ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ, ನನ್ನನ್ನು ಆಶೀರ್ವದಿಸಿ: ಕುಸುಮಾ ಮನವಿ
ಬೆಂಗಳೂರು(ನ.01): ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊರಗುಂಟೆಪಾಳ್ಯ ಹಾಗೂ ಪೀಣ್ಯದ ಗಾರ್ಮೆಂಟ್ಸ್ ಕಾರ್ಖಾನೆಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಭೇಟಿ ನೀಡಿ ಅಲ್ಲಿನ ಕಾರ್ಮಿಕರ ಮತಯಾಚಿಸಿದ್ದಾರೆ.
ಶನಿವಾರ ಯಶವಂತಪುರ, ಪೀಣ್ಯ, ಗೊರಗುಂಟೆಪಾಳ್ಯ ಸೇರಿದಂತೆ ವಿವಿಧೆಡೆ ಇರುವ ಗಾರ್ಮೆಂಟ್ಸ್ ಕಾರ್ಖಾನೆಗಳಿಗೆ ತೆರಳಿ ಮತ ಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೆ ಸಂಸದ ಡಿ.ಕೆ.ಸುರೇಶ್, ಮಾಜಿ ಸಂಸದ ಧ್ರುವನಾರಾಯಣ್ ಸೇರಿದಂತೆ ಮತ್ತಿತರ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಗಾರ್ಮೆಂಟ್ಸ್‌ಗಳಿಗೆ ಭೇಟಿ ಕೊಟ್ಟಕಡೆಗಳಲೆಲ್ಲಾ ಅಲ್ಲಿನ ಕಾರ್ಮಿಕರು ಹೂವಿನ ಹಾರ ಹಾಕಿ ಸ್ವಾಗತಿಸುತ್ತಿದ್ದ ದೃಶ್ಯ ಕಂಡುಬಂತು. ಬಹಿರಂಗ ಪ್ರಚಾರದ ಬದಲು ಗಾರ್ಮೆಂಟ್ಸ್ ಕಾರ್ಮಿಕರನ್ನು ಸೆಳೆಯುವ ತಂತ್ರ ರೂಪಿಸಿದ ಕಾಂಗ್ರೆಸ್ ಮುಖಂಡರು ದಿನವಿಡೀ ವಿವಿಧ ಗಾರ್ಮೆಂಟ್ಸ್ ಕಾರ್ಖಾನೆಗಳಿಗೆ ಭೇಟಿ ಕೊಟ್ಟು ಮಹಿಳಾ ಕಾರ್ಮಿಕರನ್ನು ಸೆಳೆಯುವ ಪ್ರಯತ್ನ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಮಾತನಾಡಿ, ನಿಮ್ಮ ಕಷ್ಟಗಳನ್ನು ಮುಕ್ತವಾಗಿ ಹಂಚಿಕೊಂಡು ಅದಕ್ಕೆ ಸ್ಪಂದಿಸಲು ನನಗೆ ಅವಕಾಶ ಕೊಡಿ. ನಿಮ್ಮ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ. ಇಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಶೇ. 80 ರಷ್ಟು ಮಹಿಳೆಯರೇ ಇದ್ದಾರೆ. ನಿಮ್ಮ ಕಷ್ಟ, ಸಮಸ್ಯೆಗಳನ್ನು ಮತ್ತೊಂದು ಹೆಣ್ಣಿನ ಬಳಿ ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಸುರಕ್ಷತೆ ಬೇಕಾಗುತ್ತದೆ. ನೀವು ನಿಮ್ಮ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಇಲ್ಲಿಗೆ ಕೆಲಸಕ್ಕೆ ಬರುತ್ತೀರಿ. ನಿಮ್ಮ ಮನೆ ಮಗಳಾಗಿ, ಸಹೋದರಿಯಾಗಿ ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತೇನೆ. ಮಹಿಳೆಯರಿಗೆ ಹೆಚ್ಚಾಗಿ ಅವಕಾಶ ಸಿಗಲ್ಲ. ಆದರೆ ನಮ್ಮ ಪಕ್ಷ ನನಗೆ ಈ ಅವಕಾಶ ಮಾಡಿ ಕೊಟ್ಟಿದೆ. ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ. ನನ್ನನ್ನು ನೀವೆಲ್ಲರೂ ಆಶೀರ್ವದಿಸಿ. ನಿಮಗೆ ಸಿಗಬೇಕಾದ ಸವಲತ್ತುಗಳನ್ನು ನೇರವಾಗಿ ಸಿಗುವಂತೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ನ. 3ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ನನಗೆ ಆಶೀರ್ವದಿಸಿ ಎಂದು ಮನವಿ ಮಾಡಿದ ಅವರು, ಕಷ್ಟ, ನೋವಿನ ಜೀವನದ ಅನುಭವ ನನಗಿದೆ. ನಿಮ್ಮ ಕಷ್ಟಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನಿಮ್ಮೊಂದಿಗೆ ಬೆರೆತು ಕೆಲಸ ಮಾಡುವ ಅವಕಾಶ ಮಾಡಿಕೊಡಿ. ಈವರೆಗೂ ನಿಮಗೆ ಏನೇ ಅನ್ಯಾಯಗಳಾಗಿದ್ದರೂ ಅದನ್ನು ಸರಿಪಡಿಸಲು ನಿಮ್ಮೊಂದಿಗೆ ಹೋರಾಟಕ್ಕೆ ಕೈ ಜೋಡಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.