ಕಬಡ್ಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್: 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ..!
ಬೆಂಗಳೂರು: 2022ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭವಾಗಿದೆ. ಕೆಲ ದಿನಗಳ ಹಿಂದಷ್ಟೇ ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಹರಾಜು ನಡೆದಿತ್ತು, ಇದರ ಬೆನ್ನಲ್ಲೇ ಪ್ರೊ ಕಬಡ್ಡಿ ಟೂರ್ನಿಯು ಯಾವಾಗ ಆರಂಭವಾಗಲಿದೆ ಎಂದು ಕಬಡ್ಡಿ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಎಲ್ಲಾ ಕುತೂಹಲಕ್ಕೆ ತೆರೆ ಬಿದ್ದಿದ್ದು, ಬೆಂಗಳೂರು ಸೇರಿದಂತೆ ಮೂರು ನಗರಗಳಲ್ಲಿ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಗಳು ನಡೆಯಲಿವೆ.
🚨 Mark your calendars 🚨#vivoProKabaddi Season 9️⃣ is here and we can't wait to welcome you back ❤️ pic.twitter.com/iDMMapz5uR
— ProKabaddi (@ProKabaddi) August 26, 2022
ಮಾಶಲ್ ಸ್ಪೋರ್ಟ್ಸ್ ಆರ್ಗನೈಸರ್ಸ್ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭದ ದಿನಾಂಕವನ್ನು ಪ್ರಕಟಿಸಿದ್ದು, ಬೆಂಗಳೂರು ಸೇರಿದಂತೆ ದೇಶದ ಮೂರು ನಗರಗಳಲ್ಲಿ 2022ನೇ ಸಾಲಿನ ಪಿಕೆಎಲ್ ಪಂದ್ಯಾವಳಿಗಳು ನಡೆಯಲಿವೆ.
ಹೌದು, ಮುಂಬರುವ ಅಕ್ಟೋಬರ್ 07ರಿಂದ ಡಿಸೆಂಬರ್ ಮಧ್ಯಭಾಗದ ವರೆಗೂ 2022ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಪಂದ್ಯಗಳು ನಡೆಯಲಿದ್ದು, 12 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.
8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಪಂದ್ಯಗಳು ಕೋವಿಡ್ ಭೀತಿಯ ನಡುವೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಯಶಸ್ವಿಯಾಗಿ ಆಯೋಜನೆಗೊಂಡಿತ್ತು. ಆದರೆ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ.
PKL 2021
2022ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಪಂದ್ಯಗಳು ಸಿಲಿಕಾನ್ ಸಿಟಿ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್‌ನಲ್ಲಿ ಆಯೋಜಿಸಲು ಆಯೋಜಕರು ತೀರ್ಮಾನಿಸಿದ್ದಾರೆ.
ಇದೀಗ ಪ್ರೊ ಕಬಡ್ಡಿ ಲೀಗ್‌ನ ಅಭಿಮಾನಿಗಳಿಗೆ ಆಯೋಜಕರು ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಪ್ರೇಕ್ಷಕರು ಮೈದಾನಕ್ಕೆ ಬಂದು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ಅವಕಾಶ ನೀಡಿದೆ. ಕಳೆದ ಆವೃತ್ತಿಯಲ್ಲಿ ಮನೆಯಲ್ಲೇ ಕೂತು ಪಂದ್ಯ ವೀಕ್ಷಿಸಿದ್ದ ಕಬಡ್ಡಿ ಅಭಿಮಾನಿಗಳು ಈ ಬಾರಿ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್‌ನಲ್ಲಿ ಸ್ಟೇಡಿಯಂಗೆ ಬಂದು ಪಂದ್ಯ ವೀಕ್ಷಿಸಬಹುದಾಗಿದೆ.
Pro Kabaddi League
ಸದ್ಯ ಪ್ರೊ ಕಬಡ್ಡಿ ಲೀಗ್ ಆಯೋಜಕರು ಟೂರ್ನಿಯ ಆರಂಭದ ದಿನಾಂಕವನ್ನಷ್ಟೇ ಪ್ರಕಟಿಸಿದ್ದು, ಸಂಪೂರ್ಣ ವೇಳಾಪಟ್ಟಿಯನ್ನು ಮುಂಬರುವ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆಯಿದೆ.