ಬಳ್ಳಾರಿ: ಕೋವಿಡ್ ಬಾಧಿತರಿಗೆ ನಿತ್ಯ ದಾಸೋಹ
ಕೆ.ಎಂ. ಮಂಜುನಾಥ್
ಬಳ್ಳಾರಿ(ಜೂ.04): ಕೋವಿಡ್ ಸೋಂಕಿತರ ಸಂಕಷ್ಟಗಳಿಗೆ ಮಿಡಿಯದವರಿಲ್ಲ. ಎಲ್ಲರ ಬದುಕು ಒಂದೇ ಎಂದು ಭಾವಿಸಿದವರು ತಮ್ಮಿಂದಾದ ನೆರವು ನೀಡಲು ಮುಂದಡಿ ಇಟ್ಟು ತೆರೆಮರೆಯಲ್ಲಿಯೇ ಸೇವಾ ಕೈಂಕರ್ಯದಲ್ಲಿ ನಿರತರಾಗಿದ್ದಾರೆ.
ತಾಲೂಕಿನ ಶ್ರೀಧರಗಡ್ಡೆ ಗ್ರಾಮಸ್ಥರು ಇದಕ್ಕೆ ಹೊರತಲ್ಲ. ನಿತ್ಯ ಹತ್ತಾರು ಕೆಜಿ ಆಹಾರವನ್ನು ತಯಾರಿಸಿಕೊಂಡು ಬಳ್ಳಾರಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರು, ಕುಟುಂಬ ಸದಸ್ಯರು ಸೇರಿದಂತೆ ಕೋವಿಡ್ ಕಾರ್ಯದಲ್ಲಿ ನಿರತರಾಗಿರುವ ಸೇವಾ ಸಿಬ್ಬಂದಿಗೆ ಉಚಿತವಾಗಿ ಆಹಾರ ಪೂರೈಸುವ ಮೂಲಕ ಕೊರೋನಾ ಸೋಂಕಿತರು ಹಾಗೂ ಕೋವಿಡ್ ಹೋರಾಟದ ಸೇನಾನಿಗಳಿಗೆ ಹಸಿವು ನೀಗಿಸುವ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷ ಎಂದರೆ ಕಳೆದ 21 ದಿನಗಳಿಂದ ಒಂದು ದಿನವೂ ತಪ್ಪಿಸದೆ ದಾಸೋಹದಂತೆ ಆಹಾರ ವಿತರಣೆ ಕಾರ್ಯ ನಡೆಯುತ್ತಿದೆ.
ಗ್ರಾಮದ ಶ್ರೀಕೊಟ್ಟೂರು ಸ್ವಾಮಿ ಮಠದಲ್ಲಿ ಸೇರುವ ಯುವಕರು ಕೋವಿಡ್ ಸೋಂಕಿನಿಂದ ಬಳಲುತ್ತಿರುವವರಿಗೆ ನೆರವಾಗಬೇಕು. ಇಂತಹ ಸಂಕಷ್ಟ ಸ್ಥಿತಿಯಲ್ಲಿಯೇ ನಾವು ನೆರವಿಗೆ ಧಾವಿಸಬೇಕು ಎಂದು ನಿರ್ಧರಿಸಿದ್ದಾರೆ. ಅಂತೆಯೇ ಮೊದಲ ದಿನ 10ರಿಂದ 15 ಕೆಜಿಯಷ್ಟು ಆಹಾರ ತಯಾರಿಸಿ, ನಗರದ ವಿಮ್ಸ್‌ಹಾಗೂ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌ಸೋಂಕಿತರ ಕುಟುಂಬದ ಸದಸ್ಯರು, ಪೊಲೀಸರು, ನರ್ಸ್‌ಗಳು, ಹೋಂ ಗಾರ್ಡ್‌ಗಳಿಗೆ ನೀಡಿದ್ದಾರೆ.
ಊಟದ ಬೇಡಿಕೆ ಹೆಚ್ಚಾಗಿದೆ ಎಂದರಿತ ಯುವಕರು ನಿತ್ಯವೂ ಆಹಾರ ತಯಾರಿಸಿ ಪೂರೈಸುವ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ಗ್ರಾಮದ ಎಲ್ಲರೂ ಸಾಥ್ ನೀಡಿದ್ದು ಇದೀಗ ನಿತ್ಯ 50ರಿಂದ 60 ಕೆಜಿ ಅಕ್ಕಿಯ ಆಹಾರ ತಯಾರಿಸಲಾಗುತ್ತಿದೆ. ಚಪಾತಿ, ಪಲ್ಯೆ, ಅನ್ನ, ಸಾಂಬಾರ, ಮಜ್ಜಿಗೆ, ಬಿಸಿ ಬೇಳೆಬಾತ್, ಚಿತ್ರಾನ್ನ, ರೈಸ್‌ಬಾತ್ ಸೇರಿದಂತೆ ವಿವಿಧ ಬಗೆಯ ಆಹಾರವನ್ನು ಪೂರೈಸಲಾಗುತ್ತಿದ್ದು, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ನಿತ್ಯವೂ ತಪ್ಪದೆ ಪೂರೈಸಲಾಗುತ್ತಿದೆ. ಅಡುಗೆ ತಯಾರಿಕೆ ಕಾರ್ಯದಲ್ಲಿ ಗ್ರಾಮದ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು ಆಗಮಿಸಿ ಚಪಾತಿ ತಯಾರಿಸಿದರೆ, ಕೆಲವರು ತರಕಾರಿ ಹೆಚ್ಚಿ ಕೊಡುತ್ತಾರೆ. ಮತ್ತೆ ಕೆಲವರು ಆಹಾರದ ಪೊಟ್ಟಣಗಳನ್ನು ತಯಾರಿಸುತ್ತಾರೆ. ಮತ್ತೆ ಕೆಲವರು ನಗರಕ್ಕೆ ಆಗಮಿಸಿ, ಪೂರೈಕೆ ಮಾಡುತ್ತಾರೆ.
ನಿತ್ಯ 50ರಿಂದ 60 ಕೆಜಿಗೆ 500ಕ್ಕೂ ಹೆಚ್ಚು ಆಹಾರದ ಪೊಟ್ಟಣ ತಯಾರಿಸಲಾಗುತ್ತಿದೆ. ಮಧ್ಯಾಹ್ನ ಹಾಗೂ ರಾತ್ರಿ ಬೇರೆ ತರಹದ್ದೇ ಊಟವಿರುತ್ತದೆ. ನಿತ್ಯದ ಊಟದ ಜವಾಬ್ದಾರಿಯನ್ನು ಒಬ್ಬೊಬ್ಬರು ವಹಿಸಿಕೊಳ್ಳುತ್ತಾರೆ. ಕೆಲವರು ಅಕ್ಕಿ, ಗೋದಿ ಹಿಟ್ಟು, ತರಕಾರಿ ಕೊಡಿಸುತ್ತಾರೆ. ಗ್ರಾಮದ ದಾನಿಗಳು ಉತ್ಸಾಹದಿಂದ ಮುಂದೆ ಬರುತ್ತಿದ್ದಾರೆ. ಊಟ ತಯಾರಿಕೆ ಪ್ರಕ್ರಿಯೆಲ್ಲಿ ನಿತ್ಯ 50ಕ್ಕೂ ಹೆಚ್ಚು ಜನರು ತೊಡಗಿಸಿಕೊಳ್ಳುತ್ತಾರೆ.
ಶ್ರೀಧರಗಡ್ಡೆ ಬಳಿಯ ಅಲೆಮಾರಿಗಳು ವಾಸವಾಗಿರುವ ಗುಡಾರ ನಗರಕ್ಕೂ ಆಗಾಗ್ಗೆ ಆಹಾರ ಪೂರೈಸಲಾಗುತ್ತಿದೆ. ಕೋವಿಡ್‌ನಿಂದ ಅಲೆಮಾರಿಗಳು ತೀವ್ರ ಸಂಕಷ್ಟದಲ್ಲಿ ಇರುವುದರಿಂದ ಶ್ರೀಧರಗಡ್ಡೆಯ ಗ್ರಾಮಸ್ಥರು ತೆರಳಿ ಆಹಾರ ಪೊಟ್ಟಣಗಳನ್ನು ವಿತರಿಸುತ್ತಾರೆ.
ಕಳೆದ 21 ದಿನಗಳಿಂದ ಕೋವಿಡ್ ಸೋಂಕಿತರಿಗೆ, ಕುಟುಂಬ ಸದಸ್ಯರಿಗೆ, ಹೋಂ ಗಾರ್ಡ್ ಸೇರಿದಂತೆ ಆಹಾರದ ಕೊರತೆ ಎದುರಿಸುವ ಪ್ರತಿಯೊಬ್ಬರಿಗೂ ಊಟ ನೀಡಲಾಗುತ್ತಿದೆ. ಇಡೀ ಗ್ರಾಮಸ್ಥರು ಅನ್ನದಾಸೋಹದ ಕೆಲಸಕ್ಕೆ ಕೈ ಜೋಡಿಸಿದ್ದಾರೆ ಎಂದು ಶ್ರೀಧರಗಡ್ಡೆ ಎಚ್.ಎಂ. ವೀರಭದ್ರಯ್ಯಸ್ವಾಮಿ ತಿಳಿಸಿದ್ದಾರೆ.