ಹೂವು ಕಟ್ಟುವ ಹುಡುಗಿ ಈಗ ಪಿಎಸ್‌ಐ: ಕೊಪ್ಪಳದ ಫರೀದಾ ಸಾಧನೆ
ಕುಕನೂರು(ಜ.29): ಹೂವು ಕಟ್ಟಿ, ರಸ್ತೆ ಬದಿಗೆ ಕುಳಿತು ಮಾರಾಟ ಮಾಡುವ ಹುಡುಗಿ ಈಗ ಪಿಎಸ್‌ಐ(PSI) ಆಗಿದ್ದಾರೆ!ಇಲ್ಲಿಯ ವೀರಭದ್ರಪ್ಪ ವೃತ್ತದಲ್ಲಿ ನಿತ್ಯ ಹೂವು ಮಾರುವ ಪಟೇಲ್ ಕುಟುಂಬದ(Patel Family) ಕುವರಿ ಫರೀದಾ ಬೇಗಂ(Fareeda Begum) ಸಾಧನೆ ಪಾಲಕರಿಗೆ ಹೆಮ್ಮೆ ತಂದಿದೆ.ವ್ಯಾಪಾರಕ್ಕೆ ನೆರವಾಗಲೆಂದು
ಮನೆಯಲ್ಲಿ ಬಡತನ, ತಂದೆ ಹೂವು ಮಾರುತ್ತಾರೆ. ತಂದೆಯ ಹೂವಿನ ಕುಟುಂಬದವರು ಹೂವು ಕಟ್ಟುತ್ತಾರೆ. ಕೆಲವೊಮ್ಮೆ ರಸ್ತೆ ಬದಿ ಕುಳಿತು ಮಾರಾಟ ಮಾಡುತ್ತಾರೆ. ತಂದೆಗೆ ಮಗಳು ಓದಿ ದೊಡ್ಡ ಅಧಿಕಾರಿಯಾಗಬೇಕು ಎಂಬ ಹಂಬಲ ಇತ್ತು. ಮಗಳಿಗೂ ಓದಿನ ಆಸಕ್ತಿ ಇತ್ತು. ಅದರಂತೆ ಮಗಳು ಶ್ರಮಪಟ್ಟು ಓದಿ, ಈಗ ಪಿಎಸ್‌ಐ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ ವಲಯದಲ್ಲಿ(Kalyana Karnataka) 17ನೇ ರ‍್ಯಾಂಕ್ ಪಡೆದಿದ್ದಾರೆ. ಆದರೆ ಮಗಳ ಸಾಧನೆ ನೋಡಲು ತಂದೆ ಇಲ್ಲ.
ಮೌಲಾಹುಸೇನ ಪಟೇಲ್ ಅವರದ್ದು ತುಂಬು ಕುಟುಂಬ. ಅವರಿಗೆ ಒಟ್ಟು 12 ಮಕ್ಕಳು. ಐವರು ಗಂಡು, ಏಳು ಹೆಣ್ಣುಮಕ್ಕಳು. ಮನೆಯಲ್ಲಿ ಇಡೀ ಕುಟುಂಬದವರು ಹೂವುಗಳನ್ನು(Flower) ಕಟ್ಟುವ ಕೆಲಸ ಮಾಡುತ್ತಾರೆ. ಮೌಲಾಹುಸೇನ ಅಂಗಡಿಯಲ್ಲಿ ಹೂವು ಮಾರಾಟ ಮಾಡುತ್ತಿದ್ದರು. 9ನೇ ಮಗಳು ಫರೀದಾ ಬೇಗಂ ತಂದೆಯ ಆಸೆ ಪೂರೈಸಿದ್ದಾರೆ.
ಕುಕನೂರಿನ(Kukanur) ವಿದ್ಯಾನಂದ ಗುರುಕುಲದಲ್ಲಿ ಓದಿರುವ ಫರೀದಾಬೇಗಂ, ಪದವಿ ಮುಗಿಸಿದ ನಂತರ ಹೈದರಾಬಾದ್‌ನಲ್ಲಿ(Hyderabad) ಐಎಎಸ್ ತರಬೇತಿ(IAS Training) ಪಡೆದರು. ಬಳಿಕ ಪರೀಕ್ಷೆ ಬರೆದರೂ ಸ್ವಲ್ಪ ಅಂಕಗಳಲ್ಲಿ ಕೈತಪ್ಪಿತು. ಐಎಎಸ್ ತರಬೇತಿ ಮುಂದುವರಿಸುತ್ತಲೇ ಕೆಎಎಸ್(KAS) ಪರೀಕ್ಷೆ ಬರೆದರು. ಕೆಎಎಸ್ ಪರೀಕ್ಷೆಯ ಪ್ರಿಲಿಮಿನರಿ ಪಾಸಾಗಿದ್ದಾರೆ. ಸದ್ಯವೇ ಮೇನ್ ಪರೀಕ್ಷೆ ಎದುರಿಸಲಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ 520 ಪಿಎಸ್‌ಐಗಳ ನೇಮಕಾತಿಗಾಗಿ ನಡೆದ ಪರೀಕ್ಷೆ ಬರೆದು, ಕಲ್ಯಾಣ ಕರ್ನಾಟಕ ಭಾಗದಲ್ಲಿ 17ನೆಯ ರ‍್ಯಾಂಕ್ ಪಡೆದು ಆಯ್ಕೆಯಾಗಿದ್ದಾರೆ.
ಹೂವು ಕಟ್ಟುವ ಕೆಲಸದೊಂದಿಗೆ ಫರೀದಾ ಓದು ಮುಂದುವರಿಸಿದ್ದಾರೆ. ಒಂದು ಕಡೆ ಹೂವು ಕಟ್ಟುತ್ತಾ, ಪಕ್ಕದಲ್ಲಿ ಪುಸ್ತಕ ಇಟ್ಟುಕೊಂಡು, ಇಲ್ಲವೆ ಯುಟ್ಯೂಬ್‌ನಲ್ಲಿ ಪಠ್ಯವನ್ನು ಆಲಿಸುತ್ತಾ ಕೆಲಸ ಮಾಡುತ್ತಾರೆ. ಅವರ ಕುಟುಂಬದಲ್ಲಿ ಫರೀದಾ ಬೇಗಂ ಹಾಗೂ ಅವರ ಕಿರಿಯ ತಂಗಿ ಮಾತ್ರ ಪದವಿ ತರಗತಿ ವರೆಗೂ ಓದಿದ್ದಾರೆ. ಉಳಿದವರು ಹೆಚ್ಚು ಓದಿದವರಲ್ಲ, ಆದರೆ ಓದಿನಲ್ಲಿ ಮುಂದೆ ಇರುವ ಫರೀದಾ ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ.
ಮಗಳನ್ನು ಓದಿಸಲು ಮೌಲಾಹುಸೇನ ಸಾಕಷ್ಟು ಯತ್ನ ಮಾಡಿದ್ದಾರೆ. ಪರೀಕ್ಷೆಯಲ್ಲಿ ಪಾಸು-ಫೇಲ್ ಮುಖ್ಯವಲ್ಲ, ಓದು ಜ್ಞಾನ, ಸಾಧನೆ ಮುಖ್ಯ ಎನ್ನುತ್ತಿದ್ದರು. ಆದರೆ ಮೌಲಾಹುಸೇನ 7 ತಿಂಗಳ ಹಿಂದೆ ಅನಾರೋಗ್ಯದಿಂದ ಅಸು ನೀಗಿದರು. ನನ್ನ ಸಾಧನೆ ನೋಡಲು ತಂದೆ ಇಲ್ಲ, ಆದರೆ ಅವರ ಆಸೆಯನ್ನು ಪೂರೈಸುತ್ತೇನೆ ಎಂದು ಫರೀದಾ ಹೇಳುತ್ತಿದ್ದಾರೆ. ತಂದೆ ಆಸೆಯಂತೆ ಉನ್ನತ ಹುದ್ದೆಗೇರಲು ಸಂಪೂರ್ಣ ಸಹಕಾರ ನೀಡುತ್ತೇವೆ ಎನ್ನುತ್ತಾರೆ ಅವರ ಅಣ್ಣ ಇಬ್ರಾಹಿಂ ಪಟೇಲ್. ಛಲ, ಪ್ರತಿಭೆ, ಸಾಮರ್ಥ್ಯವಿದ್ದರೆ ಯಾರೂ ಸಾಧನೆ ಮಾಡಬಹುದು ಎಂಬುದನ್ನು ಹೂವು ಕಟ್ಟುವ ಈ ಯುವತಿ ತೋರಿಸಿಕೊಟ್ಟಿದ್ದಾಳೆ.
ನಮ್ಮ ತಂದೆ ಆಸೆಯಂತೆ ಇಂದು ನಾನು ಪಿಎಸ್‌ಐ ಆಗಿದ್ದೇನೆ. ಅವರು ಕಷ್ಟಪಟ್ಟು ಓದಿಸಿದ್ದಕ್ಕೆ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು. ಮುಂದೆ ಇನ್ನೂ ಓದಿ ಐಎಎಸ್ ಅಧಿಕಾರಿ ಆಗಬೇಕೆಂಬ ಹಂಬಲವಿದೆ. ನನಗೆ ನಮ್ಮ ತಾಯಿ, ಅಣ್ಣಂದಿರು, ಅಕ್ಕಂದಿರು ಸಾಥ್ ನೀಡಿದ್ದಾರೆ ಅಂತ ಕುಕನೂರಿನ ಪಿಎಸ್‌ಐ ಆಗಿ ಆಯ್ಕೆಯಾದ ಯುವತಿ ಫರೀದಾ ಬೇಗಂ ತಿಳಿಸಿದ್ದಾರೆ.