- Home
- Karnataka Districts
- ಪರಶುರಾಮ ಥೀಂ ಪಾರ್ಕ್‌ನ ಲಕ್ಷಾಂತರ ಮೌಲ್ಯದ ಸೊತ್ತು ಕದ್ದವರು ಅರೆಸ್ಟ್, ಕಳ್ಳರು ಕಾಂಗ್ರೆಸ್ ಬ್ರದರ್ಸ್ ಎಂದ ಶಾಸಕ ಸುನೀಲ್ ಕುಮಾರ್!
ಪರಶುರಾಮ ಥೀಂ ಪಾರ್ಕ್‌ನ ಲಕ್ಷಾಂತರ ಮೌಲ್ಯದ ಸೊತ್ತು ಕದ್ದವರು ಅರೆಸ್ಟ್, ಕಳ್ಳರು ಕಾಂಗ್ರೆಸ್ ಬ್ರದರ್ಸ್ ಎಂದ ಶಾಸಕ ಸುನೀಲ್ ಕುಮಾರ್!
ಕಾರ್ಕಳದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಡೆದ ತಾಮ್ರದ ಹೊದಿಕೆ ಕಳವು ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ₹2.18 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಶಾಸಕ ಸುನಿಲ್ ಕುಮಾರ್ ಕಳ್ಳರನ್ನು 'ಕಾಂಗ್ರೆಸ್ ಬ್ರದರ್ಸ್' ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2.18 ಲಕ್ಷ ಮೌಲ್ಯದ ಕಳವುಗೊಳಿಸಿದ ಸೊತ್ತು ವಶ
ಕಾರ್ಕಳ: ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಬೈಲೂರು ಉಮ್ಮಿಕಲ್ ಬೆಟ್ಟದಲ್ಲಿರುವ ವಿವಾದಿತ ಪರಶುರಾಮ ಥೀಮ್ ಪಾರ್ಕ್ ಕಟ್ಟಡದಲ್ಲಿ ತಾಮ್ರದ ಹೊದಿಕೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 45,000 ಮೌಲ್ಯದ 51 ಕೆಜಿ ತಾಮ್ರದ ಶೀಟು ಸಹಿತ ಸುಮಾರು ₹ 2.18 ಲಕ್ಷ ಮೌಲ್ಯದ ಕಳವುಗೊಳಿಸಿದ ಸೊತ್ತು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಕಳವಾರು ನಿವಾಸಿ ಆರೀಫ್ ಯಾನೆ ಮುನ್ನ (37) ಹಾಗೂ ಕಾವೂರು ನಿವಾಸಿ ಅಬ್ದುಲ್ ಹಮೀದ್ (32) ಎಂದು ಗುರುತಿಸಲಾಗಿದೆ.
ತಾಮ್ರದ ಹೊದಿಕೆ ಕಳವು
ಜ.3 ರಂದು ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ಮುಖ್ಯ ಬಾಗಿಲನ್ನು ಸಾಧನದ ಸಹಾಯದಿಂದ ಬಲವಂತವಾಗಿ ತೆರೆದು ಒಳಪ್ರವೇಶಿಸಿದ ದುಷ್ಕರ್ಮಿಗಳು, ಕಟ್ಟಡದ ಮೇಲ್ಛಾವಣಿಗೆ ಅಳವಡಿಸಲಾಗಿದ್ದ ತಾಮ್ರದ ಹೊದಿಕೆ ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ 2023ರ ಕಲಂ 331(3), 331(4) ಹಾಗೂ 305ರಡಿ ಪ್ರಕರಣ ದಾಖಲಾಗಿತ್ತು.
ಮೂರು ವಿಶೇಷ ತಂಡಗಳ ರಚನೆ
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ಹರೀರಾಂ ಶಂಕರ ಐಪಿಎಸ್ ಅವರ ನಿರ್ದೇಶನದಂತೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರ ವ್ಯಾಪ್ತಿಯಲ್ಲಿ ತನಿಖೆ ನಡೆಸಿ ಖಚಿತ ಮಾಹಿತಿಯ ಆಧಾರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.
ತಲೆಮರೆಸಿಕೊಂಡವರಿಗೆ ಹುಡುಕಾಟ
ಬಂಧಿತ ಆರೀಫ್ ವಿರುದ್ಧ ಪಡುಬಿದ್ರೆ, ಉಡುಪಿ ನಗರ, ಬ್ರಹ್ಮಾವರ, ಕಾರ್ಕಳ ಗ್ರಾಮಾಂತರ ಹಾಗೂ ಮೂಲ್ಕಿ–ಮೂಡಬಿದ್ರೆ ಪೊಲೀಸ್ ಠಾಣೆಗಳಲ್ಲಿ 9ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಬ್ದುಲ್ ಹಮೀದ್ ವಿರುದ್ಧ ಬಂಟ್ವಾಳ ಹಾಗೂ ಮೂಡಬಿದ್ರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. ಬಂಧಿತರಿಂದ ಒಟ್ಟು ₹2,18,200 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
ಮೇಲ್ಛಾವಣಿ ಕದ್ದವರು ಕಾಂಗ್ರೆಸ್ ಬ್ರದರ್ಸ್ ಕಾರ್ಕಳ ಶಾಸಕ ಟ್ವೀಟ್
ಇದರ ಬೆನ್ನಲ್ಲೇ ಪರಶುರಾಮ ಥೀಂ ಪಾರ್ಕ್ ಮೇಲ್ಛಾವಣಿ ಕದ್ದವರು ಕಾಂಗ್ರೆಸ್ ಬ್ರದರ್ಸ್ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಟ್ಚೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಪರಶುರಾಮ ಥೀಂ ಪಾರ್ಕ್ ಹಾಳು ಬೀಳುವಂತೆ ಮಾಡಿದ್ದು ಕಾಂಗ್ರೆಸ್, ಕಳೆದ ವಾರ ಥೀಮ್ ಪಾರ್ಕ್ ನಲ್ಲಿ ನಡೆದ ಕಳ್ಳತನ ಪ್ರಕರಣ ವಿಚಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಅವರಿಗೆ ಅಭಿನಂದನೆಗಳು. ಭಾರತದ ಶ್ರದ್ಧಾ ಕೇಂದ್ರಗಳನ್ನು ಘಜ್ನಿ, ಘೋರಿ, ಖಿಲ್ಜಿ ಮೊಘಲರು ಒಡೆದರೆ, ಥೀಂ ಪಾರ್ಕ್ ಮೇಲ್ಚಾವಣಿ ಕದ್ದವರು ಅವರ ವಂಶಸ್ಥರು
ಇಲ್ಲಿಂದಲೇ ಕಾಂಗ್ರೆಸ್ ಅಧಃಪತನ
ಕರಾವಳಿಯಲ್ಲಿ ಪರಶುರಾಮನ ಹೆಜ್ಜೆ ಗುರುತು ಇರಲೇಬಾರದು ಎಂದು ಥೀಮ್ ಪಾರ್ಕ್ ಕಾಮಗಾರಿಯನ್ನ ಅರ್ಧಕ್ಕೆ ನೀವು ನಿಲ್ಲಿಸಿದ್ದೀರಿ. ಈಗ ನಿಮ್ಮ ಮತ ಬ್ಯಾಂಕ್ ನ ಪುಂಡರು ಇಲ್ಲಿ ಕಳ್ಳತನ ಮಾಡಿದ್ದಾರೆ, ಇವರಿಗೆ ಈ ಧೈರ್ಯ ಬಂದಿದ್ದು ಎಲ್ಲಿಂದ ? ಕಾಂಗ್ರೆಸ್ನ ಹಿಂದೂ ವಿರೋಧಿ ಭಾವನೆ, ಬಲದಿಂದಲ್ಲವೇ? ಏನು ಬೇಕಾದರೂ ಮಾಡಿ ನಾವಿದ್ದೇವೆ ಎಂಬಾ ಚಿತಾವಣೆಯಿಂದಲೋ? ಇಂದು ಭಾವನೆಗಳಿಗೆ ಘಾಸಿ ಮಾಡಿರುವವರ ಜೊತೆಗೆ ಪ್ರವಾಸೋದ್ಯಮಕ್ಕೆ ಅಡ್ಡಿ ಮಾಡಿದ್ದೀರಿ. ಮುಂದಿನ ಚುನಾವಣೆಯ ವರೆಗಲ್ಲ ಶತಶತಮಾನಗಳವರೆಗೂ ಸ್ಥಾಯಿಯಾಗಿರುತ್ತದೆ. ಇಲ್ಲಿಂದಲೇ ಕಾಂಗ್ರೆಸ್ ಅಧಃಪತನ ಕ್ಷಣಗಣನೆ ಪ್ರಾರಂಭ ಎಂದು ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

