ಅಂಕೋಲಾ: ರಾಷ್ಟ್ರಪಿತ ಗಾಂಧೀಜಿಗೆ ನಿತ್ಯಪೂಜೆ, ದೇಶಾಭಿಮಾನ ಮರೆಯುತ್ತಿರುವ ಲಕ್ಷ್ಮೇಶ್ವರ ಸಹೋದರರು..!
ರಾಘು ನಾಯ್ಕ ಕಾಕರಮಠ
ಅಂಕೋಲಾ(ಅ.02): ಪ್ರತಿ ವರ್ಷ ಅಕ್ಟೋಬರ್ 2ರಂದು ಗಾಂಧೀ ಜಯಂತಿ ಆಚರಿಸಲಾಗುತ್ತದೆ. ಆದರೆ ವರ್ಷಪೂರ್ತಿ ರಾಷ್ಟ್ರಪಿತ ಗಾಂಧಿ ತಾತನನ್ನು ಸ್ಮರಿಸುವ ಕುಟುಂಬವೊಂದು ಅಂಕೋಲಾದ ಲಕ್ಷ್ಮೇಶ್ವರದಲ್ಲಿದೆ. ಈ ಮನೆಯವರೆಲ್ಲರೂ ಸೇರಿ ನಿತ್ಯ ಗಾಂಧೀಜಿಗೆ ಪೂಜೆ ಸಲ್ಲಿಸುತ್ತಾರೆ. ದೇಶಾಭಿಮಾನ ಮರೆಯುತ್ತಿರುವ ಈ ಸಂದರ್ಭದಲ್ಲಿ, ಇಲ್ಲಿ ಮಾತ್ರ ನಿತ್ಯ ಗಾಂಧೀಜಿ ಸ್ಮರಿಸಿ ದೇಶಾಭಿಮಾನ ಮೆರೆಯಲಾಗುತ್ತಿದೆ.
ಕರ್ನಾಟಕದ ಬಾರ್ಡೋಲಿ ಎಂದೇ ಖ್ಯಾತಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಹಾತ್ಮ ಗಾಂಧೀಜಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತದೆ. ಮಹಾತ್ಮಾ ಗಾಂಧೀಜಿಯವರು ಅಂಕೋಲಾದ ವಂದಿಗೆಯ ಹರಿಜನಕೇರಿಗೆ 1942ರಲ್ಲಿ ಆಗಮಿಸಿದ್ದ ಸಂದರ್ಭದಲ್ಲಿ ಅವರ ತ್ಯಾಗ ಮತ್ತು ಆದರ್ಶ ಗುಣಗಳಿಂದ ಸಾವಿರಾರು ಜನ ಪ್ರೇರೆಪಿತರಾಗಿದ್ದರು. ಸ್ವಾತಂತ್ರ್ಯ ಹೋರಾಟದ ಗಂಡು ಮೆಟ್ಟಿದ ನೆಲವಾದ ಈ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಗಾಂಧೀಜಿಯನ್ನು ಕೊಂಡಾಡುತ್ತಾರೆ. ಹಾಗೆಯೇ ದಲಿತ ಕುಟುಂಬದ ಲಿಂಗು ಲಕ್ಷ್ಮೇಶ್ವರ ಹಾಗೂ ಥಾಕು ಲಕ್ಷೆ ಲಕ್ಷ್ಮೇಶ್ವರ ಸಹೋದರರ ಮನೆಯಲ್ಲಿ ಮಹಾತ್ಮ ಗಾಂಧಿಗೆ ನಿತ್ಯ ಪೂಜೆ ಸಲ್ಲಿಸುತ್ತಾರೆ.
ಮನೆಯ ಎದುರು ವಿಶೇಷವಾಗಿ ಗಾಂಧಿ ತಾತನಿಗೆ ಕಟ್ಟೆ ನಿರ್ಮಿಸಿದ್ದಾರೆ. ಕಳೆದ ಆರು ದಶಕದಿಂದ ತಮ್ಮ ಮನೆಯ ದೇವರೊಡನೆ ಗಾಂಧೀಜಿ ಪೂಜೆ ಮಾಡುತ್ತಾ ಬರುತ್ತಿದ್ದಾರೆ. ನಿತ್ಯ ಬೆಳಗ್ಗೆ ಗಂಧದ ಕಡ್ಡಿ ಹಚ್ಚಿ, ಆರತಿ ಬೆಳಗಿ ಪೂಜೆ ಸಲ್ಲಿಸುತ್ತಾರೆ. 1931ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಈ ಕುಟುಂಬದ ಬಲಿಯಾ ಮಾಧು ಆಗೇರ ಎಂಬುವವರು ತಾವೇ ಸ್ವತಃ ಬಳಪದ ಕಲ್ಲಿನಲ್ಲಿ, ಗಾಂಧೀಜಿಯವರ ಉಬ್ಬು ಶಿಲ್ಪ ಮೂರ್ತಿ ನಿರ್ಮಿಸಿದ್ದರಂತೆ. 1957ರಲ್ಲಿ ತಮ್ಮ ಮನೆಯ ಅಂಗಳದಲ್ಲಿ ಕಟ್ಟೆನಿರ್ಮಿಸಿ ಗಾಂಧೀಜಿಗೆ ಸ್ಥಾನ ಒದಗಿಸಿ, ನಿತ್ಯ ಪೂಜೆಯ ಪರಿಪಾಟ ಮುಂದುವರಿಸಿದರಂತೆ. ಈಗ ಅವರ ಮಕ್ಕಳು, ಮೊಮ್ಮಕ್ಕಳು ನಿತ್ಯ ಪೂಜೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುವ ಸವಲತ್ತುಗಳನ್ನು ಬಲಿಯಾ ಆಗೇರರಿಗೆ ನೀಡಲು ಮುಂದಾಗಿತ್ತು. ಆದರೆ ಸರ್ಕಾರದ ಯಾವುದೇ ಸವಲತ್ತುಗಳನ್ನು ಪಡೆಯಲು ಬಲಿಯಾ ಆಗೇರ ನಿರಾಕರಿದರಂತೆ. ಕಟ್ಟಾಗಾಂಧೀವಾದಿಯಾಗಿದ್ದ ಬಲಿಯಾ ಲಕ್ಷ್ಮೇಶ್ವರ ಅವರು 1981ರಲ್ಲಿ ನಿಧನರಾದ ನಂತರ ಅವರ ಮಕ್ಕಳು- ಮೊಮ್ಮಕ್ಕಳು ಗಾಂಧೀಜಿ ಪ್ರತಿಮೆಗೆ ಗೌರವ ಸಲ್ಲಿಸುತ್ತಾ ಬಂದಿದ್ದಾರೆ.
ಅದರಲ್ಲೂ ಕೆಲಸ-ಕಾರ್ಯದ ನಿಮಿತ್ತ ಹೊರ ಊರಿನಲ್ಲಿರುವ ಈ ದಲಿತ ಕುಟುಂಬದ ಪ್ರತಿಯೊಬ್ಬರೂ ಗಾಂಧೀ ಜಯಂತಿಯಂದು ಉಪಸ್ಥಿತರಿದ್ದು ಹಬ್ಬದ ವಾತಾವರಣದ ಕಳೆ ಕಟ್ಟಿ, ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.
ಕರನಿರಾಕರಣೆ, ಉಪ್ಪಿನ ಸತ್ಯಾಗ್ರಹ ಹಾಗೂ ಚಲೇಜಾವ್ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೋರಾಟದ ಕಿಚ್ಚನ್ನು ಜೀವಂತವಾಗಿರಿಸಿದ ಅಂಕೋಲಾದ ಜನತೆ ಮಹಾತ್ಮನನ್ನು ತಮ್ಮ ಹೃದಯದಲ್ಲಿ ತುಂಬಿಕೊಂಡಿದ್ದಾರೆ. ಗಾಂಧೀ ತಾತ ನಮ್ಮನ್ನಗಲಿ ಇಂದಿಗೆ 6 ದಶಕ ಕಳೆದರೂ ಕರ್ನಾಟಕದ ಬಾರ್ಡೋಲಿ ಅಂಕೋಲಾದಲ್ಲಿ ಇಂದಿಗೂ ಗಾಂಧೀಜಿಯನ್ನು ಸ್ಮರಿಸುತ್ತ ಇರುವುದು ಇಲ್ಲಿನ ಜನತೆಯಲ್ಲಿ ಇರುವ ದೇಶಾಭಿಮಾನದ ಪ್ರತೀಕವಾಗಿದೆ.
ನಮ್ಮ ಮನೆಯಲ್ಲಿ ನಿತ್ಯ ದೇವರಿಗೆ ಪೂಜೆ ಮಾಡುವಂತೆ, ಗಾಂಧಿ ತಾತನಿಗೂ ಪೂಜೆ ಮಾಡಿ ಗೌರವ ಅರ್ಪಿಸಲಾಗುತ್ತದೆ. ಗಾಂಧಿ ಕಟ್ಟೆ ನಾವು ನಿರ್ಮಿಸದ ಮೇಲೆ ನಮ್ಮ ಅದೃಷ್ಟವೆಂಬಂತೆ ಮನೆಯಲ್ಲಿರುವ ಬಹುತೇಕ ಎಲ್ಲರಿಗೂ ಸರ್ಕಾರಿ ಉದ್ಯೋಗ ದೊರೆಯಿತು. ಗಾಂಧೀಜಿಗೆ ಸಲ್ಲಿಸುವ ನಿತ್ಯ ಪೂಜೆ ಒಂದಲ್ಲ ಒಂದು ರೀತಿಯಿಂದ ನಮಗೆ ಒಳ್ಳೆಯದನ್ನು ಮಾಡಿದೆ ಎಂಬ ನಂಬಿಕೆ ಇದೆ ಎಂದು ಲಿಂಗು ಲಕ್ಷೆ ಲಕ್ಷ್ಮೇಶ್ವರ, ಥಾಕು ಲಕ್ಷ್ಮೇಶ್ವರ ಸಹೋದರರು ಹೇಳುತ್ತಾರೆ.