ನನಗೆ ಲೋಕಸಭಾ ಟಿಕೆಟ್ ತಪ್ಪಿಸುವ ಹುನ್ನಾರ ನಡೆದಿಲ್ಲ: ಜಗದೀಶ್ ಶೆಟ್ಟರ್
ಬೆಳಗಾವಿ ಟಿಕೆಟ್ ನನಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಟಿಕೆಟ್ ಘೋಷಣೆಯಾದ ಬಳಿಕ ಅಲ್ಲಿಗೆ ತೆರಳಿ ಪ್ರಚಾರಕ್ಕೆ ಚಾಲನೆ ನೀಡುತ್ತೇನೆ. ನನಗೆ ಟಿಕೆಟ್ ತಪ್ಪಿಸಲು ಯಾರೂ ಹುನ್ನಾರ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

ಹುಬ್ಬಳ್ಳಿ (ಮಾ.21): ಬೆಳಗಾವಿ ಟಿಕೆಟ್ ನನಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಟಿಕೆಟ್ ಘೋಷಣೆಯಾದ ಬಳಿಕ ಅಲ್ಲಿಗೆ ತೆರಳಿ ಪ್ರಚಾರಕ್ಕೆ ಚಾಲನೆ ನೀಡುತ್ತೇನೆ. ನನಗೆ ಟಿಕೆಟ್ ತಪ್ಪಿಸಲು ಯಾರೂ ಹುನ್ನಾರ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿಗಳ ಪಟ್ಟಿ ಶೀಘ್ರ ಬಿಡುಗಡೆಯಾಗಲಿದೆ. ಅದರಲ್ಲಿ ನನ್ನ ಹೆಸರು ಬೆಳಗಾವಿಗೆ ಅಂತಿಮಗೊಳ್ಳುವ ಸಾಧ್ಯತೆ ಇದ್ದು, ಈಗಾಗಲೇ ಅಲ್ಲಿನ ನಾಯಕರೊಂದಿಗೆ ಮಾತನಾಡಿದ್ದೇನೆ. ಅಧಿಕೃತವಾಗಿ ಟಿಕೆಟ್ ಘೋಷಣೆ ಬಳಿಕ ಚುನಾವಣೆ ಪ್ರಚಾರ ನಡೆಸುವೆ ಎಂದರು.
ಬೆಳಗಾವಿಯ ಬಿಜೆಪಿ ಹಿರಿಯ ನಾಯಕರಾದ ಪ್ರಭಾಕರ ಕೋರೆ, ಈರಣ್ಣ ಕಡಾಡಿ ಅವರೊಂದಿಗೆ ಸಂಪರ್ಕದಲ್ಲಿದ್ದು, ಚರ್ಚೆ ಮಾಡಿದ್ದೇನೆ. ಎಲ್ಲರೂ ಸೇರಿಕೊಂಡು ಚುನಾವಣೆ ಎದುರಿಸೋಣ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ವೈಯಕ್ತಿಕ ಕೆಲಸಕ್ಕೆ ದೆಹಲಿಗೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಅವರು ಪಕ್ಷದ ಕೆಲಸಕ್ಕಾಗಿ ಇಲ್ಲವೇ ವೈಯಕ್ತಿಕವಾಗಿ ದೆಹಲಿಗೆ ಹೋಗಿರಬಹುದು. ನನಗೆ ಟಿಕೆಟ್ ತಪ್ಪಿಸುವ ಸಲುವಾಗಿಯೇ ಹೋಗಿದ್ದಾರೆ ಎಂಬುದು ಸುಳ್ಳು, ಆ ಕುತಂತ್ರ ನಡೆದಿಲ್ಲ.
ಮೋದಿ ಮತ್ತು ಅಮಿತ್ ಶಾ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು, ಬೇರೆ ಬೇರೆ ರಾಜ್ಯಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಿರುವ ಕಾರಣಕ್ಕೆ ರಾಜ್ಯದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ. ಇದಕ್ಕೆ ತಪ್ಪು ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.