- Home
- Karnataka Districts
- ಹಿಟ್ನಾಳ ಕುಟುಂಬದ ಅದ್ದೂರಿ ಮದುವೆಗೆ ಜನಸಾಗರ, ಪಕ್ಷಬೇಧ ಮರೆತು ಬಂದ ರಾಜಕೀಯ ನಾಯಕರು, ಆರ್ಕೆ ಸಂಗೀತಕ್ಕೆ ಜನರ ಕೇಕೆ!
ಹಿಟ್ನಾಳ ಕುಟುಂಬದ ಅದ್ದೂರಿ ಮದುವೆಗೆ ಜನಸಾಗರ, ಪಕ್ಷಬೇಧ ಮರೆತು ಬಂದ ರಾಜಕೀಯ ನಾಯಕರು, ಆರ್ಕೆ ಸಂಗೀತಕ್ಕೆ ಜನರ ಕೇಕೆ!
ಕೊಪ್ಪಳ ನಗರದ ಅಗಡಿ ಲೇಔಟ್ನಲ್ಲಿ ನಡೆದ ಹಿಟ್ನಾಳ ಕುಟುಂಬದ ಸೋಮಶೇಖರ ಹಿಟ್ನಾಳ ಹಾಗೂ ಡಾ. ನಿವೇದಿತ ಮದುವೆ ಸಮಾರಂಭ ಅತ್ಯಂತ ವಿಜ್ರಂಭಣೆಯಿಂದ ನಡೆಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಅನೇಕ ಸಚಿವರು ಭಾಗವಹಿಸಿದ್ದರು.

ಹಿಟ್ನಾಳ ಕುಟುಂಬದ ಮದುವೆ ಸಂಭ್ರಮಕ್ಕೆ ಜನಸಾಗರ
ಕೊಪ್ಪಳ: ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಅವರ ಸಹೋದರ ನಾಗರಾಜ ಹಿಟ್ನಾಳ ಅವರ ಪುತ್ರ ಸೋಮಶೇಖರ ಹಿಟ್ನಾಳ ಮತ್ತು ಡಾ. ನಿವೇದಿತಾ ಅವರ ವಿವಾಹ ಮಹೋತ್ಸವ ಅದ್ಧೂರಿ ವೈಭವಕ್ಕೆ ಸಾಕ್ಷಿಯಾಯಿತು. ಕೊಪ್ಪಳ ನಗರದ ಅಗಡಿ ಲೇಔಟ್ನಲ್ಲಿ ನಿರ್ಮಿಸಲಾಗಿದ್ದ ಭವ್ಯ ವೇದಿಕೆಯಲ್ಲಿ ನಡೆದ ಮದುವೆ ಸಮಾರಂಭಕ್ಕೆ ಜನಸಾಗರವೇ ಹರಿದುಬಂದಿದ್ದು, ಹಿಟ್ನಾಳ ಕುಟುಂಬದ ಸಂಭ್ರಮದಲ್ಲಿ ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಗಣ್ಯರು ಹಾಗೂ ಅಭಿಮಾನಿಗಳು ಪಾಲ್ಗೊಂಡು ನವದಂಪತಿಗೆ ಶುಭ ಹಾರೈಸಿದರು.
ಅತ್ಯಂತ ವಿಜೃಂಭಣೆ
ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ನೇತೃತ್ವದಲ್ಲಿ ಮದುವೆ ಸಮಾರಂಭವನ್ನು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ಹಿಟ್ನಾಳ ಗ್ರಾಮದಲ್ಲಿ ಕುಟುಂಬದ ಮನೆಯ ಬಳಿ ನಡೆದ ಅಕ್ಷತೆ ಕಾರ್ಯಕ್ರಮದ ಬಳಿಕ ವಧುವರರು ಭವ್ಯ ಮೆರವಣಿಗೆಯಲ್ಲಿ ಕೊಪ್ಪಳ ನಗರಕ್ಕೆ ಆಗಮಿಸಿದರು. ಅಲಂಕೃತ ವೇದಿಕೆಗೆ ನವಜೋಡಿ ಆಗಮಿಸುತ್ತಿದ್ದಂತೆ ನೆರೆದಿದ್ದ ಜನರು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಿದರು.
ರಾಜ್ಯದ ನಾನಾ ಭಾಗಗಳಿಂದ ಜನ
ವಧುವರರಿಗೆ ಶುಭ ಹಾರೈಸಲು ಬೆಳಗ್ಗೆಯಿಂದಲೇ ಜಿಲ್ಲೆಯ ವಿವಿಧ ಗ್ರಾಮಗಳು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಜನರು ತಂಡೋಪತಂಡವಾಗಿ ಆಗಮಿಸಿದ್ದರು. ವೇದಿಕೆಯ ಮುಂಭಾಗದಲ್ಲಿ ಸಾವಿರಾರು ಜನರು ಆಸೀನರಾಗಿ ಸಂಗೀತ ಕಾರ್ಯಕ್ರಮವನ್ನು ಆಲಿಸಿದರು. ಬಳಿಕ ಸರದಿಯಲ್ಲಿ ನಿಂತು ವಧು-ವರರಿಗೆ ಅಕ್ಷತೆ ಹಾಕಿ ಆಶೀರ್ವದಿಸಿದರು. ಜನರ ನಿರೀಕ್ಷೆಗೂ ಮೀರಿ ಜನಸ್ತೋಮ ಹರಿದುಬಂದಿದ್ದರಿಂದ ಸಮಾರಂಭದ ವೇದಿಕೆ ಹಾಗೂ ಸುತ್ತಮುತ್ತಲಿನ ಪ್ರದೇಶ ಜನರಿಂದ ಕಿಕ್ಕಿರಿದು ತುಂಬಿತ್ತು. ಮದುವೆ ಸಂಭ್ರಮದಲ್ಲಿ ಭಾಗಿಯಾದವರು ನವದಂಪತಿಗೆ ಶುಭ ಹಾರೈಸಿ ಭೋಜನ ಸ್ವೀಕರಿಸಿದರು.
ಮುಖ್ಯಮಂತ್ರಿ ಸೇರಿ ರಾಜಕೀಯ ನಾಯಕರ ಸಮಾಗಮ:
ಹಿಟ್ನಾಳ ಕುಟುಂಬದ ಮದುವೆ ಸಮಾರಂಭಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಆಗಮಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಸಚಿವರಾದ ಲಕ್ಷ್ಮಣ ಸವದಿ, ಬಸವರಾಜ ರಾಯರಡ್ಡಿ, ಶಿವರಾಜ ತಂಗಡಗಿ, ರುದ್ರಪ್ಪ ಲಮಾಣಿ, ಡಾ. ಅಜಯಸಿಂಗ್, ಮಾಜಿ ಸಚಿವರಾದ ಎಚ್.ಕೆ. ಪಾಟೀಲ, ಬಿ. ನಾಗೇಂದ್ರ, ಬಳ್ಳಾರಿ ಸಂಸದ ತುಕರಾಮ, ರಾಯಚೂರು ಸಂಸದ ಜಿ. ಕುಮಾರ ನಾಯಕ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಶಾಸಕರಾದ ಜನಾರ್ದನ ರೆಡ್ಡಿ, ಅಶೋಕ ಪಟ್ಟಣ ಕುಷ್ಟಗಿ ಶಾಸಕ ಹಾಗೂ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಕಂಪ್ಲಿ ಶಾಸಕ ಗಣೇಶ, ಹಾಲಪ್ಪ ಆಚಾರ್, ಮಾಜಿ ಸಚಿವರಾಜ ಅಮಮೇಗೌಡ ಭಯ್ಯಾಪುರ, ಶಿವನಗೌಡ ನಾಯಕ, ಮಾಜಿ ಸಂಸದ ಸಂಗಣ್ಣ ಕರಡಿ, ನಿಗಮದ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಬಸನಗೌಡ ಬಾದರ್ಲಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಕೆಕೆಆರ್ಡಿಬಿ ಅಧ್ಯಕ್ಷ ಬಸನಗೌಡ ದದ್ದಲ್, ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ, ಶಾಸಕಿ ಲತಾ ಮಲ್ಲಿಕಾರ್ಜುನ, ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ, ಚಿಕ್ಕಮಗಳೂರಿನ ಜಿ.ಎಸ್. ಶ್ರೀನಿವಾಸ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಗವಿಮಠಶ್ರೀಗಳ ಆಶೀರ್ವಾದ:
ರಾಜಕೀಯ ಪಕ್ಷಗಳ ಭೇದ ಮರೆತು ವಿವಿಧ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಸೇರಿ ನವದಂಪತಿಗೆ ಶುಭ ಹಾರೈಸಿದ್ದು ಮದುವೆ ಸಮಾರಂಭದ ವಿಶೇಷವಾಗಿತ್ತು. ಹಿಟ್ನಾಳ ಕುಟುಂಬದ ಆತಿಥ್ಯ, ಅದ್ಧೂರಿ ವ್ಯವಸ್ಥೆ ಹಾಗೂ ಜನರ ಅಭೂತಪೂರ್ವ ಭಾಗವಹಿಸುವಿಕೆ ಕೊಪ್ಪಳದಲ್ಲಿ ನಡೆದ ಈ ವಿವಾಹ ಮಹೋತ್ಸವವನ್ನು ಸ್ಮರಣೀಯವಾಗಿಸಿತು.
ವಧುವರರಾದ ಕೆ. ಸೋಮಶೇಖರ ಹಿಟ್ನಾಳ ಹಾಗೂ ಡಾ. ನಿವೇದಿತಾ ಅವರಿಗೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಆಗಮಿಸಿ, ಆಶೀರ್ವಾದ ಮಾಡಿದರು. ಖ್ಯಾತ ಗಾಯಕ ರಾಜೇಶ ಕೃಷ್ಣನ್ ಹಾಗೂ ಅವರ ತಂಡ ನೀಡಿದ ಸಂಗೀತ ಕಾರ್ಯಕ್ರಮಲ್ಲಿ ಸೇರಿದ್ದ ಜನಸ್ತೋಮ ಕೇಕೆ ಹಾಕಿ, ಸಂಭ್ರಮಿಸಿತು.
ಫೋಟೋಗಳುನಾಗರಾಜ ಹಿಟ್ನಾಳ ಅವರ ಪುತ್ರ ಸೋಮಶೇಖರ ಹಿಟ್ನಾಳ ಮತ್ತು ಡಾ. ನಿವೇದಿತಾ ಅವರ ವಿವಾಹ ಮಹೋತ್ಸವದಲ್ಲಿ ಗಣ್ಯರು ಪಾಲ್ಗೊಂಡಿದ್ದರು.













