ನನಗ್ಯಾವುದೇ ತಾರತಮ್ಯ ಇಲ್ಲ: ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಕುರಿತು ನಿಖಿಲ್ ಸ್ಪಷ್ಟ ಮಾತು
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದಾರೆ. ಹಾಸನ ಕ್ಷೇತ್ರದ ಮೇಲಿನ ತಮ್ಮ ಭಾವನಾತ್ಮಕ ಸಂಬಂಧವನ್ನು ವಿವರಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಮಾತನಾಡಿದ್ದಾರೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನಲ್ಲಿ ಹಾಸನ ಕ್ಷೇತ್ರದ ಬಗ್ಗೆ ಮಾತನಾಡಿದರು.
ಮೂರು ಸೋಲು
ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ನಂತರ ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಿ ಸೋಲು ಕಂಡಿದ್ದರು. ಜೆಡಿಎಸ್ ಭದ್ರಕೋಟೆ ಅಂತಾನೇ ಬಿಂಬಿತವಾಗಿದ್ದ ಹಾಸನ ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್ ಕೈ ವಶ ಮಾಡಿಕೊಂಡಿದೆ. ಈ ಹಿಂದೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ ಜೈಲು ಸೇರಿದ್ದು, ಹಾಗಾಗಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಮೂಡಿದೆ.
ಹಾಸನದ ಬಗ್ಗೆ ನಿಖಿಲ್ ಮಾತು
ಹಾಸನ ಜಿಲ್ಲೆ ನಮಗೆ ರಾಜಕೀಯವಾಗಿ ಗುರುತಿಸಿ ರಾಜಕೀಯವಾಗಿ ಬೆಳೆಸಿದ ಜಿಲ್ಲೆ. ಮಾಜಿ ಪ್ರಧಾನಿಗಳಾದ ದೇವೇಗೌಡರು ಜನಿಸಿದ ಜಿಲ್ಲೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು. ಹಾಸನ ಜಿಲ್ಲೆ ರಾಜಕಾರಣ ಇರಬಹುದು ಅಥವಾ ಇನ್ನಾವುದೇ ಜಿಲ್ಲೆ ಇರಲಿ. ನನ್ನದಾವುದೂ ತಾರತಮ್ಯ ಇಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ನಿಖಿಲ್ ಮಾತನಾಡಿದರು.
ನನ್ನ ಮುಂದಿನ ಸ್ಪರ್ಧೆ
ಹಾಸನದಲ್ಲಿ ನನ್ನ ಮುಂದಿನ ಸ್ಪರ್ದೆ ಕುರಿತು ಯಾವುದೇ ತೀರ್ಮಾನ ಮಾಡಿಲ್ಲ. ಹೆಚ್ಚಿನ ಸಂಖ್ಯೆ ಜನತಾದಳ ಶಾಸಕರು ಗೆಲ್ಲಬೇಕು ಅಂದ್ರೆ ಎಲ್ಲ ಜಿಲ್ಲೆಗಳೂ ಸಹ ನಮಗೆ ಒಂದೆಯಾಗಿವೆ. ಎಷ್ಟೇ ಸಲ ಸೋತರೂ ಕಳೆದ ಕಳೆಗುಂದುವುದು ನಮ್ಮ ರಕ್ತದಲ್ಲೇ ಇಲ್ಲ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಜನರೊಂದಿಗೆ ಜನತಾದಳ ಯಶಸ್ವಿಯಾಗಿ ನೆರವೇರಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು.
ಎರಡು ಹಂತದಲ್ಲಿ ಪ್ರವಾಸ
ಇದು ಮೊದಲ ಹಂತದ ಪ್ರವಾಸ,ಎರಡನೇ ಹಂತದಲ್ಲಿ ಇನ್ನಷ್ಟು ತಾಲೂಕಿನ ಪ್ರವಾಸ ಇದೆ. ಮೂರು ವರ್ಷಗಳ ಕಾಲ ನಿರಂತರವಾಗಿ ಇದೇ ರೀತಿ ಓಡಾಡುತ್ತೇನೆ. ನಿಖಿಲ್ ಕುಮಾರಸ್ವಾಮಿ ಒಬ್ಬರಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ. ಮುಖಂಡರು ಮತ್ತು ಕಾರ್ಯಕರ್ತರ ಬೆಂಬಲಬೇಕು ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿಕೊಂಡರು.
ರಾಜ್ಯ ಸರ್ಕಾರದಿಂದ ನಿರ್ಲಕ್ಷ್ಯ
ಕೋಲಾರದ ಮಾವು ಬೆಳೆಗಾರರು ಮಾವನ್ನು ರಸ್ತೆಯಲ್ಲಿ ಚೆಲ್ಲಿದ್ದಾರೆ. ರಾಜ್ಯ ಸರ್ಕಾರಕ್ಕೆ ಮಾವು ಬೆಳೆಗಾರರ ಬಗ್ಗೆ ಚಿಂತೆ ಇಲ್ಲ. ಕುಮಾರಣ್ಣ ಕೇಂದ್ರ ಕೃಷಿ ಸಚಿವರಲ್ಲ ಆದ್ರೂ ಅವರು ಶಿವರಾಜ್ ಸಿಂಗ್ ಚೌಹಾಣ್ ಗೆ ಪತ್ರ ಬರೆದರು. ಕುಮಾರಣ್ಣ ಪತ್ರಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಆದರೆ ಇಲ್ಲಿವರೆಗೆ ರಾಜ್ಯ ಸರ್ಕಾರದ ತೆಗೆದುಕೊಳ್ಳಬೇಕಾದ ಕ್ರಮಗಳಲ್ಲಿ ವಿಫಲವಾಗಿದೆ. ರಾಜ್ಯದ ರೈತರ ಕುರಿತು ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ನಿಖಿಲ್ ಆರೋಪಿಸಿದರು.
ಕೃಷಿ ಸಚಿವರ ಬಳಿ ಉತ್ತರ ಇಲ್ಲ
136 ಜನ ಶಾಸಕರಿದ್ದರೂ ಕೂಡ ಅಭಿವೃದ್ಧಿ ಇಲ್ಲ.ಕೃಷಿ ಸಚಿವರ ಬಳಿ ಯಾವುದಕ್ಕೂ ಉತ್ತರ ಇಲ್ಲ. ಗೃಹಲಕ್ಷ್ಮಿ ಯೋಜನೆ ಹಣ ಪ್ರತಿ ತಿಂಗಳು ಕೊಡುವುದಾಗಿ ಹೇಳಿದ್ದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ
ಉಪಮುಖ್ಯಮಂತ್ರಿ ಗಳು ಪ್ರತಿ ತಿಂಗಳು ಹಣ ನೀಡುವುದಾಗಿ ಒಮ್ಮೆ ಹೇಳಿದ್ದಾರೆ. ಮತ್ತೊಮ್ಮೆ ತಿಂಗಳಾ ತಿಂಗಳಾ ಕೊಡ್ತೀವಿ ಅಂತ ಹೇಳಿದ್ದೀವಾ ಎಂದು ಪ್ರಶ್ನಿಸುತ್ತಾರೆ ಅಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಗುಡುಗಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

