Neeraj Chopra Biopic: ತಮ್ಮ ಜೀವನಾಧಾರಿತ ಸಿನೆಮಾ ಬಗ್ಗೆ ಖಡಕ್ ಸ್ಪಷ್ಟನೆ ಕೊಟ್ಟ ಚಿನ್ನದ ಹುಡುಗ ನೀರಜ್ ಚೋಪ್ರಾ
ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ (Tokyo Olympics) ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ (Javelin Throw) ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ (Neeraj Chopra) ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಬೇಟೆಯಾಡುತ್ತಿದ್ದಂತೆಯೇ ನ್ಯಾಷನಲ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಇದರ ಬೆನ್ನಲ್ಲೇ ಬಾಲಿವುಡ್‌ನಲ್ಲಿ ನೀರಜ್ ಚೋಪ್ರಾ ಜೀವನಾಧಾರಿತ (Biopic) ಚಿತ್ರ ನಿರ್ಮಿಸಲು ಹಲವು ಮಂದಿ ಮುಂದಾಗಿದ್ದಾರೆ. ಆದರೆ ಈ ಕುರಿತಂತೆ ನೀರಜ್ ಚೋಪ್ರಾ ಖಡಕ್ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ನೀರಜ್ ಏನಂದ್ರು, ನೀವೇ ನೋಡಿ
23 ವರ್ಷದ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎನ್ನುವ ಸಾಧನೆ ಪಾಣಿಪಟ್ ಮೂಲದ ನೀರಜ್ ಚೋಪ್ರಾ ಪಾಲಾಗಿದೆ.
ನಾನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆದಾಗ ನಿಜಕ್ಕೂ ಪದಕದ ಬಗ್ಗೆ ಹೆಚ್ಚು ಯೋಚಿಸುತ್ತಿರಲಿಲ್ಲ. ಆದರೆ ನನಗಂತೂ ವಿಶ್ವಾಸವಿತ್ತು, ನಾನು ಉತ್ತಮವಾಗಿಯೇ ಜಾವೆಲಿನ್ ಥ್ರೋ ಮಾಡಿದ್ದೇನೆಂದು ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನ ಅಂತಿಮ ಸುತ್ತಿನವರೆಗೂ ನಾನು ಪದಕ ಗೆಲ್ಲುವುದು ಖಚಿತವಾಗಿರಲಿಲ್ಲ. ಏಕೆಂದರೆ ಅದೇ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಹಾಗೂ ಒಲಿಂಪಿಕ್ಸ್ ಚಾಂಪಿಯನ್‌ಗಳಿದ್ದರು. ಕೊನೆಯ ಕ್ಷಣದವರೆಗೂ ಹೋರಾಟ ಕೈಬಿಡಬಾರದು ಎಂದು ನೀರಜ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಬಾಲಿವುಡ್‌ಗೆ ಎಂಟ್ರಿ ಕೊಡುವ ಬಗ್ಗೆ ಪ್ರತಿಕ್ರಿಯಿಸಿರುವ ಚಿನ್ನದ ಹುಡುಗ, ಮುಂದೆ ಇನ್ನಷ್ಟು ಪದಕ ಗೆಲ್ಲುವವರೆಗೆ ಜೀವನಾಧಾರಿತ ಸಿನಿಮಾಕ್ಕೆ ಒಪ್ಪಿಗೆ ನೀಡುವುದಿಲ್ಲ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.
‘ನನ್ನ ಜೀವನದ ಕುರಿತು ಸಿನಿಮಾ ತಯಾರಿಸುವ ಬಗ್ಗೆ ಹಲವರು ನನ್ನ ಮುಂದೆ ಪ್ರಸ್ತಾಪವಿರಿಸಿದ್ದಾರೆ. ಆದರೆ ನಾನು ಇನ್ನೂ ಹಲವು ಪದಕ ಗೆಲ್ಲಬೇಕಾಗಿದೆ. ಈಗಲೇ ಸಿನಿಮಾ ಮಾಡಿ ಅದು ಫ್ಲಾಪ್ ಆಗುವುದು ಬೇಡ, ಇನ್ನಷ್ಟು ಪದಕ ಗೆದ್ದ ಮೇಲೆ ಸಿನಿಮಾ ತೆಗೆದರೆ ಖಂಡಿತ ಹಿಟ್ ಆಗಲಿದೆ. ಸದ್ಯ ನನ್ನ ಗಮನ ಕೇವಲ ಕ್ರೀಡೆ ಮೇಲಿದೆ’ ಎಂದಿದ್ದಾರೆ.
ನಾನು ಮುಂಬರುವ ಸ್ಪರ್ಧೆಗಳಲ್ಲಿ 90 ಮೀಟರ್ ದೂರ ಜಾವೆಲಿನ್ ಥ್ರೋ ಮಾಡಬೇಕು ಎಂದುಕೊಂಡಿದ್ದೇನೆ. ಸದ್ಯ ನನ್ನ ಗಮನವೇನಿದ್ದರೂ ಕ್ರೀಡೆಯ ಮೇಲಿದೆ. ನಾನೀಗಲೇ ಬಾಲಿವುಡ್ ಬಗ್ಗೆ ಕಿಂಚಿತ್ತು ಯೋಚನೆ ಮಾಡಿಲ್ಲ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪರ ಚಿನ್ನದ ಪದಕ ಗೆದ್ದ ಏಕೈಕ ಅಥ್ಲೀಟ್ ಎನ್ನುವ ಹಿರಿಮೆ ನೀರಜ್ ಪಾಲಾಗಿದೆ. ಇನ್ನುಳಿದಂತೆ 2 ಬೆಳ್ಳಿ ಹಾಗೂ 4 ಕಂಚು ಸಹಿತ ಒಟ್ಟು 7 ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿತ್ತು.