ಮಂಡ್ಯ ಮಣ್ಣನ್ನು ಯಾವತ್ತಿಗೂ ನಾನು ಬಿಡೋಲ್ಲ: ಸಂಸದೆ ಸುಮಲತಾ ಅಂಬರೀಶ್
ಅಂಬರೀಶ್ ಅವರ ಹಣೆಗೆ ಮಂಡ್ಯ ಮಣ್ಣಿನ ತಿಲಕ ಇಟ್ಟು ಕಳುಹಿಸಿದ್ದೇವೆ. ಮಂಡ್ಯದ ಮಣ್ಣಿನ ಗುಣ, ಋಣ ನನ್ನಲ್ಲಿ ಬೆರೆತುಹೋಗಿದೆ. ಅಷ್ಟು ಸುಲಭವಾಗಿ ಈ ಮಣ್ಣಿನಿಂದ ನನ್ನನ್ನು ಬೇರ್ಪಡಿಸಲಾಗುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಭಾವುಕರಾಗಿ ನುಡಿದಿದ್ದಾರೆ.
ಶ್ರೀರಂಗಪಟ್ಟಣ (ಫೆ.19): 'ನಾನು ಮಂಡ್ಯದ ಮಣ್ಣನ್ನು ಯಾವತ್ತಿಗೂ ಬಿಟ್ಟು ಹೋಗುವುದಿಲ್ಲ' ಎಂದು ಸಂಸದೆ ಸುಮಲತಾ ಅಂಬರೀಶ್ ಭಾವುಕರಾಗಿ ನುಡಿದಿದ್ದಾರೆ. ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ನಟ ದರ್ಶನ್ ಚಿತ್ರರಂಗ ಪ್ರವೇಶಿಸಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ 'ಬೆಳ್ಳಿ ಪರ್ವ ಡಿ-25' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಂಬರೀಶ್ ಅವರ ಹಣೆಗೆ ಮಂಡ್ಯ ಮಣ್ಣಿನ ತಿಲಕ ಇಟ್ಟು ಕಳುಹಿಸಿದ್ದೇವೆ. ಮಂಡ್ಯದ ಮಣ್ಣಿನ ಗುಣ, ಋಣ ನನ್ನಲ್ಲಿ ಬೆರೆತುಹೋಗಿದೆ. ಅಷ್ಟು ಸುಲಭವಾಗಿ ಈ ಮಣ್ಣಿನಿಂದ ನನ್ನನ್ನು ಬೇರ್ಪಡಿಸಲಾಗುವುದಿಲ್ಲ. ಮಂಡ್ಯ ಮಣ್ಣನ್ನು ನಾನು ಯಾವತ್ತಿಗೂ ಬಿಡುವುದಿಲ್ಲ ಎಂದರು.
ದರ್ಶನ್ ನನ್ನ ಹಿರಿಯ ಮಗ, ಚಿತ್ರರಂಗದಲ್ಲಿ 25 ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ. ಮೆಜೆಸ್ಟಿಕ್ ಸಿನಿಮಾ ಮಾಡುವಾಗ ದರ್ಶನ್ ಚಿಕ್ಕ ಹುಡುಗ. ಅವನಿಗೀಗ 47 ವರ್ಷ ವಯಸಾದರೂ ನನಗೆ 25 ವರ್ಷದ ಹುಡುಗನೇ ಆಗಿದ್ದಾನೆ. ತಾಯಿಗೆ ಯಾವತ್ತು ಮಕ್ಕಳು ಮಕ್ಕಳೇ ಎಂದು ಹೇಳಿದರು. ದರ್ಶನ್ ಸದಾ ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ.
ಅಂಬರೀಶ್ ಇಲ್ಲದಿದ್ದರೂ ಅಭಿಗೆ ನೀನಿದೀಯಾ ಎಂದು ದರ್ಶನ್‌ಗೆ ಹೇಳುತ್ತಿರುತ್ತೇನೆ. ಕಳೆದ ಲೋಕಸಭಾ ಚುನಾವಣೆ ವೇಳೆ ನನ್ನ ಸಂಪೂರ್ಣ ಬೆಂಬಲಕ್ಕೆ ನಿಂತಿದ್ದು ದರ್ಶನ್ ಮತ್ತು ಯಶ್. ಯಾರು ಏನೇ ಟಾರ್ಗೆಟ್ ಮಾಡಿದರೂ, ಟ್ರೋಲ್ ಮಾಡಿದರೂ ಅವರಿಬ್ಬರೂ ಅಂದು ನನ್ನ ಹಿಂದೆ ನಿಂತರು ಎಂದು ಆ ದಿನಗಳನ್ನು ಮೆಲುಕು ಹಾಕಿದರು.
2023ರ ಚುನಾವಣೆಗೂ ಮುನ್ನ ಶ್ರೀರಂಗಪಟ್ಟಣದಿಂದ ಅಭಿಷೇಕ್ ಅಥವಾ ಸಚ್ಚಿದಾನಂದ ಅವರಲ್ಲಿ ಯಾರಿಗೆ ಟಿಕೆಟ್ ಎಂಬ ವಿಚಾರ ಬಂದಾಗ ನಾನು ಸಚ್ಚಿದಾನಂದ ಹೆಸರನ್ನೇ ಹೇಳಿದ್ದೆ. ಇವತ್ತಿಗೂ ನಾನು ಅದನ್ನೇ ಉಳಿಸಿ ಕೊಂಡು ಬಂದಿದ್ದೇನೆ. ಬೇರೆಯವರಿಗಾಗಿ ಮಿಡಿಯು ವುದನ್ನ ಅಂಬರೀಶ್ ಅವರಲ್ಲಿ ಕಂಡಿದ್ದೆ. ಈಗ ಅದನ್ನು ದರ್ಶನ್ ರಲ್ಲಿ ನೋಡುತ್ತಿದ್ದೇನೆ ಎಂದರು.