ಲಾಕ್‌ಡೌನ್ ಎಫೆಕ್ಟ್: ಹಾವೇರಿಯಲ್ಲಿ ವರ್ಲಿ ಕಲೆಯಿಂದ ಮಕರವಳ್ಳಿ ಪ್ರೌಢಶಾಲೆಗೆ ಶೃಂಗಾರ
ಮಂಜುನಾಥ ಕರ್ಜಗಿ
ಅಕ್ಕಿಆಲೂರು(ಆ.01): ಇಲ್ಲಿನ ಶಿಕ್ಷಕರು ಮಕ್ಕಳಿಗೆ ಪಾಠ ಮಾತ್ರ ಮಾಡುವುದಿಲ್ಲ. ಕಳೆಗುಂದಿದ ಗೋಡೆಗಳಿಗೆ ಬಣ್ಣ ಬಳಿಯುತ್ತಾರೆ. ಆವರಣದಲ್ಲಿ ಚೆಂದದ ತೋಟ ಬೆಳೆದಿದ್ದಾರೆ. ಮಕ್ಕಳ ಮನಸ್ಸಿಗೆ ಮುದ ನೀಡುವ ಚಿತ್ತಾರ ಬಿಡಿಸಿ ಮನಸ್ಸು ಸೆಳೆದಿದ್ದಾರೆ. ಖಾಸಗಿ ಶಾಲೆಗೆ ಹೋಗುವ ಮಕ್ಕಳನ್ನು ಸೆಳೆದು ಹಾಜರಾತಿ ಹೆಚ್ಚಿಸುತ್ತಿದ್ದಾರೆ. ಹೀಗಾಗಿ ಪ್ರತಿ ವರ್ಷವೂ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಖಾಸಗಿ ಶಾಲೆಗೆ ಸಡ್ಡು ಹೊಡೆದಿದೆ.
ಸಮೀಪದ ಮಕರವಳ್ಳಿ ಸರ್ಕಾರಿ ಪ್ರೌಢಶಾಲೆಯ ಗೋಡೆ, ಶಾಲಾ ಆವರಣದಲ್ಲಿ ಕಂಡು ಬರುವ ದೃಶ್ಯ. ‘ವರ್ಲಿ’ ಕಲೆಯಿಂದ ಶಾಲಾ ಗೋಡೆಗಳು ಶೃಂಗಾರಗೊಂಡಿದೆ. ಪ್ರಸ್ತುತ ದಿನಗಳಲ್ಲಿ ಕಣ್ಮರೆಯಾಗುತ್ತಿರುವ ದೇಶಿಯ ಕಲೆಗಳನ್ನು ಉಳಿಸುವ ಹಾಗೂ ಪರಿಚಯಿಸುವ ಕೆಲಸವನ್ನು ಶಾಲೆಯ ಮುಖ್ಯ ಗುರು ಎಂ. ದಯಾನಂದ ಹಾಗೂ ಉಳಿದ ಶಿಕ್ಷಕರು ಮಾಡುತ್ತಿದ್ದಾರೆ.
ಮಲೆನಾಡು ಪ್ರದೇಶಗಳಲ್ಲಿ ಇಂತಹ ಬುಡಕಟ್ಟು ಜನಾಂಗದ ಚಿತ್ರಕಲೆಗಳನ್ನು ಕಾಣಬಹುದು. 10ನೇ ಶತಮಾನದಲ್ಲಿ ಕಾಣಬಹುದಾದ ಈ ವರ್ಲಿ ಕಲೆ 1970ರ ಬಳಿಕ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಸುಣ್ಣ, ಕೆಂಪು ಮಣ್ಣು (ಹುರಮಂಜ) ಹಾಗೂ ಕಡ್ಡಿಯಿಂದ ಚಿತ್ರಗಳನ್ನು ಬಿಡಿಸಲಾಗುತ್ತಿತ್ತು. ಈಗ ಎಲ್ಲ ಗೋಡೆಗಳು ಸಿಮೆಂಟ್‌ಗಳಿಂದ ಇರುವುದರಿಂದ ಹುರುಮಂಜ ಬಣ್ಣದ ಎಮ್‌ಲ್ಯನ್ ಹಾಗೂ ಬ್ರೆಶ್ ಬಳಸಿ ವರ್ಲಿ ಕಲೆ ಬಿಡಿಸಲಾಗಿದೆ.
ಚಿತ್ರಗಳು ಸರಳವಾಗಿದ್ದರೂ ಇಂತಹ ಕಲೆ ಮತ್ತು ಇತಿಹಾಸವನ್ನು ತಿಳಿಸುವ ಪ್ರಯತ್ನವನ್ನು ಶಾಲೆಯ ಚಿತ್ರಕಲಾ ಶಿಕ್ಷಕ ಗಂಗಾಧರ ಹಿರೇಮಠ ಮಾಡಿದ್ದಾರೆ. ಇದಕ್ಕೆ ಶಾಲೆಯ ಸಿಬ್ಬಂದಿ ವರ್ಗ ಮಕ್ಕಳು ಕೈ ಜೋಡಿಸಿದ್ದಾರೆ. ಶಾಲೆಯ ಎಲ್ಲ ಗೋಡೆಗಳು ವರ್ಲಿ ಕಲೆಯಿಂದ ಕಂಗೊಳಿಸುತ್ತಿದ್ದು ಎಲ್ಲರ ಮನಸ್ಸಿನಲ್ಲಿ ನವ ಚೈತನ್ಯ ಮೂಡಿಸುತ್ತದೆ. ಅಲ್ಲದೇ ಯಾವುದೋ ಹೊಸ ಲೋಕಕ್ಕೆ ಕರೆದುಕೊಂಡು ಹೋದಂತೆ ಭಾಸವಾಗುತ್ತದೆ.
ಕೊರೋನಾ ಮಹಾಮಾರಿಯಿಂದ ಜನರನ್ನು ರಕ್ಷಿಸಲು ಸರ್ಕಾರ ಲಾಕ್‌ಡೌನ್ ಘೋಷಿಸಿದ್ದರಿಂದ ವಿದ್ಯಾರ್ಥಿಗಳು ಶಾಲೆಯ ಮುಖ ನೋಡಿ ಹಲವು ತಿಂಗಳಗಳೇ ಕಳೆದಿವೆ. ಹೀಗಾಗಿ ಶಾಲೆಗೆ ಬರುವ ಶಿಕ್ಷಕರಿಗೆ ಕಚೇರಿ ಕೆಲಸ ಬಿಟ್ಟರೆ ಬೇರೆ ಕೆಲಸಗಳೇ ಇಲ್ಲ. ಈ ಅವಧಿಯನ್ನು ವ್ಯರ್ಥ ಮಾಡಬಾರದು ಎಂಬ ಉದ್ದೇಶದಿಂದ ಈ ಶಾಲಾ ಶಿಕ್ಷಕರು ತಾವೇ ಕೈ ತೋಟ ಬೆಳೆಸಿ ವಿವಿಧ ತರಕಾರಿ ಬೆಳೆದಿದ್ದಾರೆ. ಶಾಲಾ ಆರಂಭವಾದರೆ ಮಕ್ಕಳ ಬಿಸಿಯೂಟಕ್ಕೆ ಇದೇ ತರಕಾರಿ ಬಳಸುತ್ತೇವೆ ಎನ್ನುತ್ತಾರೆ ಈ ಶಾಲಾ ಶಿಕ್ಷಕರು.
2007ರಲ್ಲಿ ಪ್ರಾರಂಭವಾದ ಈ ಶಾಲೆ ಸುಸಜ್ಜಿತವಾದ ಕಟ್ಟಡ ಹೊಂದಿದ್ದು ಉತ್ತಮವಾದ ಗ್ರಂಥಾಲಯ, ಪ್ರಯೋಗಾಲಯ, ರಂಗಮಂದಿರ, ಪ್ರತಿ ತರಗತಿಗೂ ಸಿಸಿ ಕ್ಯಾಮೆರಾ ಅಳವಡಿಸಿದ್ದು ಪ್ರತಿ ವಿದ್ಯಾರ್ಥಿಯ ಮೇಲೆ ನಿಗಾವಹಿಸಲಾಗುತ್ತದೆ. ವಿಶಾಲವಾದ ಆಟದ ಮೈದಾನ ಹೊಂದಿದ್ದು ಇಲ್ಲಿನ ಪಾಲಕರಿಗೆ ಅಚ್ಚು ಮೆಚ್ಚಿನ ಶಾಲೆ ಆಗಿದೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮವಾದ ಫಲಿತಾಂಶವೂ ಸಹ ಬರುತ್ತಿದ್ದು ತಾಲೂಕಿನ ಮತ್ತು ಜಿಲ್ಲೆಯ ಉತ್ತಮ ಶಾಲೆಯಾಗಿದೆ. ಇದಕ್ಕೆಲ್ಲ ಊರಿನ ಜನತೆ ಮತ್ತು ಮುಖ್ಯಶಿಕ್ಷಕ ಎಂ. ದಯಾನಂದ ಶಿಕ್ಷಕ ವರ್ಗ ಕಾರಣವಾಗಿದ್ದಾರೆ.