ಸ್ವಚ್ಛತೆ ಮುಖಾಂತರ ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಉಳಿಸಿ: ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ
ಪ್ರಕೃತಿಯನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕಾದರೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು ಇದು ನಾವು ಅವರಿಗೆ ನೀಡುವ ಉತ್ತಮ ಉಡುಗೊರೆಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕೋಟ (ಸೆ.28): ಉಡುಪಿ ಜಿಲ್ಲಾಡಳಿತ ವತಿಯಿಂದ ಇಲ್ಲಿನ ಕೋಟತಟ್ಟು ಮತ್ತು ಕೋಡಿ ಗ್ರಾಮ ಪಂಚಾಯತುಗಳ ಆಶ್ರಯದಲ್ಲಿ ಗುರುವಾರ ವಿಶ್ವ ಕಡಲ ದಿನಾಚರಣೆ ಅಂಗವಾಗಿ ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್ ಸಂಘದ ಸಹಯೋಗದಲ್ಲಿ ಸಮುದ್ರದ ಹಿನ್ನೀರು ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, 'ಪ್ರಕೃತಿಯನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕಾದರೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು.
ಇದು ನಾವು ಅವರಿಗೆ ನೀಡುವ ಉತ್ತಮ ಉಡುಗೊರೆಯಾಗಿದೆ' ಎಂದರು. ಜಿಪಂ ಸಿಇಓ ಪ್ರಸನ್ನ ಎಚ್. ಅವರು, 'ನದಿ ಪಾತ್ರಗಳ ಸ್ವಚ್ಛತೆ ಕೂಡ ಇತರ ಸ್ವಚ್ಛತೆಯಷ್ಟೇ ಪ್ರಾಮುಖ್ಯತೆ ಹೊಂದಿದೆ' ಎಂದರು.
ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ಜಿ.ಪಂ ಸಿಪಿಓ ಶ್ರೀನಿವಾಸ ರಾವ್, ಕೋಟತಟ್ಟು ಪಂಚಾಯತ್ ಅಧ್ಯಕ್ಷ ಕೆ. ಸತೀಶ್ ಕುಂದರ್ ಬಾರಿಕೆರೆ, ಕೋಡಿ ಪಂಚಾಯತ್ ಅಧ್ಯಕ್ಷ ಪ್ರಭಾಕರ್ ಮೆಂಡನ್, ಮಣಿಪಾಲ ವಿವಿ ವಿದ್ಯಾರ್ಥಿಗಳು, ಕಯಾಕಿಂಗ್ ಪಾಯಿಂಟ್ ನ ಸದಸ್ಯರು, ಪಂಚಾಯತ್ ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ. ರವೀಂದ್ರ ರಾವ್ ಅವರು ನಿರೂಪಿಸಿದರು. ನಂತರ ಕಯಾಕಿಂಗ್ ಪಾಯಿಂಟ್ ಸದಸ್ಯರು ಮತ್ತು ಸ್ವಯಂಸೇವಕರು ಕಾಯಕಿಂಗ್ ಮಾಡುವ ಮೂಲಕ, ಸಮುದ್ರದ ಹಿನ್ನೀರು ಪ್ರದೇಶದಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟೀಕ್ ಇತ್ಯಾದಿ ಕಸಗಳನ್ನು ಸಂಗ್ರಹಿಸಿ ದಡಕ್ಕೆ ತಂದರು.