ಹುಬ್ಬಳ್ಳಿ: ಜಾತಿ ಧರ್ಮ ಮೀರಿದ ಬಳ್ಳಾ ಸೇಠ್ ಸೋಂಕಿತರ ಸೇವೆ..!
ಮಯೂರ ಹೆಗಡೆ
ಹುಬ್ಬಳ್ಳಿ(ಮೇ.09): ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದರಿಂದ ಹಿಡಿದು, ಕುಟುಂಬಕ್ಕೆ ಅಗಲಿದವರ ಮುಖದರ್ಶನ ಮಾಡಿಸಿ ಅಂತಿಮ ಸಂಸ್ಕಾರಕ್ಕೆ ನೆರವಾಗುವ ವರೆಗೆ ಜಾತಿ, ಧರ್ಮಗಳ ಎಲ್ಲೆ ಮೀರಿ ಇಲ್ಲೊಬ್ಬರು ಕೋವಿಡ್ ಸೋಂಕಿತರಿಗೆ ಉಚಿತವಾಗಿ ನೆರವಾಗುತ್ತಿದ್ದಾರೆ.
ಇವರು ಮಹ್ಮದ್ ಇರ್ಷಾದ್ ಅಹ್ಮದ್ ಬಳ್ಳಾರಿ (ಬಳ್ಳಾ ಸೇಠ್). ಹುಬ್ಬಳ್ಳಿಯ ಗಣೇಶಪೇಟ ನಿವಾಸಿ. ದಿನದ 24 ಗಂಟೆಗಳ ಕಾಲ ಸೋಂಕಿತರಿಗಾಗಿ ಶ್ರಮಿಸುತ್ತಿದ್ದಾರೆ. ಮೊದಲ ಅಲೆಯ ವೇಳೆ ನಿರ್ಗತಿಕರಿಗೆ, ವಲಸಿಗರಿಗೆ ಆಹಾರ ಪೂರೈಸಿದ್ದ ಬಳ್ಳಾ ಸೇಠ್ ಈಗ ನೇರವಾಗಿ ಕೋವಿಡ್ ಸೋಂಕಿತರ ಸೇವೆಯಲ್ಲಿ ತೊಡಗಿದ್ದಾರೆ. ಸೋಂಕಿತರ ಸೇವೆಗಾಗಿ ತಮ್ಮ ಓಮಿನಿಯನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿದ್ದಾರೆ. ಇದರಲ್ಲಿ 15ಕೆಜಿಯ ಮೂರು ಸಿಲಿಂಡರ್ ಇಟ್ಟಿದ್ದಾರೆ. ಹೀಗೆ ಆಕ್ಸಿಜನ್ ವ್ಯವಸ್ಥೆ, ಸೋಂಕಿತರಿಗೆ ಬೇಕಾದ ಅಗತ್ಯ ಔಷಧ, ಟೆಲಿಮೆಡಿಸಿನ್‌ಗೆ ಬೇಕಾದ ಪಲ್ಸ್ ಆಕ್ಸಿಮೀಟರ್, ಥರ್ಮಾಮೀಟರ್ ಆ್ಯಂಬುಲೆನ್ಸ್‌ನಲ್ಲಿದೆ. ಸೋಂಕಿತರು ಎಷ್ಟೇ ಹೊತ್ತಿಗೆ ಕರೆ ಮಾಡಲಿ, ಇವರು ಯಾವುದೇ ಬಗೆಯ ಸೇವೆಗೆ ಸಿದ್ಧ.
ಸ್ವಾಬ್ ಟೆಸ್ಟ್ ಮಾಡಿಸುವುದರಿಂದ ಇವರ ಸೇವೆ ಆರಂಭ. ಸೋಂಕಿತನ ಆರೋಗ್ಯ ತೀರಾ ಹದಗೆಟ್ಟಿದ್ದರೆ ಆಸ್ಪತ್ರೆಗೆ ದಾಖಲಿಸುವ ಮುನ್ನ ವೈದ್ಯರಿಗೆ ಕರೆ ಮಾಡಿ ರೋಗಿಯ ಸ್ಥಿತಿಗತಿ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ. ವೈದ್ಯರು ಸೂಚಿಸುವಂತೆ ರೋಗಿಗೆ ಅಗತ್ಯವಿದ್ದರೆ ಆಕ್ಸಿಜನ್ ಬೆಡ್, ವೆಂಟಿಲೇಟರ್, ಐಸಿಯು ಹುಡುಕಿಕೊಂಡು ಕರೆದೊಯ್ದು ದಾಖಲಿಸುವ ಕೆಲಸ ಮಾಡುತ್ತಿದ್ದಾರೆ.
ನೆರವು ಬೇಕಾದವರಿಗೆ ಹುಧಾ ಮಹಾನಗರ ಪಾಲಿಕೆ, ಕಿಮ್ಸ್‌ನ ವೈದ್ಯರು, ಸಿಬ್ಬಂದಿ ಕೂಡ ಇವರಿಗೆ ಕರೆ ಮಾಡಿ ಸಂಪರ್ಕ ಮಾಡಿಕೊಡುತ್ತಿದ್ದಾರೆ. ಇಲ್ಲಿವರೆಗೆ ನೂರಾರು ಜನರಿಗೆ ಹಲವು ರೀತಿಯಲ್ಲಿ ನೆರವಾಗಿದ್ದಾರೆ. ಇವರ ತಂಡದಲ್ಲಿ ಐದಾರು ಜನರಿದ್ದಾರೆ. ಹುಸೇನ್ ಮುಜಾಹಿದ, ಸಾಧಿಕ್ ಬಳ್ಳಾರಿ, ಮುಜಮ್ಮಿಲ್ ದುಟೆಗಾರ, ಅಬ್ದುಲ್ ಜಮೀಲ್ ಮುಲ್ಲಾ, ಮಹ್ಮದ್ ಖಾಸೀಂ ನಾಯಕ್.
ಹುಬ್ಬಳ್ಳಿಗರು ಇವರ ಸೇವೆ ಪಡೆಯಲು ಬಳ್ಳಾ ಸೇಠ್-9980080005 ಸಂಪರ್ಕಿಸಬಹುದು. ದಿನದ 24ಗಂಟೆಯೂ ಇವರು ಲಭ್ಯ. ಕೋವಿಡ್‌ನ ದುರಂತದ ಪರಾಕಾಷ್ಠೆಯೆಂದರೆ ಅದು ಅಂತ್ಯಸಂಸ್ಕಾರವಿಲ್ಲದೆ ಮುಕ್ತಾಯವಾಗುವಂತದ್ದು. ಆದರೆ ಬಳ್ಳಾ ಸೇಠ್ ಈ ಸೇವೆಯನ್ನೂ ಮಾಡುತ್ತಿದ್ದಾರೆ. ಸೂಕ್ತ ಮುಂಜಾಗೃತೆಯೊಂದಿಗೆ ಕುಟುಂಬಸ್ಥರಿಗೆ ಮೃತರ ಮುಖದರ್ಶನ ಮಾಡಿಸುತ್ತಾರೆ. ಹಿಂದೂ, ಮುಸ್ಲಿಂ, ಕ್ರೈಸ್ತರಿರಲಿ ಎಲ್ಲರಿಗೂ ನೆರವಿನ ಹಸ್ತ ಚಾಚುತ್ತಿದ್ದಾರೆ. ಆಸ್ಪತ್ರೆಯಿಂದ ಮನೆಗೆ, ಮನೆಯಿಂದ ಮಸಣಕ್ಕೆ ಕಳೆಬರವನ್ನು ತಮ್ಮ ಆ್ಯಂಬುಲೆನ್ಸ್‌ನಲ್ಲಿ ಸಾಗಿಸುತ್ತಾರೆ.
ಮೃತದೇಹ ಕೊಂಡೊಯ್ಯುವಾಗ ಆ್ಯಂಬುಲೆನ್ಸ್‌ನ ಒಳಗಿನ ಸ್ಟ್ರಕ್ಚರ್‌ನ್ನು ಬದಲಿಸಿಕೊಳ್ಳುತ್ತಾರೆ. ಕುಟುಂಬಸ್ಥರು ಕೈಗೊಳ್ಳುವ ಧಾರ್ಮಿಕ ವಿಧಿಯನ್ನು ಭಾವನೆಗೆ ಧಕ್ಕೆ ಬರದಂತೆ ಸಂಕ್ಷಿಪ್ತವಾಗಿ ಮುಗಿಸಲು ತಿಳಿಸುತ್ತಾರೆ. ಮಸಣದಲ್ಲಿಯೂ ಸಿಬ್ಬಂದಿಗೆ ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದಾರೆ. ಹೀಗೆ 130 ಅಂತ್ಯ ಸಂಸ್ಕಾರಕ್ಕೆ ಹೆಗಲು ಕೊಟ್ಟಿದ್ದಾರೆ.
ಸರ್ವಧರ್ಮ ಸಮಾನತೆ ಜಾಗತಿಕವಾಗಬೇಕು. ಕೋವಿಡ್‌ನ ಈ ಸಂಕಷ್ಟದ ಪರಿಸ್ಥಿತಿಯಲ್ಲೆ ಸಂಬಂಧಿಕರೆ ರೋಗಿಗಳ ನೆರವಿಗೆ ಬರದಿರುವುದನ್ನು ನೋಡಿ ದಿಗ್ಭ್ರಮೆಯಾಯಿತು. ಹೀಗಾಗಿ ನಾನು ನೇರವಾಗಿ ರೋಗಿಗಳ ಸಹಾಯಕ್ಕೆ ನಿಂತಿದ್ದೇನೆ ಎಂದು ಮಹ್ಮದ್ ಇರ್ಷಾದ್ ಅಹ್ಮದ್ ಬಳ್ಳಾರಿ (ಬಳ್ಳಾ ಸೇಠ್) ತಿಳಿಸಿದ್ದಾರೆ.