ಕಾಂಗ್ರೆಸ್ ಮೊದಲ ಪಟ್ಚಿಯಲ್ಲಿ ತಂದೆ-ಮಕ್ಕಳ ದರ್ಬಾರ್! ಯಾರಿಗೆಲ್ಲ ಸಿಕ್ತು ಟಿಕೆಟ್?
ಬೆಂಗಳೂರು(ಮಾ.25) 2023 ರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ 3 - 4 ದಿನಗಳಿಂದ ಪಟ್ಟಿ ಬಿಡುಗಡೆಯಾಗಲಿದೆ ಎಂದು ಸುದ್ದಿ ಹಬ್ಬಿತ್ತು. ಇದೀಗ ಕೊನೆಗೂ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುವ ದಿನವೇ ಕಾಂಗ್ರೆಸ್ 124 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ನ ಮೊದಲ ಪಟ್ಟಿಯಲ್ಲಿ ಎಂದಿನಂತೆ ಈ ಬಾರಿ ಕೂಡ ತಂದೆ ಮಕ್ಕಳಿಗೆ ಟಿಕೆಟ್ ನೀಡಲಾಗಿದೆ. ಯಾರಿಗೆಲ್ಲ ಯಾವ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಎಂ ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ : ಕಾಂಗ್ರೆಸ್ ನ ಮೊದಲ ಪಟ್ಟಿಯಲ್ಲಿ ವಿಜಯನಗರ ಕ್ಷೇತ್ರದ ಹಾಲಿ ಶಾಸಕ ಎಂ. ಕೃಷ್ಣಪ್ಪ ಮತ್ತು ಅವರ ಪುತ್ರ ಪ್ರಿಯಾ ಕೃಷ್ಣ ಅವರಿಗೆ ಟಿಕೆಟ್ ಲಭಿಸಿದೆ. 2018 ರ ಚುನಾವಣೆಯಲ್ಲಿ ಗೋವಿಂದರಾಜನಗರ ಕ್ಷೇತ್ರದಿಂದ ನಿಂತಿದ್ದ ಪ್ರಿಯಾ ಕೃಷ್ಣ ಅವರು ವಿ. ಸೋಮಣ್ಣ ಅವರ ವಿರುದ್ಧ ಸೋಲು ಕಂಡಿದ್ದರು. ಈ ಬಾರಿ ಕೂಡ ಗೋವಿಂದರಾಜನಗರ ಕ್ಷೇತ್ರದಿಂದಲೇ ಪ್ರಿಯಾ ಕೃಷ್ಣ ಅವರಿಗೆ ಟಿಕೆಟ್ ಲಭಿಸಿದೆ. ಕೃಷ್ಣಪ್ಪ ಅವರಿಗೆ ವಿಜಯನಗರ ಕ್ಷೇತ್ರದಿಂದಲೇ ಟಿಕೆಟ್ ನೀಡಲಾಗಿದೆ.
ಕೆ.ಹೆಚ್.ಮುನಿಯಪ್ಪ ಮತ್ತು ರೂಪ ಶಶಿಧರ್:
ಕರ್ನಾಟಕ ರಾಜಕೀಯ ರಂಗದ ಅತ್ಯಂತ ಹಿರಿಯ ರಾಜಕಾರಣಿಗಳಲ್ಲೊಬ್ಬರಾಗಿರುವ ಮುನಿಯಪ್ಪ ಅವರಿಗೆ ಈ ಬಾರಿ ದೇವನಹಳ್ಳಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ. 2018ರಲ್ಲಿ ನಿಸರ್ಗ ನಾರಾಯಣಸ್ವಾಮಿ ಇಲ್ಲಿ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಮುನಿಯಪ್ಪ ಅವರ ಪುತ್ರಿ ಹಾಲಿ ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಅವರಿಗೆ ಈ ಬಾರಿ ಕೂಡ ಕೆಜಿಎಫ್ ನಿಂದಲೇ ಟಿಕೆಟ್ ಸಿಕ್ಕಿದೆ.
ಸೌಮ್ಯರೆಡ್ಡಿ ಮತ್ತು ರಾಮಲಿಂಗಾರೆಡ್ಡಿ: ಬಿಟಿಎಂ ಕ್ಷೇತ್ರದ ಶಾಸಕರಾಗಿರುವ ರಾಮಲಿಂಗಾ ರೆಡ್ಡಿ ಅವರು ಪ್ರಾಬಲ್ಯ ಹೊಂದಿರುವ ಸಮರ್ಥ ಅಭ್ಯರ್ಥಿಯಾಗಲಿದ್ದಾರೆ. ಅವರ ಪುತ್ರಿ ಸೌಮ್ಯಾ ರೆಡ್ಡಿ ಜಯನಗರ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ. 2018 ರಲ್ಲಿ ಮೊದಲ ಬಾರಿಗೆ ಜಯನಗರ ಕ್ಷೇತ್ರದಿಂದ ನಿಂತು ಗೆದ್ದಿರುವ ಸೌಮ್ಯಾ ರೆಡ್ಡಿಗೆ ಈ ಬಾರಿ ಕೂಡ ಟಿಕೆಟ್ ಲಭಿಸಿದೆ.
ಶಾಮನೂರು ಶಿವಶಂಕರಪ್ಪ ಮತ್ತು ಮಲ್ಲಿಕಾರ್ಜುನ್: 92 ವರ್ಷದ ಶಾಮನೂರು ಶಿವಶಂಕರಪ್ಪನವರು ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಇವರು ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಜೊತೆಗೆ ಹಿರಿಯ ನಾಯಕ ಕೂಡ. ಈ ಬಾರಿ ಕೂಡ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಇನ್ನು ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಕೂಡ ಈ ಬಾರಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಈ ಬಾರಿ ಟಿಕೆಟ್ ನೀಡಲಾಗಿದೆ. ಇಲ್ಲಿ 2018 ರಲ್ಲಿ ಬಿಜೆಪಿಯ ಎಸ್ ಎ ರವೀಂದ್ರನಾಥ್ ಗೆಲುವು ಸಾಧಿಸಿದ್ದರು. ಮಲ್ಲಿಕಾರ್ಜುನ 4071 ಮತಗಳ ಅಂತರದಿಂದ ಸೋಲು ಕಂಡಿದ್ದರು. ವಿಶೇಷವೆಂದರೆ ಮಲ್ಲಿಕಾರ್ಜುನ ಅವರ ರೈಸ್ ಮಿಲ್ ಮತ್ತು ಫಾರ್ಮ್ ಹೌಸ್‌ನಲ್ಲಿ ವನ್ಯಜೀವಿಗಳನ್ನು ಸಾಕಿರುವ ಆರೋಪವಿದೆ.