ಹುಬ್ಬಳ್ಳಿ: ವಿಶೇಷ ಅಲಂಕಾರದಲ್ಲಿ ಶೈಲಜಾ ಗಿನ್ನಿಸ್ ವರ್ಲ್ಡ್ ರೆಕಾರ್ಡ್
ಹುಬ್ಬಳ್ಳಿ(ಫೆ.07): ನಗರದ ನಿವಾಸಿ ಶೈಲಜಾ ಶ್ರೀರಾಮ ಬಗಾಡೆ ಅವರು ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನ ವಿಶೇಷ ಅಲಂಕಾರ ಸ್ಪರ್ಧೆಯಲ್ಲಿ ಪಾಲ್ಗೊಂಡು 45 ನಿಮಿಷದೊಳಗೆ ಅಲಂಕಾರ ಮಾಡುವ ಮೂಲಕ ಗಿನ್ನಿಸ್ ದಾಖಲೆಯಲ್ಲಿ ಹೆಸರು ದಾಖಲಿಸಿಕೊಂಡು ಸಾಧನೆ ಮಾಡಿದ್ದಾರೆ.
ಬ್ರಾಹ್ಮಣಿ ಇವೆಂಟ್ಸ್ ಆ್ಯಂಡ್ ಎಕ್ಸಿಬಿಷನ್, ಬೀಸಾ ಇಂಟರ್‌ನ್ಯಾಶನಲ್ ಬ್ಯೂಟಿ ಸಲ್ಯೂಷನ್, ಆಲ್ ಇಂಡಿಯನ್ ಹೇರ್ ಆ್ಯಂಡ್ ಬ್ಯೂಟಿ ಅಸೋಸಿಯೆಶನ್ ಸಹಭಾಗಿತ್ವದಲ್ಲಿ ಮದುಮಗಳ ವಿಶೇಷ ಅಲಂಕಾರ ಮಾಡುವ ಆನ್‌ಲೈನ್ ಸ್ಪರ್ಧೆ 2020ರ ಡಿ. 20ರಂದು ಆಯೋಜಿಸಲಾಗಿತ್ತು.
ದೇಶಾದ್ಯಂತ 1,146 ಸ್ಪರ್ಧಾಳುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಲಂಕಾರ ಸ್ಪರ್ಧೆಯಲ್ಲಿ ನಿಗದಿತ ಅಂಶಗಳನ್ನು ನೀಡಲಾಗಿತ್ತು. ಅಂದರೆ, ಕಾಂಟರಿಂಗ್ ಆ್ಯಂಡ್ ಹೈ ಲೈಟಿಂಗ್ ಐ ಲ್ಯಾಶಸ್ ಫಿಕ್ಸಿಂಗ್ ಮಾಡುವುದು ಕಡ್ಡಾಯವಾಗಿತ್ತು.
ಇವೆಲ್ಲವನ್ನೂ ಪೂರೈಸಲು ಕನಿಷ್ಠ ಒಂದೂವರೆಯಿಂದ ಎರಡು ಗಂಟೆ ಅವಧಿ ಅಗತ್ಯ. ಆದರೆ ನಿಗದಿತ ಸಮಯಕ್ಕಿಂತ ಕಡಿಮೆ ಅವಧಿ ಅಂದರೆ 40 ನಿಮಿಷದಲ್ಲೆ ಯಶಸ್ವಿಯಾಗಿ ಮೇಕಪ್ ಮಾಡಿದ್ದೇನೆ. ಗುಜರಾತ್‌ನಲ್ಲಿ ಇದನ್ನು ನಿರ್ಣಾಯಕರು ವರ್ಚುವಲ್ ಮೂಲಕ ವೀಕ್ಷಿಸಿದ್ದರು ಎಂದು ಶೈಲಜಾ ತಿಳಿಸಿದ್ದಾರೆ.
ಮೂಲತಃ ರಾಣೆಬೆನ್ನೂರಿನ ಶೈಲಜಾ ಹುಬ್ಬಳ್ಳಿಯಲ್ಲಿ 26 ವರ್ಷಗಳಿಂದ ಬ್ಯೂಟಿಷಿಯನ್ ಆಗಿದ್ದಾರೆ. ಕುಸುಗಲ್ ರಸ್ತೆಯ ಅಕ್ಷಯ ಎನ್‌ಕ್ಲಬ್‌ನಲ್ಲಿ ಶೈಲಾ ಬ್ಯೂಟಿ ಕೇರ್ ನಡೆಸುತ್ತಿದ್ದಾರೆ.