ಕೊರೋನಾ ವಿರುದ್ಧ ಹೋರಾಟ: ಕಲಬುರಗಿಗೆ ಕೆಪಿಸಿಸಿಯಿಂದ 550 ಬೆಡ್ ರವಾನೆ
ದೊಡ್ಡಬಳ್ಳಾಪುರ(ಜು.19): ಇಲ್ಲಿಗೆ ಸಮೀಪದ ಬಾಶೆಟ್ಟಿಹಳ್ಳಿ ಕೈಗಾರಿಕೆ ಪ್ರದೇಶದಲ್ಲಿರುವ ವ್ಯಾಡ್‌ಪ್ಯಾಕ್ ಖಾಸಗಿ ಕಾರ್ಖಾನೆ ಉತ್ಪಾದಿಸಿರುವ ಕಡಿಮೆ ವೆಚ್ಚ ಹಾಗೂ ಉತ್ತಮ ಗುಣಮಟ್ಟದ ಹಾಸಿಗೆಗಳನ್ನು ಕೋವಿಡ್-19 ರೋಗಿಗಳಿಗಾಗಿ ಕಾಂಗ್ರೆಸ್ ಪಕ್ಷವು ಖರೀದಿಸಿದೆ. 550 ಹಾಸಿಗೆಗಳನ್ನು ಕಲಬುರಗಿ ನಗರಕ್ಕೆ ಕೊಂಡೊಯ್ಯುವ ಲಾರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ.
ವ್ಯಾಡ್‌ಪ್ಯಾಕ್ ಕಂಪನಿ ತಯಾರಿಸಿರುವ 850 ರು. ಬೆಲೆಯ 550 ಹಾಸಿಗೆಗಳನ್ನು ಕೆಪಿಸಿಸಿಯಿಂದ ಖರೀದಿಸಿ, ಕೊರೋನಾ ರೋಗಿಗಳ ಉಪಯೋಗಕ್ಕಾಗಿ ಕಲಬುರಗಿ ನಗರಕ್ಕೆ ಕಳುಹಿಸಿಕೊಡಲಾಗಿದೆ.
ಈಗಾಗಲೇ ತೆಲಂಗಾಣ ಸರ್ಕಾರ 5 ಸಾವಿರ, ದೆಹಲಿ ಸರ್ಕಾರ 10 ಸಾವಿರ ಹಾಸಿಗೆಗಳನ್ನು ಇದೇ ಕಂಪನಿಯಿಂದ ಖರೀದಿಸಿವೆ. ಇವು ಪರಿಸರಸ್ನೇಹಿ ಹಾಸಿಗೆಗಳಾಗಿವೆ ಎನ್ನಲಾಗಿದೆ. ಇದೇ ಹಾಸಿಗೆಗಳನ್ನು ಕೊರೋನಾ ರೋಗಿಗಳಿಗೆ ಉಪಯೋಗಿಸಲಾಗುತ್ತಿದೆ ಎಂಬ ಮಾಹಿತಿ ಇದೆ.
ರಾಜ್ಯ ಸರ್ಕಾರ 1 ಬೆಡ್‌ಗೆ 800 ಬಾಡಿಗೆ ನೀಡಲು ಸಿದ್ಧವಿದೆ. ಆದರೆ, 850ಕ್ಕೆ ಒಂದು ಬೆಡ್ ಖರೀದಿಗೆ ಲಭ್ಯವಿದೆ.
ಈ ಬೆಡ್‌ಗಳ ಖರೀದಿ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ. ಬೇಕಿದ್ದರೆ ಸರ್ಕಾರಕ್ಕೂ ಇಂತಹ ಬೆಡ್ ಒಂದನ್ನು ಉಡುಗೊರೆ ನೀಡುವುದಾಗಿ ಕುಟುಕಿದ ಡಿ.ಕೆ.ಶಿವಕುಮಾರ್
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.