1000ಕ್ಕೂ ಹೆಚ್ಚು ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸಿದ ಸೂರಿ..!
ಪೊಲೀಸ್ ಇಲಾಖೆಯಿಂದಲೇ ಆಪದ್ಭಾಂದವ ಎಂದು ಕರೆಸಿಕೊಂಡಿರುವ ಕಾಪು ಸೂರಿ ಶೆಟ್ಟಿ ಈಗ ಏನ್ಮಾಡ್ತಿದ್ದಾರೆ ಗೊತ್ತಾ..? ಲಾಕ್‌ಡೌನ್ ಸಂದರ್ಭದಲ್ಲಿ ಸೂರಿ ಸ್ಮಶಾನದಲ್ಲಿದ್ದಾರೆ. 1000ಕ್ಕೂ ಹೆಚ್ಚು ಅನಾಥ ಶವಗಳ ಅಂತ್ಯಸಂಸ್ಕಾರ ಮಾಡಿದ ಸೂರಿ ಲಾಕ್‌ಡೌನ್‌ನಲ್ಲಿ ಏನ್ಮಾಡ್ತಿದ್ದಾರೆ..? ಇಲ್ನೋಡಿ ಫೋಟೋಸ್
ಸೂರಿ ಶೆಟ್ಟಿ ಅವರು ಬೆಳಪು ಗ್ರಾಮದ ಸ್ಮಶಾನದಲ್ಲಿ ಒಬ್ಬರೇ ಒಂದಷ್ಟುರಾಶಿ ಕಟ್ಟಿಗೆ ಒಡೆಯುತ್ತಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಕಳೆದೊಂದು ತಿಂಗಳಿನಿಂದ ಅಪಘಾತ, ಆತ್ಮಹತ್ಯೆ, ಆಕಸ್ಮಿಕ ಸಾವು, ಅನಾಥರ ಸಾವಿನ ಸಂಖ್ಯೆ ತೀವ್ರ ಕಡಿಮೆಯಾಗಿವೆ. ಮೂಲ್ಕಿಯಿಂದ ಉಡುಪಿವರೆಗೆ 30 ಕಿ.ಮೀ. ವ್ಯಾಪ್ತಿಯಲ್ಲಿ ಇಂತಹ ಯಾವುದೇ ಘಟನೆಗಳು ನಡೆದರೂ ಅಲ್ಲಿಗೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ, ಶವಗಳನ್ನು ಶವಾಗಾರಕ್ಕೆ ಕಳುಹಿಸಿ ಪೊಲೀಸ್ ಇಲಾಖೆಯಿಂದಲೇ ಆಪದ್ಭಾಂದವ ಎಂದು ಕರೆಸಿಕೊಂಡಿದ್ದಾರೆ ಕಾಪು ಸೂರಿ ಶೆಟ್ಟಿ.
ಕಿತ್ತುತಿನ್ನುವ ಬಡತನದಿಂದಾಗಿ 3ನೇ ತರಗತಿಯಲ್ಲಿ ವಿದ್ಯೆಗೆ ವಿದಾಯ ಹೇಳಿದ ಸೂರಿ ಅನೇಕ ವರ್ಷಗಳ ಕಾಲ ವಾಹನ ಚಾಲಕರಾಗಿ ದುಡಿದರು. ಈ ಸಂದರ್ಭದಲ್ಲಿ ಅಪಘಾತದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಮಾನವೀಯ ಗುಣ ಬೆಳೆಸಿಕೊಂಡರು.
ಕೆರೆ, ಬಾವಿ, ಸಮುದ್ರಗಳಲ್ಲಿ ಸಿಗುವ ಅನಾಥ ಮೃತದೇಹಗಳ ಅಂತ್ಯಸಂಸ್ಕಾರವನ್ನೂ ನಡೆಸಲಾರಂಭಿಸಿದರು. ಕಳೆದ 28 ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟುಅಪಘಾತಗಳಲ್ಲಿ ಗಾಯಾಳುಗಳನ್ನು ರಕ್ಷಿಸಿದ ಸೂರಿ, ಸಾವಿರಕ್ಕೂ ಅಧಿಕ ಕೊಳೆತು ನಾರುವ, ಚಿಂದಿಛಿದ್ರವಾಗಿರುವ ಹೆಣಗಳಿಗೆ ಮೋಕ್ಷ ನೀಡಿದ್ದಾರೆ.
ಈಗೀಗ ಊರಲ್ಲಿ ಯಾರೇ ಸತ್ತರೂ, ಅಲ್ಲಿ ಮಾಡಬೇಕಾದ ಮರ ಕಡಿಯುವ, ಚಟ್ಟಕಟ್ಟುವ ಇತ್ಯಾದಿ ಅಂತಿಮ ಸಂಸ್ಕಾರಗಳಿಗೆ ಸೂರಿಯೇ ಬೇಕು.
ಜೊತೆಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಪು ಮತ್ತು ಬೆಳಪು ಗ್ರಾಮಗಳ ಸಾರ್ವಜನಿಕ ರುದ್ರಭೂಮಿಯಲ್ಲಿ ಹೆಣಗಳನ್ನು ಸುಡುವ ಕೆಲಸ ಮಾಡುತಿದ್ದಾರೆ.
ಶ್ರೀಮಂತರಾದರೆ ಒಂದೆರಡು ಸಾವಿರ ರು. ಪಡೆಯುತ್ತಾರೆ, ಬಡವರದ್ದಾದರೆ ಉಚಿತವಾಗಿ ಮೃತದೇಹ ಸುಡುತ್ತಾರೆ.
ಯಾರೂ ಮಾಡಲೊಪ್ಪದ ಭೀಭತ್ಸ ಆದರೆ ಅಷ್ಟೇ ಅತ್ಯಗತ್ಯ ಈ ಸೇವೆಯಲ್ಲಿ ನಿತ್ಯವೂ ವ್ಯಸ್ತರಾಗಿರುವ ಅವರಿಗೆ ಈಗ ಲಾಕ್‌ಡೌನ್ ಒಂದು ತಿಂಗಳಿಂದ ರಜೆ ನೀಡಿದೆ. ಹಾಗಂತ ಮನೆಯಲ್ಲಿ ಸಮಯವನ್ನು ವ್ಯರ್ಥ ಮಾಡಲೊಪ್ಪದ ಸೂರಿ ಶೆಟ್ಟಿ, ಕಾಪು ಮತ್ತು ಬೆಳಪು ರುದ್ರಭೂಮಿಗಳಲ್ಲಿ ಮಳೆಗಾಲದಲ್ಲಿ ಮೃತದೇಹಗಳನ್ನು ಸುಡುವುದಕ್ಕೆ ಬೇಕಾದ ನೂರಾರು ಕ್ವಿಂಟಲ್ ಕಟ್ಟಿಗೆಯನ್ನು ತಾವೇ ಒಡೆಯುತ್ತಿದ್ದಾರೆ.