ರಾಜ್ಯವನ್ನು ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಒಯ್ದ ಸಿದ್ದರಾಮಯ್ಯ ಬಜೆಟ್: ವಿಜಯೇಂದ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ರೈತ ವಿರೋಧಿ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಶೂನ್ಯ ಪ್ರಗತಿಯ ಬಜೆಟ್ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಬೆಂಗಳೂರು (ಫೆ.17): ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ರೈತ ವಿರೋಧಿ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಶೂನ್ಯ ಪ್ರಗತಿಯ ಬಜೆಟ್ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬಜೆಟ್‌ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯವನ್ನು 20 ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುವ ಬಜೆಟ್ ಇದು. ಯುವಕರಿಗೆ ಯಾವುದೇ ಕಾರ್ಯಕ್ರಮಗಳನ್ನಾಗಲಿ ಯೋಜನೆಗಳನ್ನಾಗಲಿ ಘೋಷಣೆ ಮಾಡಿಲ್ಲ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮತ್ತು ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳಲು ಸಿದ್ದರಾಮಯ್ಯ ಸಮಯ ವ್ಯರ್ಥ ಮಾಡಿದ್ದಾರೆ ಎಂದು ತಿಳಿಸಿದರು.
ಬಜೆಟ್‍ನ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ. ಮೊನ್ನೆ ದೆಹಲಿ ಚಲೋ ಮಾಡಿದ್ದರು. ದೆಹಲಿಯಲ್ಲಿ ರಾಜ್ಯ ಸರ್ಕಾರದ ಗೌರವವನ್ನು ಹರಾಜು ಹಾಕುವ ಕೆಲಸ ಆಗಿತ್ತು. ಇವತ್ತು ಕೂಡ ಮುಖ್ಯಮಂತ್ರಿಗಳು ತಮ್ಮ ಬಜೆಟ್‍ನಲ್ಲಿ ಕೇಂದ್ರ ಸರ್ಕಾರವನ್ನು ದೂರುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒಂದು ರುಪಾಯಿ ಕೊಡದ ಬಜೆಟ್ ಇದಾಗಿದೆ. ಸಂಕಷ್ಟದಲ್ಲಿರುವ ರೈತರು ಬಜೆಟ್ ಮೂಲಕ ಪರಿಹಾರದ ನಿರೀಕ್ಷೆಯಲ್ಲಿದ್ದರು. ಇದರಡಿ ಮಹಿಳೆಯರಿಗೂ ಅನುಕೂಲ ಆಗುವುದಿಲ್ಲ.
ಇವರು ತಮ್ಮ ಪ್ರಣಾಳಿಕೆಯಲ್ಲಿ ನೇಕಾರರ ಬಗ್ಗೆ ಮಾತನಾಡಿದ್ದರು. ನೇಕಾರರ ಪರವಾಗಿ ಯಾವುದೇ ಒಂದು ಯೋಜನೆಯನ್ನು ಘೋಷಣೆ ಮಾಡಿಲ್ಲ. ಯೋಜನೆ ಘೋಷಿಸುವುದು ಇರಲಿ; ಆ ನೇಕಾರರ ಹೆಸರನ್ನೂ ಉಲ್ಲೇಖಿಸಿಲ್ಲ ಎಂದು ಟೀಕಿಸಿದರು.