ಹೊಸ ವರ್ಷಕ್ಕೆ ಮದ್ಯದ ಪಾರ್ಟಿಗೆ ಪ್ಲಾನ್ ಹಾಕಿರೋರು ಹುಷಾರ್; ನಕಲಿ ಬ್ರಾಂಡೆಡ್ ಮದ್ಯ ತಯಾರಿಸೋ ಗ್ಯಾಂಗ್ ಪತ್ತೆ!
ಹೊಸ ವರ್ಷಕ್ಕೆ ಡಾಬಾಗಳಲ್ಲಿ, ಹೊರ ವಲಯದ ಹೊಟೇಲ್ ಗಳಲ್ಲಿ ಮದ್ಯದ ಪಾರ್ಟಿಗೆ ಪ್ಲಾನ್ ಹಾಕಿಕೊಂಡವರು ಈ ಸ್ಟೋರಿಯನ್ನ ಸಂಪೂರ್ಣವಾಗಿ ಓದಿ. ಸ್ವಲ್ಪ ಯಾಮಾರಿದ್ರೆ ನಿಮಗೆ ಈ ಗ್ಯಾಂಗ್ ನಕಲಿ ಲಿಕ್ಕರ್ ಕುಡಿಸಿ ಬಿಡುತ್ತೆ. ಯಾಕಂದ್ರೆ ಅಸಲಿ ಬ್ರಾಂಡೆಡ್ ಕಂಪನಿಗಳ ನಕಲಿ ಮದ್ಯ ತಯಾರಿಸುತ್ತಿದ್ದ ಗ್ಯಾಂಗ್ ಸಿಕ್ಕಿಬಿದ್ದಿದ್ದು, ಖದೀಮರ ನಕಲಿ ದಂಧೆಯನ್ನ ಕಂಡು ಸ್ವತಃ ಅಬಕಾರಿ ಪೊಲೀಸರೇ ಗಾಭರಿ ಬಿದ್ದಿದ್ದಾರೆ.
-ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಅಸಲಿ ಬ್ರಾಂಡ್ ಹೋಲುವ ನಕಲಿ ಮದ್ಯ ಪತ್ತೆ!
ಹೌದು, ಹೊಸ ವರ್ಷಕ್ಕೆ ಮದ್ಯದ ಪಾರ್ಟಿ ಮಾಡಲು ಹೊರಟವರಿಗೆ ಇದೊಂದು ಶಾಕಿಂಗ್ ಸುದ್ದಿ. ಹೊಸ ವರ್ಷ ಬಂದಾಗ ಯುವಕರು, ಮದ್ಯ ಪ್ರೀಯರು ಮದ್ಯದ ಪಾರ್ಟಿಗಳನ್ನ ಆಯೋಜಿಸೋದು ಕಾಮನ್. ಅದ್ರಲ್ಲು ಜಿಲ್ಲಾ, ಗ್ರಾಮೀಣ ಪ್ರದೇಶಗಳಲ್ಲಿ ಡಾಬಾ ಅಥವಾ ನಗರ ಹೊರ ವಲಯಗಳ ಹೊಟೇಲ್ ಗಳಲ್ಲಿ ಮದ್ಯದ ಪಾರ್ಟಿ ಆಯೋಜಿಸ್ತಾರೆ. ಆಗ ನಟ್ಟ ನಡುರಾತ್ರಿ ನಡೆಯೋ ಪಾರ್ಟಿಯಲ್ಲಿ ಬ್ರಾಂಡೆಡ್ ಮದ್ಯದ ಹೊಳೆಯೆ ಹರಿಯುತ್ತೆ. ಆದ್ರೆ ವಿಜಯಪುರ ಜಿಲ್ಲೆಯಲ್ಲಿ ಅದೊಂದು ಗ್ಯಾಂಗ್ ಹೊಸ ವರ್ಷಕ್ಕೆ ಬ್ರಾಂಡೆಡ್ ಕಂಪನಿಗಳ ನಕಲಿ ಮದ್ಯದ ಬಾಟಲ್ ಗಳನ್ನ ತಯಾರಿಸಿ ಹಂಚಲು ರೆಡಿಯಾಗಿತ್ತು. ಅಷ್ಟರಲ್ಲೆ ಸಿಂದಗಿ ಅಬಕಾರಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಇಡೀ ನಕಲಿ ಮದ್ಯ ತಯಾರಿಸೋ ಗ್ಯಾಂಗ್ ಸಿಕ್ಕಿಬಿದ್ದಿದೆ..
ಸಿಂದಗಿಯಲ್ಲಿ ನಕಲಿ ಮದ್ಯ ತಯಾರಿಕಾ ಅಡ್ಡೆ!
ಜಿಲ್ಲೆಯ ಸಿಂದಗಿ ಹೊರ ವಲಯದಲ್ಲಿ ನಕಲಿ ಮದ್ಯ ತಯಾರಿಸೋ ಅಡ್ಡೆ ಹುಟ್ಟಿಕೊಂಡಿತ್ತು. ಸಿಂದಗಿ ಅಮೋಘಸಿದ್ದ ಹೂಗಾರ್ ಎಂಬುವವರ ಜಮೀನಿನಲ್ಲಿ ಹುಬ್ಬಳ್ಳಿಯ ಕಮರಿಪೇಟೆಯಿಂದ ಬಂದಿದ್ದ ಐವರು ದಂಧೆಕೋರರು ನಕಲಿ ಬ್ರಾಂಡೆಡ್ ಮದ್ಯ ತಯಾರಿಕೆಯಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಆಧರಿಸಿ ಅಬಕಾರಿ ಆಯುಕ್ತ ವೀರಣ್ಣ ಬಾಗೇವಾಡಿ ನೇತೃತ್ವದಲ್ಲಿ ರೇಡ್ ಮಾಡಿದ ಸಿಂದಗಿ ಅಬಕಾರಿ ಅಧಿಕಾರಿ ಶಿವಾನಂದ ಹೂಗಾರ್, ವಿಜಯಪುರ ಅಬಕಾರಿ ನಿರೀಕ್ಷಕ ಮಹಾದೇವ ಪೂಜಾರಿ ಒಟ್ಟು ಐವರು ಖದೀಮರನ್ನ ಬಂಧಿಸಿದ್ದಾರೆ. ಜಮೀನು ಮಾಲಿಕ ಅಮೋಘಸಿದ್ದ, ಹುಬ್ಬಳ್ಳಿಯ ಕೃಷ್ಣಾ ಬಾಂಡಗೆ, ಅಕ್ಷಯ ಜಾಧವ, ಅಭೀಷೇಕ್, ನಾಗರಾಜ್, ವಿನಾಯಕ್ ಬಂಧಿತ ಆರೋಪಿಗಳು.
ಸರ್ಕಾರದ ಹಾಲೊಗ್ರಾಮ್ ಸಹ ನಕಲಿ, ಕಳಪೆ ಸ್ಪಿರಿಟ್!
ಇನ್ನು ನಕಲಿ ಬ್ರಾಡೆಂಡ್ ಮದ್ಯ ತಯಾರಿಕೆಗೆ ಈ ಖದೀಮರು ಸೆಕೆಂಡ್ ಹ್ಯಾಂಡ್ ಬ್ರಾಂಡೆಡ್ ಮದ್ಯದ ಬಾಟಲಿ ಸಂಗ್ರಹಿಸುತ್ತಿದ್ದರು. ಅಸಲಿಯಂತೆ ಕಾಣುವ ನಕಲಿ ಸ್ಟಿಕ್ಕರ್, ನಕಲಿ ಸೀಲ್, ಸರ್ಕಾರಿ ಹಾಲೊಗ್ರಾಮ್ ಸಹಿತ ನಕಲಿ ತಯಾರಿಸಿ ಈ ಮೂಲಕ ಬ್ರಾಂಡೆಡ್ ಮದ್ಯದ ಬಾಟಲಿಗಳನ್ನ ತಯಾರಿಸುತ್ತಿದ್ದರು.. ಇದ್ರಲ್ಲಿ ಕಳಪೆ ಮಟ್ಟದ ಸ್ಪೀರಿಟ್, ಕಳಪೆ ಕಲರ್, ವಾಸನೆಗೆ ಕಳಪೆ ಪ್ಲೇವರ್ ಸಹ ಬಳಕೆ ಮಾಡ್ತಿದ್ರು ಎನ್ನುವ ಅಂಶಗಳು ಬಯಲಾಗಿವೆ..
ನಕಲಿ ಬ್ರಾಂಡ್ ಗುರುತಿಸೋದೆ ಸವಾಲು!
ಈ ಗ್ಯಾಂಗ್ ಮಾರ್ಕೆಟ್ ನಲ್ಲಿ ಹೆಚ್ಚೆಚ್ಚು ಮಾರಾಟವಾಗುವ, ಜನಪ್ರೀಯ ಬ್ರಾಂಡ್ ಗಳ ಮದ್ಯವನ್ನೆ ಡುಪ್ಲಿಕೇಟ್ ಮಾಡಿದ್ದಾರೆ. ಎಂ ಸಿ ಮೆಗ್ಡಾಲ್ ನಂ1 ಹಾಗೂ ಇಂಪಿರಿಯಲ್ ಬ್ಲೂ ಬ್ರಾಂಡ್ ಗಳನ್ನ ನಕಲಿ ಬಾಟಲ್ ತಯಾರಿಸಿದ್ದಾರೆ. ಗುವಾಹಟಿಯಿಂದ ಎರಡು ಕಂಪನಿಗಳ ನಕಲಿ ಸ್ಟಿಕ್ಕರ್, ಸೀಲ್, ಕರ್ನಾಟಕ ಸರ್ಕಾರದ ಹೋಲೊಗ್ರಾಮ್ ಸಹಿತವಾಗಿ ನಕಲಿ ತಯಾರಿಸಿ ನಕಲಿ ಬಟಲ್ ರೆಡಿ ಮಾಡಿದ್ದಾರೆ. ಇನ್ನೂ ಈ ಮದ್ಯದ ಬಾಟಲ್ ಗಳನ್ನ ನೋಡಿದ್ರೆ ಯಾವುದು ಅಸಲಿ, ಯಾವುದು ನಕಲಿ ಎನ್ನುವುದನ್ನ ಗುರುತಿಸೋದೆ ಸವಾಲು ಎನ್ನುವಂತಾಗಿದೆ. ಹೀಗಾಗಿ ಮದ್ಯದ ಬಾಟಲ್ ಗಳು ಮಾರ್ಕೆಟ್ ಪ್ರವೇಶಿಸಿದ್ರೆ ಮದ್ಯಪ್ರೀಯರಿಗೆ ಕಂಟಕ ಎನ್ನಲಾಗ್ತಿದೆ.. ಈಗಾಗಲೇ ಬಂಧಿತರಿಂದ ಬ್ರಾಂಡೆಡ್ ಕಂಪನಿಗಳ ನಕಲಿ ಸ್ಟಿಕ್ಕರ್, ನಕಲಿ ಬಾಟಲ್, ನಕಲಿ ಸರ್ಕಾರಿ ಹಾಲೋಗ್ರಾಮ್ ಗಳನ್ನ ವಶಕ್ಕೆ ಪಡೆದು ಖದೀಮರನ್ನ ದರ್ಗಾ ಜೈಲಿಗೆ ಕಳುಹಿಸಲಾಗಿದೆ.