ಪಕ್ಷ ಗುಡಿಸು ಅಂದ್ರೆ ಗುಡಿಸ್ತೀನಿ, ಒರೆಸು ಅಂದ್ರೆ ಒರೆಸ್ತೀನಿ: ನಳಿನ್ ಕುಮಾರ್ ಕಟೀಲ್
‘ಪಕ್ಷದವರು ನನ್ನ ಬಳಿ ಗುಡಿಸು ಎಂದರೆ ಗುಡಿಸುತ್ತೇವೆ, ಒರೆಸು ಎಂದರೆ ಒರೆಸುತ್ತೇನೆ. ಯಾರೇ ಅಭ್ಯರ್ಥಿಯಾದರೂ ಪಕ್ಷ ನಿರ್ಧಾರಕ್ಕೆ ಬದ್ಧ...’ ಇದು ಟಿಕೆಟ್ ಕೈತಪ್ಪುವ ಭೀತಿಗೊಳಗಾಗಿರುವ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ ಮಾತು.
ಮಂಗಳೂರು (ಮಾ.13): ‘ಪಕ್ಷದವರು ನನ್ನ ಬಳಿ ಗುಡಿಸು ಎಂದರೆ ಗುಡಿಸುತ್ತೇವೆ, ಒರೆಸು ಎಂದರೆ ಒರೆಸುತ್ತೇನೆ. ಯಾರೇ ಅಭ್ಯರ್ಥಿಯಾದರೂ ಪಕ್ಷ ನಿರ್ಧಾರಕ್ಕೆ ಬದ್ಧ...’ ಇದು ಟಿಕೆಟ್ ಕೈತಪ್ಪುವ ಭೀತಿಗೊಳಗಾಗಿರುವ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ ಮಾತು.
ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪುವ ಸಾಧ್ಯತೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಪಕ್ಷದವರು ನಮ್ಮ ಬಳಿ ಗುಡಿಸು ಎಂದರೆ ಗುಡಿಸುತ್ತೇವೆ. ಒರೆಸು ಎಂದು ಹೇಳಿದರೆ ಒರೆಸುತ್ತೇವೆ. ನಮಗೆ ಅಧಿಕಾರವೇ ಮುಖ್ಯವಲ್ಲ, ಟಿಕೆಟ್ ಸಿಗದಿದ್ದರೆ ಅಸಮಾಧಾನವೂ ಇಲ್ಲ.
ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸುವುದು ನಮ್ಮ ಪಕ್ಷದ ವಿಶೇಷತೆ. ಏನು ಬದಲಾವಣೆ ಮಾಡಬೇಕೋ ಅದನ್ನು ರಾಷ್ಟ್ರೀಯ ನಾಯಕರು ಮಾಡುತ್ತಾರೆ. ಅವರ ಆಯ್ಕೆಯನ್ನು ಸ್ವಾಗತಿಸುತ್ತೇನೆ ಎಂದರು. ಸಾಮಾಜಿಕ ಜಾಲತಾಣಗಳ ಚರ್ಚೆ ಬಗ್ಗೆ ನಾನು ಹೆಚ್ಚು ತಲೆಕಡಿಸಿಕೊಳ್ಳುವುದಿಲ್ಲ.
ನಾವು ಪಕ್ಷ ಏನೇ ಹೇಳಿದರೂ ಮಾಡುತ್ತೇವೆ, ನಾನು ತಳ ಮಟ್ಟದ ಕಾರ್ಯಕರ್ತನಾಗಿ ಹಿಂದುತ್ವದ ಸಿದ್ಧಾಂತವನ್ನು ಪ್ರತಿಪಾದಿಸಿ ಬೆಳೆದು ಬಂದವನು. ನನಗೂ ಮೂರು ಬಾರಿ ಅವಕಾಶ ನೀಡಿದ್ದು, ಹದಿನೈದು ವರ್ಷ ಕೆಲಸ ಮಾಡಿದ್ದೇನೆ. ಸಂಘದ ಕಾರ್ಯಕ್ಕೋಸ್ಕರ ಬಂದಿದ್ದು.
ಬಿಜೆಪಿ ಕೆಲಸ ಮಾಡು ಎಂದಾಗ ಮಾಡಿದೆ. ಲೋಕಸಭೆ ಚುನಾವಣೆಗೆ ನಿಲ್ಲು ಎಂದರು, ಸ್ಪರ್ಧಿಸಿದೆ. ಆ ಬಳಿಕ ರಾಜ್ಯಾಧ್ಯಕ್ಷನೂ ಆದೆ. ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ, ಅವಕಾಶ ಸಿಕ್ಕಿಲ್ಲ ಅಂದಾಗ ಅನ್ಯಾಯ ಆಗಿದೆ ಎಂದು ಹೇಳುವ ಹಕ್ಕು ನಮಗಿಲ್ಲ. ನನಗೆ ಯಾವುದೇ ಅಸಮಾಧಾನ ಇಲ್ಲ ಎಂದು ನಳಿನ್ ಕುಮಾರ್ ಕಟೀಲ್ ಭಾವುಕರಾದರು.