ಪ್ರೇಮ ವಿವಾಹಕ್ಕೆ ನಿಷೇಧ ವಿಧಿಸಿದ ಗ್ರಾಮಸ್ಥರು; ಪಂಚಾಯ್ತಿಯಿಂದ ನಿರ್ಣಯ ಅಂಗೀಕಾರ
ಗ್ರಾಮದಲ್ಲಿ ಕುಟುಂಬದ ಒಪ್ಪಿಗೆಯಿಲ್ಲದ ಪ್ರೇಮ ವಿವಾಹಗಳನ್ನು ನಿಷೇಧಿಸಲಾಗಿದೆ. ಈ ನಿರ್ಧಾರವು ವ್ಯಾಪಕ ಟೀಕೆಗೆ ಗುರಿಯಾಗಿದ್ದು, ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಹಲವರು ಆರೋಪಿಸಿದ್ದಾರೆ. ಗ್ರಾಮ ಪಂಚಾಯತ್ ಮಾತ್ರ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಚಂಡೀಗಢ: ಪಂಜಾಬ್‌ನ ಗ್ರಾಮವೊಂದರಲ್ಲಿ ಪ್ರೇಮವಿವಾಹ ಆಗಬಾರದು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ದಮನ ಮಾಡುವ ನಿರ್ಧಾರ ಎಂಬ ಟೀಕೆಗಳು ಕೇಳಿ ಬಂದಿವೆ. ಪಂಜಾಬ್‌ನ ಮೊಹಾಲಿ ಜಿಲ್ಲೆಯ ಮನಕ್‌ಪುರ್ ಶರೀಫ್ ಗ್ರಾಮಸ್ಥರ ನಿರ್ಧಾರವನ್ನು ಗ್ರಾಮ ಪಂಚಾಯತ್ ಅಂಗೀಕರಿಸಿದೆ. ಗ್ರಾಮದಲ್ಲಿ ಕುಟುಂಬದ ಒಪ್ಪಿಗೆಯಿಲ್ಲದೆ ಪ್ರೇಮ ವಿವಾಹವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಹಲವರು ಈ ನಿರ್ಧಾರವನ್ನು ಅಸಂವಿಧಾನಿಕ ಮತ್ತು ತಾಲಿಬಾನಿ ಮಾದರಿ ಎಂದು ಕರೆದಿದ್ದಾರೆ.
ಜುಲೈ 31 ರಂದು ಸರ್ವಾನುಮತದಿಂದ ಈ ನಿರ್ಧಾರವನ್ನು ಗ್ರಾಮ ಪಂಚಾಯತ್ ಅಂಗೀಕರಿಸಿದೆ. ಈ ನಿಯಮದ ಪ್ರಕಾರ, ಕುಟುಂಬದ ಅನುಮತಿಯಿಲ್ಲದೆ ವಿವಾಹವಾಗುವ ದಂಪತಿ ಗ್ರಾಮದಲ್ಲಿ ವಾಸಿಸಲು ಅಥವಾ ಹತ್ತಿರದ ಪ್ರದೇಶದಲ್ಲಿರುವಂತಿಲ್ಲ. ಪ್ರೇಮ ವಿವಾಹವಾಗುವ ದಂಪತಿಗೆ ಆಶ್ರಯ ನೀಡುವ ಅಥವಾ ಬೆಂಬಲಿಸುವ ಕುಟುಂಬ/ವ್ಯಕ್ತಿಯ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಎಚ್ಚರಿಕೆ ನೀಡಲಾಗಿದೆ.
ಈ ಕುರಿತು ಮಾತನಾಡಿರುವ ಪಂಚಾಯಿತಿಯ ಮುಖ್ಯಸ್ಥ ದಲ್‌ವೀರ್ ಸಿಂಗ್, ಇದು ಶಿಕ್ಷೆಯಲ್ಲ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ರಕ್ಷಿಸಲು ತೆಗೆದುಕೊಂಡ ಕ್ರಮ ಎಂದು ಹೇಳುತ್ತಾರೆ. ಇತ್ತೀಚೆಗೆ ಗ್ರಾಮದಲ್ಲಿ 26 ವರ್ಷದ ದೇವಿಂದರ್ ಎಂಬಾತ 24 ವರ್ಷದ ಸಂಬಂಧಿಯನ್ನು ಮದುವೆಯಾಗಿದ್ದನು. ಮದುವೆ ಬಳಿಕ ದೇವಿಂದರ್ ದೇವಿಂದರ್ ಪತ್ನಿ ಜೊತೆ ಗ್ರಾಮ ತೊರಿದಿದ್ದಾನೆ. ಈ ಘಟನೆ ಗ್ರಾಮದ 2 ಸಾವಿರ ಗ್ರಾಮಸ್ಥರ ಮೇಲೆ ಪರಿಣಾಮ ಬೀರಿದೆ ಎಂದು ದಲ್‌ವೀರ್ ಸಿಂಗ್ ಹೇಳುತ್ತಾರೆ.
ನಾವು ಲವ್ ಮ್ಯಾರೇಜ್ ಮತ್ತು ಕಾನೂನುಗಳನ್ನು ವಿರೋಧಿಸಲ್ಲ ಎಂದು ಹೇಳುವ ದಲ್‌ವೀರ್ ಸಿಂಗ್, ಆದ್ರೆ ನಮ್ಮ ಪಂಚಾಯತ್ ಮಾತ್ರ ಪ್ರೇಮವಿವಾಹಕ್ಕೆ ಅನುಮತಿ ನೀಡಲ್ಲ ಅಂತಾರೆ. ಇಂತಹ ವಿವಾಹಗಳನ್ನು ತಡೆಯೋದು ಇಡೀ ಸಮುದಾಯದ ಜವಾಬ್ದಾರಿಯಾಗಿದ್ದು, ಅಕ್ಕ-ಪಕ್ಕದ ಗ್ರಾಮಗಳು ಸಹ ಈ ರೀತಿಯ ನಿರ್ಣಯಗಳನ್ನು ಅಂಗೀಕರಿಸಿಕೊಳ್ಳಬೇಕು ಎಂದು ದಲ್‌ವೀರ್ ಸಿಂಗ್ ಮನವಿ ಮಾಡಿಕೊಳ್ಳುತ್ತಾರೆ.
ಗ್ರಾಮದ ಕೆಲ ಯುವಕರು ಮತ್ತು ನಿವಾಸಿಗಳು ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಗ್ರಾಮದ ಸಂಸ್ಕೃತಿ ಮತ್ತು ಕುಟುಂಬದ ಪ್ರತಿಷ್ಠೆಯನ್ನು ಕಾಪಾಡುವುದು ಮುಖ್ಯ ಅನ್ನೋದು ಇವರ ಅಭಿಪ್ರಾಯವಾಗಿದೆ. ಇನ್ನು ಅನೇಕ ನಾಗರಿಕ ಸಂಘಟನೆಗಳು, ನಾಯಕರು ಮತ್ತು ಸಾಂವಿಧಾನಿಕ ಸಂಸ್ಥೆಗಳು ಪಂಚಾಯತ್‌ನ ಈ ನಡೆಯನ್ನು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಕಟುವಾಗಿ ಟೀಕಿಸಿದ್ದು, ಕಾನೂನಿನ ಪ್ರಕಾರ ಮುಂದೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುವುದು ಎಂದಿದ್ದಾರೆ.
ಜೋಡಿ ವಯಸ್ಕರಾಗಿದ್ರೆ, ತಮ್ಮ ಇಚ್ಛೆಯಂತೆ ಮದುವೆಯಾಗಲು ಕಾನೂನುಬದ್ಧವಾಗಿ ಸ್ವತಂತ್ರರು ಎಂದು ಮೊಹಾಲಿಯ ಹೆಚ್ಚುವರಿ ಉಪ ಆಯುಕ್ತ ಸೋನಮ್ ಚೌಧರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಅಗರ್ವಾಲ್ ಹೇಳುತ್ತಾರೆ. ಇಲ್ಲಿಯವರೆಗೆ ಗ್ರಾಮ ಪಂಚಾಯಿತಿ ನಿರ್ಣಯದ ವಿರುದ್ಧ ಯಾವುದೇ ದೂರು ಬಂದಿಲ್ಲ. ದೂರು ಬಂದ್ರೆ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಧರ್ಮವೀರ್ ಗಾಂಧಿ ಈ ಪ್ರಸ್ತಾಪವನ್ನು "ತಾಲಿಬಾನಿ ಹುಕಮ್" ಎಂದು ಕರೆದಿದ್ದಾರೆ. ಜೀವನ ಸಂಗಾತಿಯನ್ನು ಪ್ರೀತಿಸುವ ಮತ್ತು ಆಯ್ಕೆ ಮಾಡುವ ಸ್ವಾತಂತ್ರ್ಯ ಪ್ರತಿಯೊಬ್ಬ ವಯಸ್ಕನ ಮೂಲಭೂತ ಹಕ್ಕು ಎಂದು ಹೇಳಿದರು. ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರಾಜ್ ಲಲ್ಲಿ ಗಿಲ್ ಇದು ಸಂಪೂರ್ಣವಾಗಿ ಅಸಂವಿಧಾನಿಕ ಎಂದು ಹೇಳಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.