- Home
- Karnataka Districts
- ವಿಜಯಪುರ ಟಿಸಿ ರಿಪೇರಿಗೆ ಮೇಲೆ ಹತ್ತಿಸಿ, ಕರೆಂಟ್ ಚಾರ್ಜ್ ಮಾಡಿದ ಕೆಇಬಿ; ಕಂಬದಲ್ಲೇ ಪ್ರಾಣಬಿಟ್ಟ ಲೈನ್‌ಮ್ಯಾನ್!
ವಿಜಯಪುರ ಟಿಸಿ ರಿಪೇರಿಗೆ ಮೇಲೆ ಹತ್ತಿಸಿ, ಕರೆಂಟ್ ಚಾರ್ಜ್ ಮಾಡಿದ ಕೆಇಬಿ; ಕಂಬದಲ್ಲೇ ಪ್ರಾಣಬಿಟ್ಟ ಲೈನ್‌ಮ್ಯಾನ್!
ವಿಜಯಪುರ ಜಿಲ್ಲೆಯ ಉಕ್ಕಲಿ ಗ್ರಾಮದಲ್ಲಿ, ಟಿಸಿ ರಿಪೇರಿ ಮಾಡುತ್ತಿದ್ದ 21 ವರ್ಷದ ಲೈನ್‌ಮ್ಯಾನ್ ಶ್ರೀಧರ್ ಲಮಾಣಿ ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿದ್ದಾರೆ. ಅಧಿಕೃತವಾಗಿ ಲೈನ್ ಕ್ಲಿಯರೆನ್ಸ್ (LC) ಪಡೆದಿದ್ದರೂ ವಿದ್ಯುತ್ ಪ್ರವಹಿಸಿದ್ದರಿಂದ ಈ ದುರಂತ ಸಂಭವಿಸಿದೆ.

ಟಿಸಿ ರಿಪೇರಿ ವೇಳೆ ವಿದ್ಯುತ್ ಶಾಕ್, ಲೈನ್‌ಮ್ಯಾನ್ ಸಾವು
ವಿಜಯಪುರ ಜಿಲ್ಲೆಯ ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯ ಉಕ್ಕಲಿ ಗ್ರಾಮದಲ್ಲಿ ಶನಿವಾರ ಘೋರ ದುರಂತವೊಂದು ಸಂಭವಿಸಿದೆ. ವಿದ್ಯುತ್ ಪರಿವರ್ತಕ (TC) ರಿಪೇರಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ ಪರಿಣಾಮ, 21 ವರ್ಷದ ಯುವ ಲೈನ್ ಮನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯು ಕೆಇಬಿ (ಹೆಸ್ಕಾಂ) ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಘಟನೆಯ ವಿವರ:
ಮೃತ ಲೈನ್ ಮನ್ ಅನ್ನು ಶ್ರೀಧರ್ ಲಮಾಣಿ (21) ಎಂದು ಗುರುತಿಸಲಾಗಿದೆ. ಇವರು ವಿಜಯಪುರ ಜಿಲ್ಲೆಯ ಉಕ್ಕಲಿ ಸಬ್ ಸ್ಟೇಷನ್‌ನಲ್ಲಿ ಲೈನ್ ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಉಕ್ಕಲಿ ಗ್ರಾಮದ ಜಮೀನೊಂದರಲ್ಲಿ ವಿದ್ಯುತ್ ಪರಿವರ್ತಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದನ್ನು ಸರಿಪಡಿಸಲು ಶ್ರೀಧರ್ ಅವರು ಸ್ಥಳಕ್ಕೆ ತೆರಳಿದ್ದರು.
ಎಲ್ಸಿ ಪಡೆದಿದ್ದರೂ ತಪ್ಪದ ಸಾವು:
ಯಾವುದೇ ವಿದ್ಯುತ್ ಲೈನ್ ರಿಪೇರಿ ಮಾಡುವ ಮೊದಲು ವಿದ್ಯುತ್ ಸಂಪರ್ಕ ಕಡಿತಗೊಳಿಸಲು 'ಲೈನ್ ಕ್ಲಿಯರೆನ್ಸ್' (LC) ಪಡೆಯುವುದು ಕಡ್ಡಾಯ. ಅದರಂತೆ ಶ್ರೀಧರ್ ಅವರು ಕೂಡ ಕೆಇಬಿ ಕಚೇರಿಯಿಂದ ಅಧಿಕೃತವಾಗಿ ಎಲ್ಸಿ ಪಡೆದೇ ಟಿಸಿ ಮೇಲೆ ಏರಿ ರಿಪೇರಿ ಕಾರ್ಯ ಆರಂಭಿಸಿದ್ದರು.
ಆದರೆ, ದುರಂತವೆಂದರೆ ಶ್ರೀಧರ್ ಅವರು ಕೆಲಸ ಮಾಡುತ್ತಿರುವಾಗಲೇ ಏಕಾಏಕಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ವೇಳೆ ವಿದ್ಯುತ್ ಪ್ರವಹಿಸಿ ಶ್ರೀಧರ್ ಅವರು ಕಂಬದ ಮೇಲೆಯೇ ಪ್ರಾಣ ಬಿಟ್ಟಿದ್ದಾರೆ.
ಕುಟುಂಬಸ್ಥರ ಆಕ್ರಂದನ:
ಕೇವಲ 21 ವರ್ಷದ ಹರೆಯದಲ್ಲೇ ಶ್ರೀಧರ್ ಸಾವನ್ನಪ್ಪಿರುವುದು ಅವರ ಕುಟುಂಬಸ್ಥರಲ್ಲಿ ಮಡುಗಟ್ಟಿದ ಹತಾಶೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಬಡತನದ ಹಿನ್ನೆಲೆಯಲ್ಲಿ ಕೆಲಸಕ್ಕೆ ಸೇರಿದ್ದ ಮಗ, ಇಲಾಖೆಯ ನಿರ್ಲಕ್ಷ್ಯದಿಂದಾಗಿ ಹೆಣವಾಗಿ ಮನೆಗೆ ಮರಳಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ‘ಎಲ್ಸಿ ಪಡೆದ ಮೇಲೂ ವಿದ್ಯುತ್ ಸಂಪರ್ಕ ನೀಡಿದ್ದು ಯಾರು? ನನ್ನ ಮಗನ ಸಾವಿಗೆ ಯಾರು ಹೊಣೆ?’ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಪೊಲೀಸ್ ಭೇಟಿ ಮತ್ತು ತನಿಖೆ:
ಘಟನೆ ಸಂಭವಿಸಿದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮನಗೂಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರೀಧರ್ ಅವರ ಮೃತದೇಹವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯಾರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂಬ ಬಗ್ಗೆ ತನಿಖೆ ಆರಂಭವಾಗಿದೆ.
ಜೀವ ಪಣಕ್ಕಿಟ್ಟು ಕೆಲಸ
ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಾರೆ. ಆದರೆ, ಅತೀ ಸಣ್ಣ ನಿರ್ಲಕ್ಷ್ಯವೂ ಇಂತಹ ದೊಡ್ಡ ಪ್ರಾಣಾಪಾಯಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

