ಕುಟುಂಬದ ಜೊತೆ ಸಂಕ್ರಾಂತಿ ಆಚರಿಸಿದ ಎಚ್.ಡಿ.ಕುಮಾರಸ್ವಾಮಿ: ದೇವೇಗೌಡ್ರ ಆಶಿರ್ವಾದ ಪಡೆದ ನಿಖಿಲ್ ಮಗ ಅವ್ಯಾನ್!
ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಡಗರ ಕಳೆಗಟ್ಟಿದೆ. ಎಳ್ಳು ಬೆಲ್ಲವನ್ನ ಸವಿದು ಸುಗ್ಗಿ ಹಬ್ಬವನ್ನ ಕನ್ನಡ ತಾರೆಯರೂ ಸಂಭ್ರಮದಿಂದ ಆಚರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ತಮ್ಮ ಫಾರ್ಮ್ ಹೌಸ್‌ನಲ್ಲಿ ಸಾಕುಪ್ರಾಣಿಗಳ ಜೊತೆಗೆ ಸಂಕ್ರಾಂತಿ ಆಚರಿಸಿದ್ದಾರೆ.
ಸೂರ್ಯನ ಪಥ ಬದಲಾಗುವ ವರ್ಷದ ಮೊದಲ ಹಬ್ಬ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ, ಮನೆ ಮನಗಳಲ್ಲಿ ಸಂಭ್ರಮ ನೆಲೆಸಲಿ ಎಂದು ಹಾರೈಸುತ್ತೇನೆ ಎಂದು ತಮ್ಮೆಲ್ಲಾ ಅಭಿಮಾನಿಗಳಿಗೆ ನಿಖಿಲ್ ಕುಮಾರಸ್ವಾಮಿ ಶುಭ ಹಾರೈಸಿದ್ದಾರೆ.
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ತೇಜೋಮಯನಾದ ಸೂರ್ಯ ದೇವನು ಪಥ ಬದಲಿಸುವ ಈ ಉತ್ತರಾಯಣ ಪುಣ್ಯಕಾಲವು ಎಲ್ಲರ ಬದುಕಿನಲ್ಲೂ ಸುಖ-ಶಾಂತಿ, ನೆಮ್ಮದಿ-ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಶುಭ ಹಾರೈಸಿದ್ದಾರೆ.
ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಸಹ ತಮ್ಮ ತಂದೆ ಹಾಗೂ ಮಗನೊಟ್ಟಿಗೆ ಸಾಂಪ್ರದಾಯಿಕವಾಗಿ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದು, ಕುಟುಂಬದ ಮುದ್ದಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಂಕ್ರಾಂತಿ ಹಬ್ಬದ ಶುಭಕೋರಿದ್ದಾರೆ.
ತಮ್ಮ ಫಾರ್ಮ್ ಹೌಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅನಿತಾ, ನಿಖಿಲ್, ರೇವತಿ, ಮೊಮ್ಮಗ ಅವ್ಯಾನ್ ದೇವ್ ಹಸು, ಕರುಗಳು ಹಾಗೂ ಕುರಿಗಳೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.
ರೇವತಿ ನಿಖಿಲ್ ಕುಮಾರಸ್ವಾಮಿ, ಎಚ್.ಡಿ.ಕುಮಾರಸ್ವಾಮಿ, ಅನಿತಾ ತಮ್ಮ ಫಾರ್ಮ್ ಹೌಸ್‌ನಲ್ಲಿನ ಹಸುವಿಗೆ ಅರಿಶಿನ ಕುಂಕುಮ ಹಚ್ಚಿ, ಪೂಜೆ ಮಾಡಿ ಆಶಿರ್ವಾದ ಪಡೆದರು.
ದೇವೇಗೌಡ, ಚೆನ್ನಮ್ಮ ಮರಿ ಮೊಮ್ಮಗ ಅವ್ಯಾನ್ ದೇವ್ ಜೊತೆ ಸಂಕ್ರಾಂತಿ ಹಬ್ಬದಲ್ಲಿ ಸಮಯ ಕಳೆದರು. ಈ ವೇಳೆ ಅವ್ಯಾನ್ ದೇವ್ ತಾತ ಹಾಗೂ ಅಜ್ಜಿಯ ಆಶಿರ್ವಾದ ಪಡೆದು ಸಿಹಿ ತಿನಿಸಿದನು.
ನಟ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಈಗ ಸಿಕ್ಕಾಪಟ್ಟೆ ಬ್ಯುಸಿ ಎನ್ನಬಹುದು. ಸಿನಿಮಾ ಕೆಲಸದ ಜೊತೆಗೆ ರಾಜಕಾರಣ, ಪತ್ನಿ, ಮಗನಿಗೆ ಹೆಚ್ಚಿನ ಸಮಯ ಕೊಡಬೇಕಿದೆ. ಇದೀಗ ಕುಟುಂಬದ ಜೊತೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ಮಗನಿಗೆ ಅವ್ಯಾನ್ ದೇವ್ ಎಂದು ಹೆಸರಿಟ್ಟಿದ್ದಾರೆ. ನಿಖಿಲ್-ರೇವತಿ ಅವರ ಮುದ್ದಿನ ಮಗನಿಗೆ ಎರಡು ವರ್ಷ ಮೂರು ತಿಂಗಳು. ಕಳೆದ ಸೆಪ್ಟೆಂಬರ್ 24ರಂದು ಅವ್ಯಾನ್ ದೇವ್ ಅವರ ಎರಡನೇ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು.
ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿನ ಫಾರ್ಮ್ ಹೌಸ್‌ನಲ್ಲಿ 2020 ಏಪ್ರಿಲ್ 17ರಂದು ನಿಖಿಲ್ ಕುಮಾರಸ್ವಾಮಿ, ರೇವತಿ ಅವರು ಮದುವೆ ಆಗಿದ್ದರು. ಕೊರೊನಾ ಸೋಂಕು ಇದ್ದ ಕಾರಣಕ್ಕೆ ಸಿಂಪಲ್ ಆಗಿ ಈ ಮದುವೆ ನಡೆದಿತ್ತು.