- Home
- Karnataka Districts
- ಬಿಎಂಟಿಎಸಿ, ಕೆಎಸ್ಆರ್ಟಿಸಿ ಟಿಕೆಟ್ ದರ ಮತ್ತಷ್ಟು ಏರಿಕೆ? ಹಿಂದಿಗಿಂತಲೂ ದುಬಾರಿ? ಎಷ್ಟಾಗಲಿದೆ ರೇಟ್
ಬಿಎಂಟಿಎಸಿ, ಕೆಎಸ್ಆರ್ಟಿಸಿ ಟಿಕೆಟ್ ದರ ಮತ್ತಷ್ಟು ಏರಿಕೆ? ಹಿಂದಿಗಿಂತಲೂ ದುಬಾರಿ? ಎಷ್ಟಾಗಲಿದೆ ರೇಟ್
ಶಕ್ತಿ ಯೋಜನೆ, ಇಂಧನ ದರ ಏರಿಕೆ ಮತ್ತು ಸರ್ಕಾರದ ಬಾಕಿ ಅನುದಾನದಿಂದಾಗಿ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ. ಈ ನಷ್ಟವನ್ನು ಸರಿದೂಗಿಸಲು, ಅಧಿಕಾರಿಗಳು ಶೇಕಡಾ 25 ರಷ್ಟು ಟಿಕೆಟ್ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

ಶಕ್ತಿ- ಯುದ್ಧದ ಪರಿಣಾಮ
ಮಹಿಳೆಯರಿಗೆ ನೀಡುತ್ತಿರುವ ಶಕ್ತಿ ಯೋಜನೆ ಹಾಗೂ ಯುದ್ಧದ ಪರಿಣಾಮ ಏರಿರುವ ಇಂಧನದ ಬೆಲೆಯಿಂದಾಗಿ ಇದಾಗಲೇ ಅಪಾರ ಸಂಕಷ್ಟದಲ್ಲಿರುವ ಬಿಎಂಟಿಎಸ್ ಮತ್ತು ಕೆಎಸ್ಆರ್ಟಿಸಿ ಇದಾಗಲೇ ವರ್ಷದ ಹಿಂದಷ್ಟೇ ಶೇಕಡಾ 15ರಷ್ಟು ದರ ಹೆಚ್ಚಳ ಮಾಡಿತ್ತು. ಕೆಲವು ಊರುಗಳಿಗೆ ಇದ್ದ ರಾಜಹಂಸ ಬಸ್ಸನ್ನು ರದ್ದುಗೊಳಿಸಿ ಸ್ಲೀಪರ್ ಕೋಚ್ ಬಸ್ಸಷ್ಟೇ ಬಿಡಲಾಗಿದೆ. ಇದರಿಂದ ಅನಿವಾರ್ಯವಾಗಿ ಹೆಚ್ಚು ದರ ಕೊಟ್ಟು ಹೋಗುವ ಪರಿಸ್ಥಿತಿ ಸದ್ಯಕ್ಕೆ ಇದೆಯಾದರೂ, ಅದೇನೇ ಮಾಡಿದರೂ ಸರ್ಕಾರದ ಮೇಲಿನ ಹೊರೆ ಮಾತ್ರ ಕಡಿಮೆಯಾಗುತ್ತಿಲ್ಲ.
ಅನುದಾನ ಬಾಕಿ
ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ನಿಗಮಗಳಿಗೆ ಬಿಡುಗಡೆಯಾಗಬೇಕಿರುವ ಸುಮಾರು 5,000 ಕೋಟಿ ರೂಪಾಯಿಗಳ ಅನುದಾನವೂ ಬಾಕಿ ಉಳಿದಿದೆ. ಅದರ ಜೊತೆಗೆ ಬರುವ ಜುಲೈ ತಿಂಗಳಿನಿಂದ ಸಾರಿಗೆ ನೌಕರರಿಗೆ ಶೇಕಡಾ 12.5 ರಷ್ಟು ಹೊಸ ವೇತನವನ್ನು ನೀಡಬೇಕಾಗಿದೆ. ಇದರೊಂದಿಗೆ ನೌಕರರಿಗೆ ನೀಡಬೇಕಿರುವ ಒಟ್ಟು 1,271 ಕೋಟಿ ರೂಪಾಯಿಗಳ ವೇತನ ಹಿಂಬಾಕಿ ಹಣದಲ್ಲಿ ಸದ್ಯ 450 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದ್ದು, ಇನ್ನುಳಿದ 821 ಕೋಟಿ ರೂಪಾಯಿಗಳನ್ನು ನೀಡಬೇಕಿದೆ.
ಶೇಕಡಾ 25ಕ್ಕೆ ಏರಿಕೆ?
ಆದ್ದರಿಂದ ಈ ಸಲ ಟಿಕೆಟ್ ದರವನ್ನು ಶೇಕಡಾ 25ಕ್ಕೆ ಏರಿಸುವಂತೆ ಸಾರಿಗೆ ನಿಗಮದ ಅಧಿಕಾರಿಗಳು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮಧ್ಯ ಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ಇದಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 8 ರೂಪಾಯಿಯಷ್ಟು ಹೆಚ್ಚಾಗಿರುವ ಕಾರಣದಿಂದ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.
40 ಕೋಟಿ ರೂ. ನಷ್ಟ
ಇಂಧನ ದರ ಏರಿಕೆಯಿಂದಾಗಿ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳಿಗೆ 40 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ನಷ್ಟವಾಗುತ್ತಿದೆ. ಹೀಗೆ ಆಗಿದ್ದೇ ಆದಲ್ಲಿ, ವಾರ್ಷಿಕವಾಗಿ ನಿಗಮಗಳ ನಷ್ಟದ ಪ್ರಮಾಣ 480 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಕೆಎಸ್ಆರ್‌ಟಿಸಿ (KSRTC), ಬಿಎಂಟಿಸಿ (BMTC), ಈಶಾನ್ಯ (NWKRTC) ಮತ್ತು ಕಲ್ಯಾಣ ಕರ್ನಾಟಕ (KKRTC) ಸಾರಿಗೆ ನಿಗಮಗಳು ಬೆಲೆ ಏರಿಕೆ ಮಾಡುವಂತೆ ಅಧಿಕಾರಿಗಳು ಇದಾಗಲೇ ಮನವಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಮತ್ತಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ.
100 ರೂ.ಗೆ 125 ರೂ.
ಈಗ ಮಾಡಿಕೊಂಡಿರುವ ಮನವಿಯ ಪ್ರಕಾರ ಶೇಕಡಾ 25ರಷ್ಟು ದರ ಹೆಚ್ಚು ಮಾಡುವಂತೆ ಕೋರಲಾಗಿದೆ ಎಂದು ವರದಿಯಾಗಿದೆ. ಇದರ ಅರ್ಥ 100 ರೂಪಾಯಿ ಇದ್ದ ಟಿಕೆಟ್ ಇನ್ನುಮುಂದೆ 125 ರೂಪಾಯಿ ಆಗುವ ಸಾಧ್ಯತೆ ಇದೆ.
ಶಕ್ತಿ ಯೋಜನೆ ಕೈಬಿಡಲು ಒತ್ತಾಯ
ಆದರೆ ಇದಾಗಲೇ ಮಹಿಳೆಯರೂ ಸೇರಿ ಹಲವರು ಶಕ್ತಿ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸುತ್ತಿದ್ದಾರೆ. ಇದಾಗಲೇ ವಿದ್ಯುತ್ ರೇಟ್ ಹೆಚ್ಚಾಗಿದೆ. ವಾಣಿಜ್ಯ ಬಳಕೆಗೆ ಕರೆಂಟ್ ಬಿಲ್ ಪಾವತಿ ಮಾಡುತ್ತಿರುವವರಿಗೆ ಮೂರು ಪಟ್ಟು ಹೆಚ್ಚು ಬಿಲ್ ಕಟ್ಟುವ ಅನಿವಾರ್ಯತೆ ಎದುರಾಗಿದೆ. ಜೊತೆಗೆ, ನೀರಿನ ಬಿಲ್ ಕೂಡ ಹೆಚ್ಚಿದೆ. ಇದರಿಂದ ಬಹಳಷ್ಟು ತೊಂದರೆಯಾಗುತ್ತಿದ್ದು, ಇನ್ನು ಟಿಕೆಟ್ ದರ ಏರಿಸುವ ಬದಲು ಶಕ್ತಿ ಯೋಜನೆಯನ್ನೇ ಕೈಬಿಡಬೇಕು ಎನ್ನುವುದು ಪ್ರಯಾಣಿಕರ ಆಗ್ರಹವಾಗಿದೆ.

