲರನ್ನ ನೇಮಕ ಮಾಡುವುದಕ್ಕು ಹಣವಿಲ್ಲದಂತ ಪರಿಸ್ಥಿತಿಗೆ ಸಿಲುಕಿದ್ದಾರೆ. ಯಾವಾಗ ಫೈನಾನ್ಸ್ ಕಂಪನಿಯವರು ಮನೆ ಜಪ್ತಿ ಮಾಡಿದರೋ ಆಗ ಸೊಸೆ ಮಗ ಹಾಗೂ ಮೊಮ್ಮಗನನ್ನ ಇಲ್ಲೇ ಬಿಟ್ಟು ತವರುಮನೆ ಹೋಗಿ ಸೇರಿದ್ದಾಳೆ. ಈಗ ವೃದ್ಧೆ ನೀಲಮ್ಮಳೆ ಕೂಲಿ ಕೆಲಸವನ್ನು ಮಾಡಿಕೊಂಡು ಇತ್ತ ಮನೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಈಗಾಗಲೇ ಸಂತ್ರಸ್ತ ರೈತರು ಜಿಲ್ಲಾಡಳಿತದ ಮೊರೆ ಹೋಗಿರುವ ನಂಜಶೆಟ್ಟಿ ಕಾನೂನು ಪ್ರಾಧಿಕಾರದ ಮೂಲಕ ಓರ್ವ ವಕೀಲನನ್ನ ನೇಮಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ. ಇನ್ನು ಸಾಲದ ಬಡ್ಡಿಯನ್ನ ಕಡಿಮೆ ಮಾಡಿ ಮರು ಪಾವತಿ ಮಾಡಲು ಸಮಯವಕಾಶ ಕೋರಿದ್ದಾರೆ. ಒಟ್ಟಾರೆ, ರೈತನೊಬ್ಬ ಮಾಡಿದ ಸಾಲ ತೀರಿಸಲಾಗದೆ ಸ್ವಂತ ಮನೆಯಿಂದ ಆಚೆ ಬಂದು ಅಜ್ಞಾತವಾಸ ಅನುಭವಿಸುತ್ತಿರುವ ಇವರಿಗೆ ಜಿಲ್ಲಾಡಳಿತದ ಸಹಾಯದ ಹಸ್ತ ಬೇಕಿದೆ.
ವರದಿ - ಪುಟ್ಟರಾಜು. ಆರ್. ಸಿ., ಏಷ್ಯಾನೆಟ್ ಸುವರ್ಣ ನ್ಯೂಸ್