ಲೆನೊವಾ ವಿಶೇಷ ಸ್ಪರ್ಧೆ: ವಿಶ್ವದ 10 ಮಹಿಳೆಯರ ಜೀವನಗಾಥೆಗೆ ನರಗುಂದದ ಯುವತಿ ಅಯ್ಕೆ
ನರಗುಂದ(ಅ.15): ಬಾಲ್ಯದಲ್ಲಿ ತಂದೆ ತಾಯಿಗಳು ಮದುವೆ ಮಾಡಲು ಮುಂದಾದಾಗ ಅದನ್ನು ಮುಂದೂಡಿ ಈಗ ತನ್ನದೇ ಆದ ಕಥೆ ಮೂಲಕ ವಿಶ್ವಮಾನ್ಯಳಾಗಿದ್ದಾಳೆ ತಾಲೂಕಿನ ಕುರಗೋವಿನಕೊಪ್ಪದ ಅಶ್ವಿನಿ ದೊಡ್ಡಲಿಂಗಪ್ಪನವರ.
ಅಶ್ವಿನಿ ಅಪ್ಪಟ ಗ್ರಾಮೀಣ ಪ್ರತಿಭೆ. ಈಗ ಲೆನೊವಾ ಕಂಪೆನಿ ಆಯೋಜಿಸಿರುವ ವಿಶೇಷ ಸ್ಪರ್ಧೆಗೆ ಅಶ್ವಿನಿಯ ಜೀವನದ ಕಥೆ ಆಯ್ಕೆಯಾಗಿದೆ. ವಿಶ್ವದ ಕೇವಲ 10 ಮಹಿಳೆಯರ ಕಥೆಗಳನ್ನು ಲೆನೊವಾ ಸಂಸ್ಥೆ ಆಯ್ಕೆ ಮಾಡಿದೆ. ಅವುಗಳಲ್ಲಿ ಅಶ್ವಿನಿ ಕಥೆ ಕೂಡ ಒಂದು ಎನ್ನುವುದು ವಿಶೇಷ.
ಕುರಗೋವಿನಕೊಪ್ಪದ ಗ್ರಾಮೀಣ ಪ್ರತಿಭೆ ಅಶ್ವಿನಿ ತನ್ನ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಮುಗಿಸಿದ್ದು, ಪ್ರೌಢಶಾಲಾ ಶಿಕ್ಷಣವನ್ನು ನರಗುಂದ ಲಯನ್ಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಲಯನ್ಸ್ ಪಿಯು ಕಾಲೇಜಿನಲ್ಲಿ ಪೂರೈಸಿದ್ದಾರೆ.
ಪದವಿ ಶಿಕ್ಷಣವನ್ನು ಪಟ್ಟಣದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದ್ದಾರೆ. ಪ್ರೌಢಶಾಲಾ ಶಿಕ್ಷಣ ಮುಗಿಸುತ್ತಲೇ ಮನೆಯಲ್ಲಿ ಮದುವೆಗೆ ಮುಂದಾದಾಗದ ಅವರ ಮನವೊಲಿಸಿ, ಸಾಧನೆಯತ್ತ ಹೆಜ್ಜೆ ಇಟ್ಟ ಅಶ್ವಿನಿ ದೊಡ್ಡಲಿಂಗಪ್ಪನವರ
ಪಿಯುಸಿ ಹಾಗೂ ಪದವಿ ಶಿಕ್ಷಣ ಮುಗಿಸಿದಾಗಲೂ ಮನೆಯವರ ಮದುವೆ ಮಾಡಲು ದುಂಬಾಲು ಬಿದ್ದಾಗ ಅದನ್ನು ನಯವಾಗಿ ತಿರಸ್ಕರಿಸಿದ್ದ ಅಶ್ವಿನಿ
ಆನಂತರ ಮನೆಯವರ ಅಸಮಾಧಾನದ ನಡುವೆ ಗೆಳತಿಯರ ಸಹಾಯದಿಂದ ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್‌ಗೆ ಸೇರಿ ಕೌಶಲ್ಯಾಭಿವೃದ್ಧಿ ತರಬೇತಿ ಮುಗಿಸಿ ಶಿಕ್ಷಕರಿಗೆ ತರಬೇತಿ ನೀಡುವ ತರಬೇತುದಾರಾಗಿ ರೂಪುಗೊಂಡಿದ್ದು ವಿಶೇಷ. ಆನಂತರ ಬೆಂಗಳೂರಿನ ಮೇಘ ಶಾಲಾ ಸಂಸ್ಥೆಗೆ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ.
ಅಲ್ಲಿಂದ ಅಶ್ವಿನಿ ಬೆಂಗಳೂರಿನ ವಿವಿಧ ಶಾಲಾ ಶಿಕ್ಷಕರಿಗೆ ಕೌಶಲ್ಯ ಹಾಗೂ ತಂತ್ರಜ್ಞಾನ ಬಳಸಿ ಎಲ್ಲ ಶಿಕ್ಷಕರ ಮನ ಗೆದ್ದಿದ್ದಾರೆ. ಈ ಸಂದರ್ಭದಲ್ಲಿಯೇ ಲೆನೊವಾ ಕಂಪೆನಿ ಜೀವನ ಕಥೆಗೆ ಆಯ್ಕೆಯಾಗಿದ್ದಾರೆ. ಲಾಕ್‌ಡೌನ್ ಪರಿಣಾಮ ಈಗ ಗ್ರಾಮದಲ್ಲಿಯೇ ಇದ್ದು ಆನ್‌ಲೈನ್ ಮೂಲಕ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ.
ಹೆಣ್ಣುಮಕ್ಕಳನ್ನು ಮದುವೆ ಬಂಧನಕ್ಕೆ ದೂಡದೇ ಅವರಿಗೆ ಶಿಕ್ಷಣ ನೀಡಲು ಪಾಲಕರು ಮುಂದಾಗಬೇಕು. ನನಗೂ ಮದುವೆ ಮಾಡಲು ಮುಂದಾದಾಗ ಅದರ ಬಗ್ಗೆ ಹೆತ್ತವರ ಮನವೊಲಿಸಿ ನಾನು ಪದವಿ ಶಿಕ್ಷಣ ಪೂರೈಸಿ ಸ್ವಾವಲಂಬಿಯಾದೆ. ಜತೆಗೆ ಮದುವೆ ಬೇಗ ಮಾಡುವವರಿಗೆ ತಿಳಿಸಿ ಹೇಳತೊಡಗಿದೆ. ಅದೇ ನನ್ನ ಜೀವನ ಕಥೆ. ಇದು ಉಳಿದ ಹೆಣ್ಣುಮಕ್ಕಳಿಗೆ ಮಾದರಿಯಾಗಬೇಕು ಎಂದು ಅಶ್ವಿನಿ ದೊಡ್ಡನಿಂಗಪ್ಪನವರ ಅವರು ತಿಳಿಸಿದ್ದಾರೆ.