ಕಾಂಗ್ರೆಸ್ ನಾಯಕರ ಫೋಟೋ ತೆವಲಿಗೆ ಅಮಾಯಕ 11 ಆರ್‌ಸಿಬಿ ಅಭಿಮಾನಿಗಳ ಸಾವು; ಬಿಜೆಪಿ ಆರೋಪ
ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತ ಘಟನೆಯ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ನಾಯಕರ ಫೋಟೋ ತೆವಲಿಗೆ ಅಮಾಯಕ ಆರ್‌ಸಿಬಿ ಅಭಿಮಾನಿಗಳ ಸಾವು ಆಗಿದೆ ಎಂದು ಆರೋಪಿಸಿದೆ.

ಬೆಂಗಳೂರು (ಜೂ. 17): ಕಾಂಗ್ರೆಸ್ ನಾಯಕರ ಫೋಟೋ ತೆವಲಿಗೆ ಅಮಾಯಕ ಆರ್‌ಸಿಬಿ ಅಭಿಮಾನಿಗಳ ಸಾವು ಆಗಿದೆ. ಜೊತೆಗೆ, ಸರ್ಕಾರ ಮಾಡಿದ ತಪ್ಪಿಗೆ ಪೊಲೀಸ್ ಅಧಿಕಾರಿಗಳಿಗೆ ಬರೆ ಹಾಕಿದ್ದು ಸರಿಯೇ? ಎಂದು ಬಿಜೆಪಿ ನಾಯಕರು ಖಂಡಿಸಿದರು. ಮುಂದುವರೆದು, ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಘಟನೆ ಕುರಿತು ಹೈಕೋರ್ಟ್ ಸ್ವಯಂ ಪ್ರೇರಣೆಯ ಪ್ರಕರಣ ದಾಖಲಿಸಿಕೊಂಡಿದೆ ಎಂದರೆ, ಸರ್ಕಾರದ ಮೇಲೆ ಯಾರಿಗೂ ನಂಬಿಕೆ ಇಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಬೆಂಗಳೂರಿನ ಸ್ವತಂತ್ರ್ಯ ಉದ್ಯಾನದ ಬಳಿ ನಡೆದ ಪ್ರತಿಭಟನೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರ ತಪ್ಪು ಮಾಡಿಲ್ಲದಿದ್ದರೆ ಸರಿಯಾಗಿ ತನಿಖೆ ನಡೆಸಬೇಕಿತ್ತು. ಈಗ ಹೈಕೋರ್ಟ್ ಸ್ವಯಂ ಪ್ರೇರಣೆಯ ಪ್ರಕರಣ ದಾಖಲಿಸಿಕೊಂಡಿದೆ.
ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದರೆ, ಕೋರ್ಟ್ ಸರ್ಕಾರವನ್ನು ನಂಬುತ್ತಿಲ್ಲ ಎಂದರ್ಥ. ಸತ್ತಿರುವ 11 ಜನರ ಕುಟುಂಬದವರನ್ನೇ ಕೇಳಿ ತನಿಖೆಗೆ ನೀಡಬಹುದಿತ್ತು. ಮೊದಲು ಜಿಲ್ಲಾಧಿಕಾರಿ, ಆ ನಂತರ ನಿವೃತ್ತ ನ್ಯಾಯಾಧೀಶರು, ಆ ಬಳಿಕ ಎಸ್‌ಐಟಿ ತನಿಖೆ ಎಂದು ಹೇಳಿದ್ದಾರೆ. ಯಾವುದರಲ್ಲೂ ಖಚಿತತೆ ಇಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬದವರು ಕ್ರಿಕೆಟಿಗರ ಜೊತೆಗೆ ಫೋಟೋ ಶೂಟ್ ಮಾಡಿಕೊಂಡಿದ್ದರಿಂದಲೇ 11 ಜನರು ಮೃತರಾಗಿದ್ದಾರೆ. ಬಿಜೆಪಿ ಎಲ್ಲ ಬಗೆಯ ಹೋರಾಟಗಳನ್ನು ಮಾಡಿದೆ. ಇನ್ನು ಮುಂದೆಯೂ ಹೋರಾಟ ಮಾಡಲಾಗುವುದು. ಸರ್ಕಾರವೇ ಜನರನ್ನು ವಿಧಾನಸೌಧಕ್ಕೆ ಆಹ್ವಾನಿಸಿದೆ. ಹಾಗೆ ಆಹ್ವಾನ ನೀಡದೇ ಹೋಗಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ. ನಾವು ಪ್ರತಿಭಟನೆ ಮಾಡಿದಾಗ ನೂರಾರು ಪೊಲೀಸರು ಬಂದಿದ್ದರು. ಅದೇ ರೀತಿ ಎರಡು ಲಕ್ಷ ಜನರನ್ನು ನಿಯಂತ್ರಣ ಮಾಡಲು ಹೆಚ್ಚು ಪೊಲೀಸರನ್ನು ನಿಯೋಜಿಸಬೇಕಿತ್ತು ಎಂದರು.
ಇದಕ್ಕಾಗಿಯೇ ಮೂರು ದಿನದ ಅಧಿವೇಶನ ಕರೆಯಲು ಆಗ್ರಹಿಸಿದ್ದೇನೆ. ಸರ್ಕಾರದ ತಪ್ಪಿಲ್ಲ ಎಂದಾದರೆ ಯಾರ ತಪ್ಪು ಎಂದು ಸರಿಯಾಗಿ ತಿಳಿಸಲಿ. ಅಕ್ಟೋಬರ್ ತಿಂಗಳಲ್ಲೇ ಈ ಸರ್ಕಾರದ ಕಥೆ ಮುಗಿಯಲಿದೆ. ಎಲ್ಲ ಶಾಸಕರು ನಾವೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನು 2028 ಕ್ಕೆ ಇವರು ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ? ಡಿ.ಕೆ.ಶಿವಕುಮಾರ್ ಬಹಳ ಚಿಂತೆಯಲ್ಲಿದ್ದಾರೆ ಎಂದರು.
ಸರ್ಕಾರ ಪ್ರತಿಷ್ಠೆಗೆ RCB ಅಭಿಮಾನಿಗಳನ್ನು ಬಲಿಕೊಟ್ಟ ಕಾಂಗ್ರೆಸ್‌ಗೆ ಧಿಕ್ಕಾರ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಬೆಂಗಳೂರಿನ ಕಾಲ್ತುಳಿತ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ಎದ್ದು ಕಾಣುತ್ತುದೆ. ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಲಕ್ಷಾಂತರ ಜನ ಸೇರುತ್ತಾರೆಂಬ ಮಾಹಿತಿ ಇದ್ದರೂ ಒಂದೇ ದಿನದಲ್ಲಿ ಎರಡೆರಡು ಕಾರ್ಯಕ್ರಮ ಆಯೋಜಿಸಿ ಭದ್ರತೆ ನೀಡಲಾಗದೇ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಪ್ರಚಾರದ ಗೀಳಿಗೆ ಅಮಾಯಕರ ಬಲಿ ಪಡೆಯಲಾಗಿದೆ ಎಂದು ಆರೋಪಿಸಿದರು.
ಸರ್ಕಾರದ ವೈಫಲ್ಯದ ಹೊಣೆ ಹೊತ್ತುಕೊಂಡು ಸಿಎಂ, ಡಿಸಿಎಂ, ಗೃಹಸಚಿವರ ರಾಜೀನಾಮೆ ನೀಡಬೇಕು. ಜೂನ್ 4ನೇ ತಾರೀಕು ರಾಜ್ಯಾದ್ಯಂತ, ದೇಶಾದ್ಯಂತ #RCB ಸಂಭ್ರಮಾಚರಣೆ ನಡೆಯುತ್ತಿದ್ದರೆ, ಬೆಂಗಳೂರಿನಲ್ಲಿ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಡುವೆ ಪೈಪೋಟಿ ನಡೆಯುತ್ತಿತ್ತು.
ಆರ್‌ಸಿಬಿ (RCB) ಗೆಲುವಿನ ಸಂಭ್ರಮವನ್ನು ನಮ್ಮ ಸರ್ಕಾರದ ಜನಪ್ರಿಯತೆ ಹೆಚ್ಚಿಸಿಕೊಳ್ಳಬೇಕು ಎಂಬ ಪುಕ್ಕಟ್ಟೆ ಪ್ರಚಾರ ಪಡೆದುಕೊಳ್ಳುವ ಹಠ ಹಾಗೂ ಚಟಕ್ಕೆ ಬಿದ್ದು ಉಪಮುಖ್ಯಮಂತ್ರಿಗಳಂತೂ ಏರ್ಪೋರ್ಟ್ ಗೆ ದಾವಿಸಿ ಕ್ರೀಡಾಪಟುಗಳನ್ನು ಸ್ವಾಗತಿಸಿ ಕ್ರೀಡಾಂಗಣದಲ್ಲಿ ಕಪ್ ಎತ್ತಿ ಹಿಡಿದು ತಾವೇ ಗೆದ್ದವರಂತೆ ಬಿಂಬಿಸಿಕೊಂಡರು.
ಈ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ವರದಿ ಕೊಟ್ಟರೂ ಸಹ ಲೆಕ್ಕಿಸದೇ ಪುಕ್ಕಟ್ಟೆ ಪ್ರಚಾರದ ಗೀಳಿಗೆ ಬಿದ್ದು ಎರಡೂ ಕಡೆ ಕಾರ್ಯಕ್ರಮ ನಡೆಸಿದರ ಪರಿಣಾಮವಾಗಿ 11 ಮುಗ್ಧ ಜೀವಗಳ ಬಲಿ ತೆಗೆದುಕೊಂಡರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.