ಸ್ಮಾರ್ಟ್ ಯೋಜನೆ ಒಂದೇ ಸಮುಚ್ಚಯದಡಿ ರೂಪಿಸಿ: ಪ್ರಹ್ಲಾದ ಜೋಶಿ
ಹುಬ್ಬಳ್ಳಿ(ಡಿ.07): ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗಲಿರುವ ಗ್ರೀನ್ ಮೊಬಿಲಿಟಿ ಕಾರಿಡಾರ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಹಾಗೂ ಉಣಕಲ್ ಕೆರೆ ಜಲಕ್ರೀಡೆಗಳನ್ನೆಲ್ಲ ಒಂದೆ ಸಮುಚ್ಚಯದಡಿ ತಂದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಜನತೆಗೆ ತಲುಪಲಿದೆ, ಜತೆಗೆ ಸರ್ಕಾರಕ್ಕೆ ಆದಾಯವೂ ಬರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಭಾನುವಾರ ಉಣಕಲ್ ಕೆರೆ ಕೋಡಿ ನಾಲಾ ಪ್ರದೇಶದ ಬಳಿ ಎಚ್‌ಡಿಎಸ್‌ಸಿಎಲ್ 8 ಕೋಟಿ ಮೊತ್ತದಲ್ಲಿ 680 ಮೀ. ಗ್ರೀನ್ ಮೊಬೈಲಿಟಿ ಕಾರಿಡಾರ್, 5 ಕೋಟಿಯಲ್ಲಿ ಈಜುಕೊಳದ ದ್ವಿತೀಯ ಹಂತದ ಕಾಮಗಾರಿ, 92.94 ಕೋಟಿ ವೆಚ್ಚದ ಸ್ಮಾರ್ಟ್ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಪ್ರಹ್ಲಾದ ಜೋಶಿ
ಕ್ರೀಡಾ ಸಮುಚ್ಚಯದ ಡಿಪಿಆರ್ ಸಿದ್ಧವಾಗುತ್ತಿದ್ದು, ಈ ವಾರದಲ್ಲಿ ಯೋಜನಾ ವರದಿ ಸಿದ್ಧವಾಗಲಿದೆ. ಇಲ್ಲಿ ಕ್ರೀಡಾ ತರಬೇತಿ, ಸಭಾಂಗಣ, ಸಮಾಲೋಚನಾ ಕೇಂದ್ರವನ್ನು ಸಹ ನಿರ್ಮಿಸಲಾಗುವುದು. ರಾಜ್ಯಕ್ಕೆ ಮಾದರಿಯಾಗುವ ಈ ಸಮುಚ್ಚಯದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ ಎಂದರು.
ಇನ್ನು ಗ್ರೀನ್ ಮೊಬಿಲಿಟಿ ಕಾರಿಡಾರ್ ವಿಶ್ವಕ್ಕೆ ಮಾದರಿಯಾಗಲಿದೆ. ಪ್ರಸ್ತುತ 680 ಮೀ. ಗ್ರೀನ್ ಮೊಬೈಲಿಟಿ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಉಣಕಲ್ ನಾಲಾ ವ್ಯಾಪ್ತಿಯ 10.5 ಕಿ.ಮೀ ಉದ್ದದ ಗ್ರೀನ್ ಮೊಬೈಲಿಟಿ ಕಾರಿಡಾರ್ ನಿರ್ಮಾಣಕ್ಕೆ 130 ಕೋಟಿ ವೆಚ್ಚವಾಗಲಿದೆ. 50 ಕೋಟಿಗಳನ್ನು ಸ್ಮಾಟ್ ಸಿಟಿ ಯೋಜನೆಯಡಿ ಹಾಗೂ 80 ಕೋಟಿಯನ್ನು ಎಎಫ್‌ಡಿ ನೀಡಿದೆ. ನಾಲಾ ಪಕ್ಕ ಸುಸಜ್ಜಿತ ತಡೆಗೋಡೆ, ಸೈಕಲ್ ಟ್ರ್ಯಾಕ್, ವಾಕಿಂಗ್ ಪಾತ್, ಉದ್ಯಾನ ನಾಲಾದ ಉದ್ದಕ್ಕೂ ನಿರ್ಮಾಣವಾಗಲಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿಗೆ ಹೆಚ್ಚಿನ ಮಹತ್ವ ನೀಡಬೇಕು. ಪಾಲಿಕೆ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕರು ರಸ್ತೆ ನಿರ್ಮಾಣಕ್ಕೆ ಮುಂಚೆ ಗ್ಯಾಸ್ ಹಾಗೂ ಯುಜಿಡಿ ಸಂಪರ್ಕ ಪ್ರತಿ ಮನೆಗೆ ನೀಡಲಾಗಿದೆಯೆ ಎಂದು ಸರ್ವೇ ಮಾಡಬೇಕು. ರಸ್ತೆ ನಿರ್ಮಿಸಿದ ಬಳಿಕ ಮತ್ತೆ ಅಗೆಯಲು ಅವಕಾಶ ನೀಡಬಾರದು ಎಂದರು.
ಸಚಿವ ಜಗದೀಶ್ ಶೆಟ್ಟರ್, ರಾಷ್ಟ್ರದಲ್ಲಿ ಆಯ್ದ 100 ನಗರಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹು-ಧಾ ರಾಷ್ಟ್ರಮಟ್ಟದಲ್ಲಿ 13ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಮೊದಲ ಸ್ಥಾನದಲ್ಲಿದೆ. ನಿಗದಿತ ವೇಳೆಯ ಒಳಗೆ ಎಲ್ಲ ಯೋಜನೆಗಳು ಪೂರ್ಣಗೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಮಹಾನಗರ ಪಾಲಿಕೆಗೆ ನೀಡಲಾದ ಎರಡು ಜೆಟ್ಟಿಂಗ್ ವಾಹನಗಳಿಗೆ ಚಾಲನೆ ನೀಡಲಾಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಸಂಸ್ಥೆ ಅಧ್ಯಕ್ಷ ಹಾಗೂ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಸಿದ್ದನಗೌಡ ಈಶ್ವರಗೌಡ ಚಿಕ್ಕನಗೌಡ್ರ, ಶಾಸಕ ಅರವಿಂದ ಚಂದ್ರಕಾಂತ ಬೆಲ್ಲದ, ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ್, ಎಚ್‌ಡಿಎಸ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ಇತರರಿದ್ದರು.