- Home
- Karnataka Districts
- Uttara Kannada Rain: ಶಿರೂರು ಗುಡ್ಡಕುಸಿತ ದುರಂತ ಮರೆತರಾ ಪ್ರವಾಸಿಗರು? ಅಪಾಯಕಾರಿ ಜಲಪಾತಗಳಡಿ ಮೋಜು-ಮಸ್ತಿ!
Uttara Kannada Rain: ಶಿರೂರು ಗುಡ್ಡಕುಸಿತ ದುರಂತ ಮರೆತರಾ ಪ್ರವಾಸಿಗರು? ಅಪಾಯಕಾರಿ ಜಲಪಾತಗಳಡಿ ಮೋಜು-ಮಸ್ತಿ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ತಾತ್ಕಾಲಿಕ ಜಲಪಾತಗಳು ಸೃಷ್ಟಿಯಾಗಿವೆ. ಗುಡ್ಡಕುಸಿತದ ತೀವ್ರ ಅಪಾಯವಿದ್ದರೂ, ಪ್ರವಾಸಿಗರು ಜಿಲ್ಲಾಡಳಿತದ ಎಚ್ಚರಿಕೆ ನಿರ್ಲಕ್ಷಿಸಿ ಈ ಜಲಪಾತಗಳಲ್ಲಿ ನೀರಾಟವಾಡುತ್ತಿದ್ದು, ಇದು ಅನಾಹುತಕ್ಕೆ ಆಹ್ವಾನ ನೀಡುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವರುಣನ ಆರ್ಭಟ (Heavy Rain) ಜೋರಾಗಿದೆ. ಮಳೆಯ ಅಬ್ಬರಕ್ಕೆ ಮಲೆನಾಡು ಮತ್ತು ಕರಾವಳಿ ಭಾಗ ಹಸಿರು ಹೊದ್ದು ಕಂಗೊಳಿಸುತ್ತಿದ್ದರೆ, ಇನ್ನೊಂದೆಡೆ ನೂರಾರು ತಾತ್ಕಾಲಿಕ ಜಲಪಾತಗಳು (Waterfalls) ಸೃಷ್ಟಿಯಾಗಿವೆ. ಆದರೆ, ಈ ಸುಂದರ ಜಲಪಾತಗಳೇ ಈಗ ಪ್ರವಾಸಿಗರಿಗೆ ಮೃತ್ಯುಪಾಶವಾಗುವ ಆತಂಕ ಎದುರಾಗಿದೆ.
ಬಂಡೆ ಕೊರೆದ ಜಾಗದಲ್ಲೇ ಜಲಪಾತಗಳ ಉಗಮ!
ರಾಷ್ಟ್ರೀಯ ಹೆದ್ದಾರಿ 66ರ (National Highway 66) ಚತುಷ್ಪಥ ರಸ್ತೆ ಕಾಮಗಾರಿಗಾಗಿ ಕಾರವಾರ ಮತ್ತು ಅಂಕೋಲಾ ಭಾಗದಲ್ಲಿ ಬೃಹತ್ ಬಂಡೆಗಳನ್ನು ಮತ್ತು ಗುಡ್ಡಗಳನ್ನು ಅವೈಜ್ಞಾನಿಕವಾಗಿ ಕೊರೆಯಲಾಗಿದೆ. ಈಗ ಸುರಿಯುತ್ತಿರುವ ಮಳೆಗೆ ಈ ಕೊರೆದ ಬಂಡೆಗಳ ಮೇಲಿಂದ ನೀರು ಧುಮ್ಮಿಕ್ಕುತ್ತಿದ್ದು, ಜಲಪಾತದಂತೆ ಗೋಚರಿಸುತ್ತಿದೆ. ಇದನ್ನು ನೋಡಲು ಮುಗಿಬೀಳುತ್ತಿರುವ ಪ್ರವಾಸಿಗರು, ಹೆದ್ದಾರಿ ಪಕ್ಕದಲ್ಲೇ ವಾಹನ ನಿಲ್ಲಿಸಿ ನೀರಾಟ ಆಡುತ್ತಿದ್ದಾರೆ.
324 ಕಡೆ ಗುಡ್ಡಕುಸಿತದ ಭೀತಿ (Landslide Alert)
ಭಾರತೀಯ ಭೂ ವಿಜ್ಞಾನ ಇಲಾಖೆ (Geological Survey of India) ಈಗಾಗಲೇ ಎಚ್ಚರಿಕೆ ನೀಡಿದ್ದು, ಉತ್ತರಕನ್ನಡ ಜಿಲ್ಲೆಯ ಸುಮಾರು 324 ಪ್ರದೇಶಗಳಲ್ಲಿ ಗುಡ್ಡ ಕುಸಿಯುವ ಸಾಧ್ಯತೆಯಿದೆ ಎಂದು ವರದಿ ನೀಡಿದೆ. ವಿಶೇಷವಾಗಿ ಹೆದ್ದಾರಿ ಬದಿಯ ಕೊರೆದ ಗುಡ್ಡಗಳು ಯಾವಾಗ ಕುಸಿಯುತ್ತವೆ ಎಂದು ಹೇಳಲು ಸಾಧ್ಯವಿಲ್ಲ.
ಕಳೆದ ಎರಡು ವರ್ಷಗಳ ಹಿಂದೆ ಅಂಕೋಲಾದ ಶಿರೂರು (Shirur) ಬಳಿ ಸಂಭವಿಸಿದ ಗುಡ್ಡ ಕುಸಿತದ ಭೀಕರತೆ ಇಡೀ ದೇಶವನ್ನೇ ನಡುಗಿಸಿತ್ತು. ಆ ದುರಂತದಲ್ಲಿ 13 ಅಮಾಯಕರು ಮೃತಪಟ್ಟಿದ್ದರು. ಇಷ್ಟೆಲ್ಲಾ ಕಣ್ಣಮುಂದಿದ್ದರೂ ಪ್ರವಾಸಿಗರು ಮಾತ್ರ ಬುದ್ಧಿ ಕಲಿಯುತ್ತಿಲ್ಲ.
ಜಿಲ್ಲಾಡಳಿತದ ಸೂಚನೆಗೆ ಬೆಲೆಯಿಲ್ಲ!
ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರು ಇಳಿಯಬಾರದು ಮತ್ತು ಜಲಪಾತಗಳಲ್ಲಿ ನೀರಾಟವಾಡಬಾರದು ಎಂದು ಜಿಲ್ಲಾಡಳಿತ (District Administration) ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ. ಆದರೆ, ಪ್ರವಾಸಿಗರು ಮಾತ್ರ ಯಾವುದಕ್ಕೂ ಕೇರ್ ಮಾಡದೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಮತ್ತು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ.
ಸ್ಥಳೀಯರ ಆಕ್ರೋಶ:
'ಒಂದು ಸಣ್ಣ ಗುಡ್ಡ ಕುಸಿತವಾದರೂ ದೊಡ್ಡ ಅನಾಹುತ ಸಂಭವಿಸಬಹುದು. ಪ್ರವಾಸಿಗರ ಈ ಹುಚ್ಚಾಟಕ್ಕೆ ಜಿಲ್ಲಾಡಳಿತ ಕೂಡಲೇ ಕಡಿವಾಣ ಹಾಕಬೇಕು. ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿ ದಂಡ ವಿಧಿಸಬೇಕು' ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪ್ರಕೃತಿಯನ್ನು ಆಸ್ವಾದಿಸುವುದು ತಪ್ಪಲ್ಲ, ಆದರೆ ಅದು ಪ್ರಾಣಕ್ಕೆ ಕಂಟಕವಾಗಬಾರದು ಎಂಬುದು ಪರಿಸರ ಪ್ರೇಮಿಗಳ ಕಳಕಳಿಯಾಗಿದೆ.

