ಲೋಕಸಭಾ ಚುನಾವಣೆ ರಂಗೇರುತ್ತಿದ್ದರೂ, ಊರ ಉಸಾಬರಿ ಬಿಟ್ಟು ಗೋಶಾಲೆಗೆ ತೆರಳಿದ ಬಸವನಗೌಡ ಪಾಟೀಲ್ ಯತ್ನಾಳ್!
ವಿಜಯಪುರ (ಮಾ.29): ರಾಜ್ಯದಲ್ಲಿ ಬಿರು ಬೇಸಿಗೆಯನ್ನೂ ಲೆಕ್ಕಿಸದೇ ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ಪ್ರತಿಬಾರಿ ಚುನಾವಣೆಯಲ್ಲಿ ಅಬ್ಬರಿಸುತ್ತಿದ್ದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಯಾರ ಉಸಾಬರಿಯೂ ಬೇಡವೆಂದು ತಮ್ಮ ಗೋಶಾಲೆಯಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ.
ಬಸವನಗೌಡ ಪಾಟೀಲ್ ಯತ್ನಾಳ್ ಎಂದರೆ ಕರ್ನಾಟಕದಲ್ಲಿ ಖಟ್ಟರ್ ಹಿಂದೂ ಎಂದು ಹೇಳುತ್ತಾರೆ. ಹಿಂದೂ ಧರ್ಮದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವವರೇ ಅಲ್ಲ.
ಆದರೆ, ಈಗ ಲೋಕಸಭಾ ಚುನಾವಣೆ ವೇಳೆ ಯಾವುದೇ ಮಾತನಾಡದೇ ಸೈಲೆಂಟ್ ಆಗಿದ್ದಾರೆ.. ಊರ (ಯಾರ) ಉಸಾಬರಿಯೇ ಬೇಡವೆಂದು ತಮ್ಮ ಗೋಶಾಲೆಗೆ ತೆರಳಿ ಅಲ್ಲಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ.
ಬಸವನಗೌಡ ಪಾಟೀಲ್ ಯತ್ನಾಳ್ ಅವರು ಎಷ್ಟೇ ಬ್ಯುಸಿಯಾಗಿದ್ದರೂ ತಮ್ಮ ಗೋಶಾಲೆಗೆ ಮಾತ್ರ ಭೇಟಿ ಮಾಡುವುದನ್ನು ತಪ್ಪಿಸುವುದಿಲ್ಲ. ಇನ್ನು ತಮಗೆ ರಾಜಕೀಯ ಚಟುವಟಿಕೆಗಳಲ್ಲಿ ಆಯಾಸವಾದಲ್ಲಿ ಗೋಶಾಲೆಗೆ ಹೋಗಿ ಬರುತ್ತಾರೆ.
ಇಡೀ ರಾಜ್ಯಾದ್ಯಂತ ಲೋಕಸಭಾ ಚುನಾವಣೆ ಕಾವು ಜೋರಾಗಿದ್ದು, ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಆದರೆ, ಚುನಾವಣಾ ಪ್ರಚಾರದಲ್ಲಿ ಶಾಸಕ ಬಸವನಗೌಡ ಪಾಟೀಲ್ ಹೆಚ್ಚಾಗಿ ಕಾಣಿಸಿಕೊಳ್ಳದೇ ಗೋಶಾಲೆಯಲ್ಲಿ ಸಮಯ ಕಳೆಯುತ್ತಿದ್ದಾರೆ.
ಲೋಕಸಭಾ ಚುನಾವಣೆ ಘೋಷಣೆ ಬಳಿಕವೂ ಬಹುಪಾಲು ಸಾರ್ವಜನಿಕವಾಗಿ ಕಾಣಿಸಿಕೊಂಡಿರದ ಯತ್ನಾಳ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಬಗ್ಗೆ ಬಾಂಬ್ ಸಿಡಿಸುತ್ತಿದ್ದರು.
ಇದೀಗ ತಮ್ಮ ಗೋಶಾಲೆಯಲ್ಲಿ ಕಾಲ ಕಳೆಯುವ ಮೂಲಕ ಲೋಕಸಭಾ ಚುನಾವಣೆ ಪ್ರಚಾರ ಹಾಗೂ ಪಕ್ಷದ ಕಾರ್ಯ ಚಟುವಟಿಕೆಯಿಂದ ದೂರ ಉಳಿದರಾ ಎಂಬ ಪ್ರಶ್ನೆ ಎದುರಾಗಿದೆ.
ದೇಶದ ವಿವಿಧ ದೇಸಿ ತಳಿಯ ಗೋವುಗಳನ್ನು ಸಂರಕ್ಷಣೆ ಮಾಡುತ್ತಾ ಗೋಶಾಲೆಯನ್ನು ನಡೆಸುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಕಗ್ಗೋಡ ಬಳಿಯಿರುವ ಗೋಶಾಲೆಯಲ್ಲಿ ನೂರಾರು ದೇಸಿ ದನಕರುಗಳಿವೆ.
ಲೋಕಸಭಾ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಳ್ಳದೇ ಗೋವುಗಳ ಸೇವೆಯಲ್ಲಿ ತೊಡಗಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಫೋಟೋಗಳು, ವಿಡಿಯೋವನ್ನು ಸ್ವತಃ ತಮ್ಮ ಸಾಮಾಜಿಕ ಜಾಲತಾಣದ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.