ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿಲ್ಲ: ಬೊಮ್ಮಾಯಿ
ಗೃಹಲಕ್ಷ್ಮೀ ಯೋಜನೆಯಡಿ ಇನ್ನೂ ಬಹಳಷ್ಟು ಮಹಿಳೆಯರಿಗೆ ಹಣ ಬಂದಿಲ್ಲ. ಹೀಗಾಗಿ ಕಾಂಗ್ರೆಸ್‌ನ ಗ್ಯಾರಂಟಿಗಳು ಸುಳ್ಳಿನ ಮೂಟೆಗಳಾಗಿವೆ ಎಂದು ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಲಕ್ಷ್ಮೇಶ್ವರ (ಏ.10): ಕಾಂಗ್ರೆಸ್ ಅನುಷ್ಠಾನಕ್ಕೆ ತಂದಿರುವ ಗ್ಯಾರಂಟಿ ಯೋಜನೆಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ. ವಿಶೇಷವಾಗಿ ಗೃಹಲಕ್ಷ್ಮೀ ಯೋಜನೆಯಡಿ ಇನ್ನೂ ಬಹಳಷ್ಟು ಮಹಿಳೆಯರಿಗೆ ಹಣ ಬಂದಿಲ್ಲ. ಹೀಗಾಗಿ ಕಾಂಗ್ರೆಸ್‌ನ ಗ್ಯಾರಂಟಿಗಳು ಸುಳ್ಳಿನ ಮೂಟೆಗಳಾಗಿವೆ ಎಂದು ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ವಿವಿಧ ಗ್ರಾಮಗಳಿಗೆ ಅವರು ಭೇಟಿ ನೀಡಿ ಚುನಾವಣೆ ಪ್ರಚಾರ ನಡೆಸಿದರು. ಬಸಾಪುರ, ರಾಮಗೇರಿ, ಶಿಗ್ಲಿ, ದೊಡ್ಡೂರು, ಸೂರಣಗಿ ಗ್ರಾಮಗಳಲ್ಲಿ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು. ಬಿಜೆಪಿಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲ ವರ್ಗಗಳ ಜನರೂ ಬಹಿರಂಗವಾಗಿ ಬಂದು ಬೆಂಬಲ ಸೂಚಿಸುತ್ತಿದ್ದಾರೆ. ಹೀಗಾಗಿ ದೊಡ್ಡ ಅಂತರದಿಂದ ನಾನು ಗೆಲ್ಲುವ ವಿಶ್ವಾಸ ಇದೆ ಎಂದರು.
ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಭಯೋತ್ಪಾದನೆ ಹತ್ತಿಕ್ಕಿದ್ದಾರೆ. ಭಯೋತ್ಪಾದಕರು ಇರುವಲ್ಲಿಗೆ ಹೋಗಿ ಅವರನ್ನು ಸದೆ ಬಡಿದಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಉಜ್ವಲಾ ಯೋಜನೆಯಡಿ ಉಚಿತ ಗ್ಯಾಸ್ ವಿತರಿಸಿದ್ದಾರೆ. ರೈತರಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬಡವರು ಹಸಿವೆಯಿಂದ ನರಳಬಾರದು ಎಂಬ ಕಾರಣಕ್ಕಾಗಿ ಪ್ರತಿಯೊಬ್ಬರಿಗೂ ಉಚಿತವಾಗಿ ಅಕ್ಕಿ ಕೊಡುತ್ತಿದ್ದಾರೆ.
ಆದರೆ ರಾಜ್ಯ ಸರ್ಕಾರ ಹಿಡಿ ಅಕ್ಕಿ ಕೊಡದಿದ್ದರೂ ನಾವೇ ಅಕ್ಕಿಯನ್ನು ಕೊಡುತ್ತಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದರು. ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ.ಸಿ. ಪಾಟೀಲ, ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಶಾಸಕ ಡಾ. ಚಂದ್ರು ಲಮಾಣಿ, ಪ್ರೊ. ಎಸ್.ವಿ. ಸಂಕನೂರ ಮಾತನಾಡಿದರು.
Basavaraj Bommai
ಸಣ್ಣವೀರಪ್ಪ ಹಳ್ಳೆಪ್ಪನವರ, ಸುನೀಲ ಮಹಾಂತಶೆಟ್ಟರ, ಗಂಗಾಧರ ಮೆಣಸಿನಕಾಯಿ, ರಮೇಶ ಹಾಳದೋಟದ, ಸೋಮಣ್ಣ ಡಾಣಗಲ್ಲ, ಶಂಕ್ರಣ್ಣ ಕಾಳೆ, ಲಿಂಗಶೆಟ್ಟಿ, ಭೀಮಣ್ಣ ಯಂಗಾಡಿ, ಮಂಜುನಾಥ ಮಾಗಡಿ, ಡಿ.ವೈ. ಹುನಗುಂದ, ಎಂ.ಎಸ್. ದೊಡ್ಡಗೌಡ್ರ, ಅಶೋಕ ಶಿರಹಟ್ಟಿ, ನೀಲೇಶ ಕಾಳೆ, ರಮೇಶ ದನದಮನಿ, ರುದ್ರಪ್ಪ ಲಮಾಣಿ ಇದ್ದರು. ಬಸವರಾಜ ಬೊಮ್ಮಾಯಿ ಅವರು ರಾಮಗೇರಿ ಹತ್ತಿರ ಬರುತ್ತಿದ್ದಂತೆ ಅಲ್ಲಿನ ಚೆಕ್‌ಪೋಸ್ಟ್ ಸಿಬ್ಬಂದಿ ಅವರ ಕಾರು ತಡೆದು ತಪಾಸಣೆ ನಡೆಸಿದರು. ಆನಂತರ ಅವರು ಬಸಾಪುರ ಗ್ರಾಮದ ಬಸವಣ್ಣ ದೇವರು, ರಾಮಗೇರಿಯ ಗ್ರಾಮ ದೇವತೆ ದ್ಯಾಮವ್ವ ದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.