ಪಕ್ಷ ಮೀರಿದ ಪ್ರೀತಿ: ಬಿಜೆಪಿ-ಕಾಂಗ್ರೆಸ್ ನಾಯಕರ ಮಕ್ಕಳ ನಿಶ್ಚಿತಾರ್ಥ
ರಾಜ್ಯ ರಾಜಕಾರಣದಲ್ಲಿ ಅಪರೂಪದ ಸಂಬಂಧ ಬೆಸೆದುಕೊಂಡಿದೆ. ಪಕ್ಷ ಬೇರೆ, ಜಾತಿ ಬೇರೆ ಆದರೂ, ಮಕ್ಕಳ ಅಂತರ್ಜಾತಿ ಪ್ರೀತಿಗೆ ರಾಜ್ಯದ ಇಬ್ಬರು ಪ್ರಮುಖ ರಾಜಕಾರಣಿಗಳು ಒಪ್ಪಿಗೆ ಸೂಚಿಸಿ ಬೀಗರಾಗಿದ್ದಾರೆ.
ರಾಜ್ಯದ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರಮುಖ ನಾಯಕರು ಬೀಗರಾಗಿದ್ದಾರೆ. ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಪಕ್ಷ, ಸಿದ್ಧಾಂತ ಹಾಗೂ ಜಾತಿಯನ್ನೂ ಮೀರಿ ಬೀಗರಾಗಿದ್ದಾರೆ. ಎಸ್‌ಆರ್ ವಿಶ್ವನಾಥ್ ಪುತ್ರಿ ಹಾಗೂ ಬೈರತಿ ಸುರೇಶ್ ಅವರ ಪುತ್ರನ ನಡುವೆ ಇತ್ತೀಚೆಗೆ ಖಾಸಗಿ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ.
ಎಸ್‌ಆರ್ ವಿಶ್ವನಾಥ್ ಬಿಜೆಪಿಯ ಯಲಹಂಕ ಶಾಸಕ, ಇನ್ನು ಬೈರತಿ ಸುರೇಶ್ ಪಕ್ಕದ ಹೆಬ್ಬಾಳ ಕ್ಷೇತ್ರದ ಶಾಸಕ. ವಿಶ್ವನಾಥ್ ಅವರ ಪುತ್ರಿ ಅಪೂರ್ವ ಹಾಗೂ ಬೈರತಿ ಸುರೇಶ್ ಪುತ್ರ ಸಂಜಯ್ ಅವರು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿದ್ದಾರೆ. ಬುಧವಾರ ಇವರ ಎಂಗೇಜ್‌ಮೆಂಟ್ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದಿದೆ. ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಇಬ್ಬರು ರಾಜಕೀಯ ನಾಯಕರ ಆಪ್ತರು ಆಗಮಿಸಿ ಜೋಡಿಗೆ ಶುಭ ಹಾರೈಸಿದ್ದಾರೆ.
ಅಪೂರ್ವ ಹಾಗೂ ಸಂಜಯ್ ಇಬ್ಬರೂ ಮಲ್ಲೇಶ್ವರದಲ್ಲಿ ಖಾಸಗಿ ಶಾಲೆಯಲ್ಲಿ ಓದುವಾಗಲೇ ಸ್ನೇಹಿತರಾಗಿದ್ದರು. ಬಳಿಕ ಈ ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಮನೆಯವರನ್ನು ಮದುವೆಗೆ ಒಪ್ಪಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಸಿದ್ದಾಂತವಾಗಿ ವಿರೋಧಗಳಾಗಿದ್ದರೂ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬೀಗರಾಗಿದ್ದಾರೆ. ಎಸ್‌ಆರ್ ವಿಶ್ವನಾಥ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇನ್ನು ಬೈರತಿ ಸುರೇಶ್ ಕುರುಬ ಸಮುದಾಯವರು. ಮಕ್ಕಳ ಪ್ರೀತಿ ಹಿನ್ನೆಲೆ ಜಾತಿ ಮೀರಿ ಸಂಬಂಧ ಬೆಳೆಸಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ಮರದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಅವರು ಭಾಗವಹಿಸಿದ್ದರು. ಜತೆಗೆ ಸಚಿವ ಡಾ ಎಂ ಸಿ ಸುಧಾಕರ್, ಶಾಸಕ ಶರತ್ ಬಚ್ಚೇಗೌಡ ಕೂಡ ಉಪಸ್ಥಿತರಿದ್ದರು.
ಸಿಂಗನಾಯಕನಹಳ್ಳಿ ರಾಮಯ್ಯ ವಿಶ್ವನಾಥ್ 1990 ರಲ್ಲಿ ಅಯೋಧ್ಯೆಗೆ ರಾಮ ರಥ ಯಾತ್ರೆ, ರಾಮ ಜ್ಯೋತಿ ಮತ್ತು ರಾಮ ಪಾದುಕೆ ಮೆರವಣಿಗೆಗಳಲ್ಲಿ ಭಾಗವಹಿಸಿದ್ದರು. ಹೋರಾಟಗಳ ಮೂಲಕ ಬಿಜೆಪಿ ನಾಯಕಾಗಿಯೇ ಮುಂದುವರಿದು 2008 ರಿಂದಲೂ ಸತತವಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದ ಎಸ್‌ಆರ್ ವಿಶ್ವನಾಥ್, ಈಗ ತಿರುಮಲ ತಿರುಪತಿ ದೇವಸ್ಥಾನಗಳ ಸದಸ್ಯರಾಗಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 8 ಕ್ಷೇತ್ರಗಳ ಪೈಕಿ ಏಕೈಕ ಬಿಜೆಪಿ ಶಾಸಕರಾಗಿದ್ದಾರೆ.
ಸಚಿವ ಬೈರತಿ ಸುರೇಶ್ ಕುರುಬ ಸಮುದಾಯದ ನಾಯಕ, ಸಿಎಂ ಸಿದ್ದರಾಮಯ್ಯನವರ ಬಲಗೈ ಬಂಟ. ಬೈರತಿ ಸುರೇಶ್ ಅವರು 2018ರಲ್ಲಿ ಹೆಬ್ಬಾಳ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು. 2012ರಲ್ಲಿ ಎಂಎಲ್‌ಸಿ ಆಗುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ಬೈರತಿ ಸುರೇಶ್ ಅವರ ಸಹೋದರ ಬೈರತಿ ಬಸವರಾಜು ಅವರು ಕೂಡ ರಾಜಕೀಯದಲ್ಲಿದ್ದಾರೆ. ಹೆಬ್ಬಾಳ ಪಕ್ಕದ ಕೆ.ಆರ್. ಪುರದಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು.