ಅಪ್ಪ, ತಾತನ ಹೇಸರೇಳಿಕೊಂಡ ಬಂದ ಯುವರಾಜ ನಿರುದ್ಯೋಗಿ: ತೇಜಸ್ವಿ ಸೂರ್ಯ
ತುಮಕೂರು(ಅ.23): ಮೋದಿ ಅವರು ಪ್ರಧಾನಿಯಾದ ಬಳಿಕ ಅಪ್ಪನ, ತಾತನ ಹೆಸರು ಹೇಳಿಕೊಂಡು ಯುವರಾಜರಾಗಿದ್ದಾರೋ ಅವರು ಮಾತ್ರ ನಿರುದ್ಯೋಗಿಗಳಾಗಿದ್ದಾರೆ ಎಂದು ರಾಹುಲ್‌ಗಾಂಧಿಗೆ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಟಾಂಗ್ ನೀಡಿದ್ದಾರೆ.

ಗುರುವಾರ ಶಿರಾದಲ್ಲಿ ಪಕ್ಷದ ಅಭ್ಯರ್ಥಿ ರಾಜೇಶಗೌಡ ಪರ ರೋಡ್ ಶೋ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ಇಡೀ ದೇಶದಲ್ಲಿ ಮೋದಿಯವರು ಪ್ರಧಾನಿಯಾದ ನಂತರ ಕಳೆದ ಆರು ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ವೇಗವಾಗಿದೆ. ಆದರೆ ನಿರುದ್ಯೋಗ ಆಗಿರುವುದು ಮಾತ್ರ ಯುವರಾಜರಿಗೆ ಎಂದರು.

ಶಿರಾದಲ್ಲಿ ಬದಲಾವಣೆಯ ಪರ್ವ ಎಲ್ಲ ಕಡೆ ಬೀಸುತ್ತಿದೆ. ಕಳೆದ ಇಷ್ಟು ವರ್ಷಗಳಿಂದ ಶಿರಾದ ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತದಿಂದ ಬೇಸತ್ತಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಶತಃಸಿದ್ಧ. ಸರ್ಕಾರದ ಶಾಸಕ ಇಲ್ಲಿ ಆಯ್ಕೆಯಾದರೆ ಶಿರಾದ ಅಭಿವೃದ್ಧಿ ಕಾರ್ಯಗಳನ್ನು ಮತ್ತಷ್ಟುವೇಗದಲ್ಲಿ ತೆಗೆದುಕೊಂಡು ಹೋಗಲು ಈಗಾಗಲೇ ರಾಜೇಶಗೌಡರು ಸಂಕಲ್ಪ ಮಾಡಿದ್ದಾರೆ ಎಂದರು.
ಇಷ್ಟು ವರ್ಷಗಳಲ್ಲಿ ಕಾಣದಂತಹ ಅಭಿವೃದ್ಧಿಯನ್ನು ಮುಂದಿನ ಎರಡೂವರೆ ವರ್ಷಗಳಲ್ಲಿ ಕಾಣಬಹುದಾಗಿದೆ ಎಂದರು. ಶಿರಾದ ಇತಿಹಾಸದಲ್ಲಿ ಇದೊಂದು ಬದಲಾವಣೆಯ ಚುನಾವಣೆಯಾಗುತ್ತದೆ ಎಂದರು.
ಯುವಕರು ಅತ್ಯಂತ ಉತ್ಸಾಹದಿಂದ ಬಿಜೆಪಿ ಅಭ್ಯರ್ಥಿಯ ಪರವಾಗಿ ಈ ಉಪಚುನಾವಣೆಯಲ್ಲಿ ನಿಂತಿದ್ದಾರೆ. ಯುವಮೋರ್ಚಾದ ನೇತೃತ್ವದಲ್ಲಿ ಶಿರಾದ ಚುನಾವಣೆಯನ್ನು ನಾವು ಗೆದ್ದೇಗೆಲ್ಲುವುದಾಗಿ ಸಂಕಲ್ಪ ತೊಡಲಾಗಿದೆ ಎಂದರು. ಬಿಜೆಪಿಗೆ ಇತಿಹಾಸದಿಂದಲೂ ಯಾವುದೂ ಸುಲಭವಾಗಿ ಬಂದಿಲ್ಲ. ಎಲ್ಲದ್ದನ್ನೂ ಸಂಘರ್ಷ ಮಾಡಿಯೇ ಗೆದ್ದುಕೊಂಡಿದ್ದೀವಿ ಎಂದರು.