- Home
- News
- Politics
- ನಾನು ಚಾಮರಾಜ ಕ್ಷೇತ್ರದ ಆಕಾಂಕ್ಷಿ, ಪಕ್ಷದಲ್ಲಿ ಬ್ಯಾನರ್ ಕಟ್ಟುವ ಕಾರ್ಯಕರ್ತನಿಗೂ ಈ ಹಕ್ಕಿದೆ: ನಾಗೇಂದ್ರಗೆ ಸಿಂಹ ತಿರುಗೇಟು
ನಾನು ಚಾಮರಾಜ ಕ್ಷೇತ್ರದ ಆಕಾಂಕ್ಷಿ, ಪಕ್ಷದಲ್ಲಿ ಬ್ಯಾನರ್ ಕಟ್ಟುವ ಕಾರ್ಯಕರ್ತನಿಗೂ ಈ ಹಕ್ಕಿದೆ: ನಾಗೇಂದ್ರಗೆ ಸಿಂಹ ತಿರುಗೇಟು
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿನ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದು, ಇದು ಪರಾಜಿತ ಅಭ್ಯರ್ಥಿ ನಾಗೇಂದ್ರ ಅವರೊಂದಿಗೆ ಮಾತಿನ ಚಕಮಕಿಗೆ ಕಾರಣವಾಗಿದೆ. ಆಕಾಂಕ್ಷಿ ಮತ್ತು ಅಭ್ಯರ್ಥಿ ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ.

ಚಾಮರಾಜ ಕ್ಷೇತ್ರಕ್ಕೆ ನಾನು ಆಕಾಂಕ್ಷಿ
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣನ್ಯೂಸ್
ಕೊಡಗು : ಮೈಸೂರಿನ ಚಾಮರಾಜ ಕ್ಷೇತ್ರಕ್ಕೆ ನಾನು ಆಕಾಂಕ್ಷಿ ಎಂದಿದ್ದೇನೆ. ಆಕಾಂಕ್ಷಿಯೇ ಬೇರೆ, ಅಭ್ಯರ್ಥಿಯೇ ಬೇರೆ, ಇದು ಅತ್ಯಂತ ಕನಿಷ್ಠ ವಿದ್ಯಾರ್ಹತೆ ಇರುವವನಿಗೂ ಗೊತ್ತಾಗುತ್ತದೆ ಎಂದು ಹೇಳುವ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದ ಆಕಾಂಕ್ಷಿಯಾಗಿರುವ ಪ್ರತಾಪ್ ಸಿಂಹ ಪರಾಜಿತ ಅಭ್ಯರ್ಥಿ ಎಲ್ ನಾಗೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ. ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ರಾಷ್ಟ್ರ ರಾಜಕಾರಣದಲ್ಲಿ ಇಲ್ಲ ಎಂದ ಮೇಲೆ ರಾಜ್ಯ ರಾಜಕಾರಣದಲ್ಲೇ ಇರಬೇಕಲ್ವಾ.? 2019 ರಲ್ಲಿ ಗೆದ್ದರೂ ನಂತರದ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಜನರಿಗೆ ಟಿಕೆಟ್ ಸಿಕ್ಕಿಲ್ಲ. ಅವರಲ್ಲಿ ಕೆಲವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಲಾಗಿದೆ. ಹೀಗಾಗಿ ಕೇಂದ್ರ ಮಟ್ಟದಲ್ಲಿ ಜವಾಬ್ದಾರಿ ಇಲ್ಲದಿದ್ದಾಗ, ಪಕ್ಷ ರಾಜ್ಯದಲ್ಲಿ ಜವಾಬ್ದಾರಿ ಕೊಡುತ್ತದೆ. ನಾನು ಕೂಡ ರಾಜ್ಯದ ಜನರೊಂದಿಗೆ ಇರಬೇಕೆಂದು ತೀರ್ಮಾನ ಮಾಡಿದ್ದೆ. ನಾನು ಮೈಸೂರಿನಲ್ಲೇ ವಾಸ ಮಾಡುವುದು. ಚಾಮರಾಜ ಕ್ಷೇತ್ರದಲ್ಲಿ ಅತೀ ಹೆಚ್ಚು ಪ್ರಜ್ಞಾವಂತ ಮತದಾರರು ಇದ್ದಾರೆ. ಹೀಗಾಗಿ ಅಲ್ಲಿ ಆಕಾಂಕ್ಷಿ ಇದ್ದೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದರು.
ಪಕ್ಷದಲ್ಲಿ ಬ್ಯಾನರ್ ಬಂಟಿಂಗ್ಸ್ ಕಟ್ಟುವ ಕಾರ್ಯಕರ್ತನಿಗೂ ಆಕಾಂಕ್ಷಿಯಾಗುವ ಹಕ್ಕಿದೆ
ಇದಕ್ಕೆ ಕಳೆದ ಬಾರಿ ಆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ನಾಗೇಂದ್ರ ಅವರು ಪ್ರತಿಕ್ರಿಯೆ ನೀಡಿ ಕಡಿಮೆ ಅಂತರದಲ್ಲಿ ನಾನು ಸೋತಿದ್ದವನು. ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ, ಹೇಗೆ ಬಿಟ್ಟುಕೊಡುವುದಕ್ಕೆ ಆಗುತ್ತದೆ. ಇಂತಹ ಹೇಳಿಕೆಗಳು ಕಾರ್ಯಕರ್ತರಲ್ಲಿ ಸುಮ್ಮನೆ ಗೊಂದಲ ಸೃಷ್ಟಿಸುತ್ತವೆ ಎಂದಿದ್ದರು. ಇದಕ್ಕೆ ಮತ್ತೆ ತಿರುಗೇಟು ನೀಡಿರುವ ಪ್ರತಾಪ್ ಸಿಂಹ ನಾನು ಆಕಾಂಕ್ಷಿ ಅಷ್ಟೇ ಎಂದಿದ್ದೇನೆ, ನಾನು ಅಭ್ಯರ್ಥಿ ಅಂತ ಹೇಳಿಲ್ಲ. ಆಕಾಂಕ್ಷಿ ಅಭ್ಯರ್ಥಿ ಇವೆರಡರ ಡಿಫರೆನ್ಸ್ ಕನಿಷ್ಠ ವಿದ್ಯಾರ್ಹತೆ ಇರುವವರಿಗೆ ಅರ್ಥವಾಗುತ್ತದೆ. ಪಕ್ಷದಲ್ಲಿ ಬ್ಯಾನರ್ ಬಂಟಿಂಗ್ಸ್ ಕಟ್ಟುವ ಕಾರ್ಯಕರ್ತನಿಗೂ ಆಕಾಂಕ್ಷಿಯಾಗುವ ಹಕ್ಕಿದೆ. ಹಾಗೆಯೇ ನಾನು ಆಕಾಂಕ್ಷಿಯಾಗಿದ್ದೇನೆ. ಯಾರು ಅಭ್ಯರ್ಥಿ ಆಗಬೇಕೆಂದು ಪಕ್ಷ ನಿರ್ಧರಿಸುತ್ತದೆ ಎಂದು ನಾಗೇಂದ್ರ ಅವರಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.
ಪ್ರತಾಪ್ ಸಿಂಹ ಈ ಹಿಂದೆ ಹೇಳಿದ್ದೇನು?
ಕೇಂದ್ರದ ರಾಜಕಾರಣ ಮುಗಿದ ಮೇಲೆ ಸಹಜವಾಗಿ ನಾನು ರಾಜ್ಯ ರಾಜಕಾರಣಕ್ಕೆ ಬಂದಿದ್ದು, ಚಾಮರಾಜ ಕ್ಷೇತ್ರವನ್ನು ನನ್ನ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಅವರು ಜನವರಿ 5 ರಂದು ಹೇಳಿಕೆ ನೀಡಿದ್ದರು. ಎಲ್ಲಾ ದೃಷ್ಟಿಯಿಂದಲೂ ಚಾಮರಾಜನಗರ ಕ್ಷೇತ್ರ ನನಗೆ ಅನುಕೂಲಕರವಾಗಿದೆ. ಹೀಗಾಗಿ ನಾನು ಆಯ್ಕೆ ಮಾಡಿಕೊಂಡಿದ್ದೇನೆ. ಈ ಹಿಂದೆ ಶಂಕರಲಿಂಗೇಗೌಡರು ನಾಲ್ಕು ಬಾರಿ ಚಾಮರಾಜ ಕ್ಷೇತ್ರದಿಂದ ಬಿಜೆಪಿಯಿಂದ ಗೆದ್ದಿದ್ದಾರೆ. ಇದು ಬಿಜೆಪಿ ಕ್ಷೇತ್ರ. ಹೀಗಾಗಿ ಇಲ್ಲಿಂದಲೇ ಚಟುವಟಿಕೆ ಆರಂಭಿಸಿದ್ದೇನೆ. ಚಾಮರಾಜ ಕ್ಷೇತ್ರ ಹಣದ ಪ್ಯಾಕೇಟ್ ಕೊಟ್ಟು ಗೆಲ್ಲುವ ಕ್ಷೇತ್ರ ಅಲ್ಲ. ಇಲ್ಲಿಯ ಮತದಾರರು ಕೆಲಸ ನೋಡಿ ಪ್ರೀತಿ ತೋರಿಸುವ ಜನ. ಬರಿ ಒಕ್ಕಲಿಗ ಲೆಕ್ಕದಲ್ಲೇ ಈ ಕ್ಷೇತ್ರ ನೋಡುತ್ತಿಲ್ಲ. ಇಲ್ಲಿ ಎಲ್ಲ ರೀತಿಯ ವರ್ಗದ ಜನರು ಇದ್ದಾರೆ. ಪ್ರಜ್ಞಾವಂತರು ಮತ್ತು ಬುದ್ಧಿವಂತರಿದ್ದಾರೆ. ಹೀಗಾಗಿ ಸಹಜವಾಗಿ ನನ್ನ ಆಯ್ಕೆಯಾಗಿದೆ ಎಂದು ಹೇಳಿಕೆ ನೀಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಸ್ವತಃ ಆ ಕ್ಷೇತ್ರದ ಈ ಹಿಂದಿನ ಅಭ್ಯರ್ಥಿ ಮಾಜಿ ಶಾಸಕ ಎಲ್ ನಾಗೇಂದ್ರ ಅವರಿಗೆ ಸಿಟ್ಟು ತರಿಸಿತ್ತು.
ತಪ್ಪು ಸರಿಪಡಿಸುವುದಕ್ಕೆ ಯೋಜನೆಯಲ್ಲಿ ಬದಲಾವಣೆ
ಇನ್ನು ಮನ್ರೇಗಾ ಯೋಜನೆಯ ವಿವಾದಕ್ಕೆ ಸಂಬಂಧಿಸಿದ ಮಾತನಾಡಿದ ಪ್ರತಾಪ್ ಸಿಂಹ ವಿಬಿ ಜಿ ರಾಮ್ ಜಿ ಯೋಜನೆಯ ಮೂಲ ಉದ್ದೇಶ ಸಂಪತ್ತನ್ನು ಸೃಷ್ಟಿಸುವುದಾಗಿದೆ. ಆದರೆ ಇದುವರೆಗೆ ಅದು ಆಗಿಲ್ಲ. ಜೊತೆಗೆ ಸುಳ್ಳು ಜಾಬ್ ಕಾರ್ಡುಗಳ ಹೆಸರಿನಲ್ಲಿ ಹಣ ಪೋಲಾಗುತಿತ್ತು. ಇದನ್ನು ತಪ್ಪಿಸುವುದಕ್ಕಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಪ್ರಿಯಾಂಕ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಯ ರಾಯಭಾಗ ಭಾಗದಲ್ಲಿ ಶಾಲಾ ಮಕ್ಕಳನ್ನು ನಿಲ್ಲಿಸಿ ಜಾಬ್ ಕಾರ್ಡ್ ಕೊಟ್ಟು ಫೋಟೋ ತೆಗೆಸಲಾಗಿದೆ. ಅವರನ್ನೂ ಕೂಲಿ ಕಾರ್ಮಿಕರೆಂದು ತೋರಿಸಿ ದುಡ್ಡು ಹೊಡೆಯಲಾಗಿದೆ. ಇದನ್ನು ಅವರು ಸರಿ ಮಾಡುವ ಕೆಲಸ ಮಾಡಲಿಲ್ಲ. ಹೀಗೆ ತಾನೆ ಇವರು ಟೋಪಿ ಹಾಕುವುದು. ಇದನ್ನು ಸರಿಪಡಿಸುವುದಕ್ಕೆ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ.
ರಾಜ್ಯ ಸರ್ಕಾರಕ್ಕೆ ಹೊಟ್ಟೆ ಉರಿ
ರಾಜ್ಯ ಸರ್ಕಾರದವರು ಯಾಕೆ ಇದರ ಬಗ್ಗೆ ಹೊಟ್ಟೆ ಉರಿ ಮಾಡುತಿದ್ದಾರೋ ಗೊತ್ತಿಲ್ಲ. ಮಹಾತ್ಮಗಾಂಧಿ ಅವರ ಹೆಸರನ್ನು ಬದಲಾಯಿಸುತ್ತಿದ್ದಾರೆ ಎಂದು ಬಡಿದುಕೊಳ್ಳುತಿದ್ದಾರೆ. ಇದುವರೆಗೆ ಈ ಯೋಜನೆಗೆ ಕೇಂದ್ರ ಸರ್ಕಾರ ಶೇ 90 ರಷ್ಟು ಅನುದಾನ ಕೊಡುತ್ತಿತ್ತು. ಈಗ ಶೇ 60 ರಷ್ಟು ಅನುದಾನವನ್ನು ಕೇಂದ್ರ ಕೊಟ್ಟರೆ, ಶೇ 40 ರಷ್ಟು ಅನುದಾನವನ್ನು ರಾಜ್ಯ ಕೊಡಬೇಕು. ಇದಕ್ಕೆ ನಾವು 40% ಕೊಡಬೇಕಲ್ಲ ಎನ್ನುವುದು ಇವರಿಗೆ ಹೊಟ್ಟೆ ಉರಿ. ಇಲ್ಲಿ ಸುಮ್ಮನೆ ಜಾಬ್ ಕಾರ್ಡ್ ಮಾಡಿ ದುಡ್ಡು ಹೊಡೆಯುವುದಕ್ಕೆ ಅವಕಾಶವಿಲ್ಲ ಎನ್ನುವುದು ಇವರ ಸಮಸ್ಯೆ. ಹೀಗಾಗಿ ಈ ಯೋಜನೆ ಬಗ್ಗೆ ಕಾಂಗ್ರೆಸ್ ನವರು ವಿರೋಧ ವ್ಯಕ್ತಪಡಿಸಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

