ಪ್ರಜ್ವಲ್ ರೇವಣ್ಣ ವಿರುದ್ಧ ಏಕೆ ತಕ್ಷಣಕ್ಕೆ FIR ದಾಖಲಿಸಲಿಲ್ಲ? ಬಂಧಿಸಲಿಲ್ಲ?: ಪ್ರಲ್ಹಾದ್ ಜೋಶಿ
ಏಪ್ರಿಲ್ 21ರಂದೇ ಪ್ರಜ್ವಲ್ ರೇವಣ್ಣ ವಿಡಿಯೋಗಳು ಹರಿದಾಡಿವೆ. 22ಕ್ಕೇ ಅವರ ಮೇಲೆ ಏಕೆ ಪ್ರಕರಣ ದಾಖಲಿಸಲಿಲ್ಲ? ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೈತಿಕತೆ ಇದ್ರೆ ಇದಕ್ಕೆ ಉತ್ತರಿಸಲಿ ಎಂದು ಜೋಶಿ ಸವಾಲು ಹಾಕಿದರು.
ಹುಬ್ಬಳ್ಳಿ (ಮೇ.10): ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತನಿಖೆ ನಡೆಸಿ ನ್ಯಾಯ ಕೊಡಿಸಲು ನೋಡದೆ ಸಿಎಂ, ಡಿಸಿಎಂ ಅತ್ಯಂತ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಪ್ರಜ್ವಲ್ ರೇವಣ್ಣ ವಿರುದ್ಧ ಏಕೆ ತಕ್ಷಣಕ್ಕೆ FIR ದಾಖಲಿಸಲಿಲ್ಲ? ಬಂಧಿಸಲಿಲ್ಲ? ಎಂದು ಪ್ರಶ್ನಿಸಿದರು.
ನೈತಿಕತೆ ಇದ್ದರೆ ಉತ್ತರಿಸಿ: ಏಪ್ರಿಲ್ 21ರಂದೇ ಪ್ರಜ್ವಲ್ ರೇವಣ್ಣ ವಿಡಿಯೋಗಳು ಹರಿದಾಡಿವೆ. 22ಕ್ಕೇ ಅವರ ಮೇಲೆ ಏಕೆ ಪ್ರಕರಣ ದಾಖಲಿಸಲಿಲ್ಲ? ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೈತಿಕತೆ ಇದ್ರೆ ಇದಕ್ಕೆ ಉತ್ತರಿಸಲಿ ಎಂದು ಜೋಶಿ ಸವಾಲು ಹಾಕಿದರು.
ಸರ್ಕಾರದಿಂದ ರಾಜಕಾರಣ: ರೇವಣ್ಣ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬರೀ ರಾಜಕೀಯ ಮಾಡಲು ಹೊರಟಿದೆ. ಉನ್ನತ ತನಿಖೆ, ನ್ಯಾಯ ಕಲ್ಪಿಸುವ ಯೋಚನೆಯೆ ಇಲ್ಲ ಎಂದು ಆರೋಪಿಸಿದರು.
ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ತನಿಖೆ ನಡೆಸುವುದಲ್ಲದೆ, ಕಠಿಣ ಶಿಕ್ಷೆ ಆಗಲೇಬೇಕು. ಆದರೆ, ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೇ, ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್‌ಗೆ ತನಿಖೆಗಿಂತ, ನ್ಯಾಯಕ್ಕಿಂತ ಹೆಚ್ಚಾಗಿ ರಾಜಕಾರಣ ಬೇಕಾಗಿದೆ. ರೇವಣ್ಣ ಅವರ ಪ್ರಕರಣದಲ್ಲಿ ಸರ್ಕಾರ ತಪ್ಪು ಮಾಡುತ್ತಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.