- Home
- Karnataka Districts
- ಹೆಂಡ್ತಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲವೆಂದು ಧರಣಿ ಕುಳಿತ ಗಂಡ! ₹2,000 ಯೋಜನೆಯ ಹಣಕ್ಕೆ ₹25,000 ಖರ್ಚು ಮಾಡಿದ ಪತಿ!
ಹೆಂಡ್ತಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲವೆಂದು ಧರಣಿ ಕುಳಿತ ಗಂಡ! ₹2,000 ಯೋಜನೆಯ ಹಣಕ್ಕೆ ₹25,000 ಖರ್ಚು ಮಾಡಿದ ಪತಿ!
ಕೊಪ್ಪಳದಲ್ಲಿ, ಗೃಹಲಕ್ಷ್ಮಿ ಯೋಜನೆಯ ಹಣ ಪತ್ನಿಗೆ ಬಾರದಿದ್ದಕ್ಕೆ ಪತಿಯೊಬ್ಬರು ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅತಿಥಿ ಶಿಕ್ಷಕಿಯಾಗಿರುವ ಪತ್ನಿಯ ಖಾತೆಗೆ ಹಣ ಜಮೆಯಾಗದ ಕಾರಣ, ಈವರೆಗೆ ₹25,000 ಖರ್ಚು ಮಾಡಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದಾರೆ.

ಕೊಪ್ಪಳ (ಜು.22): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಅಡಿ ಪ್ರತಿ ತಿಂಗಳು ₹2,000 ಪಡೆಯಲು ಸಾವಿರಾರು ಮಹಿಳೆಯರು ಇಂದಿಗೂ ಕಾಯುತ್ತಿದ್ದಾರೆ. ಆದರೆ ಕೊಪ್ಪಳದಲ್ಲಿ (Koppal) ಪತ್ನಿಗೆ ಬರಬೇಕಾದ ಈ ಹಣಕ್ಕಾಗಿ ಪತಿಯೊಬ್ಬರು ಜಿಲ್ಲಾ ಆಡಳಿತ ಭವನದ ಮುಂದೆ ಏಕಾಂಗಿಯಾಗಿ ಪ್ರತಿಭಟನೆಗೆ (Protest) ಕುಳಿತಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಏನಿದು ಪ್ರಕರಣ?
ಕುಷ್ಟಗಿ ತಾಲ್ಲೂಕಿನ ಹಾಬಲಕಟ್ಟಿ ಗ್ರಾಮದ ಶರಣಪ್ಪ ಭೋವಿ ಅವರ ಪತ್ನಿ ಶಿಲ್ಪಾ ಭೋವಿ ಅವರು ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ (Guest Teacher) ಕೆಲಸ ಮಾಡುತ್ತಿದ್ದಾರೆ. ಯೋಜನೆ ಜಾರಿಯಾದಾಗಿನಿಂದಲೂ ಶಿಲ್ಪಾ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆಯಾಗಿಲ್ಲ. ಇದರಿಂದ ಬೇಸತ್ತ ಪತಿ ಶರಣಪ್ಪ, ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
₹25,000 ಖರ್ಚು ಮಾಡಿದ ಶರಣಪ್ಪ!
ಶರಣಪ್ಪ ಭೋವಿ ಅವರ ಪ್ರಕಾರ, ಕಳೆದ ಮೂರು ವರ್ಷಗಳಿಂದ (ಯೋಜನೆಯ ಆರಂಭದಿಂದ) ಹಣ ಪಡೆಯಲು ಆನ್‌ಲೈನ್ ಅಪ್ಲಿಕೇಶನ್ (Online Application) ಸಲ್ಲಿಸಲು ಮತ್ತು ತಾಂತ್ರಿಕ ದೋಷಗಳನ್ನು ಸರಿಪಡಿಸಲು ಹತ್ತಾರು ಕಚೇರಿಗಳಿಗೆ ಅಲೆದಾಡಿದ್ದಾರೆ. ಈ ಅಲೆದಾಟದಲ್ಲಿ ಅವರು ಇದುವರೆಗೆ ಬರೋಬ್ಬರಿ ₹25,000 ಖರ್ಚು ಮಾಡಿಕೊಂಡಿದ್ದಾರೆ! 'ಬರಬೇಕಾದ ಹಣ ಎರಡು ಸಾವಿರ, ಆದರೆ ಅದನ್ನು ಪಡೆಯಲು ನಾನು ಮಾಡಿದ ಖರ್ಚು ₹25,000 (ಇಪ್ಪತ್ತೈದು ಸಾವಿರ)' ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಧಿಕಾರಿಗಳ ಹಾರಿಕೆ ಉತ್ತರ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Women and Child Development Department) ಅಧಿಕಾರಿಗಳನ್ನು ಭೇಟಿ ಮಾಡಿದರೆ, ಕೇವಲ "ತಾಂತ್ರಿಕ ಕಾರಣ" (Technical Issues) ಎನ್ನುವ ನೆಪವೊಡ್ಡುತ್ತಿದ್ದಾರೆ ಎಂದು ಶರಣಪ್ಪ ಆರೋಪಿಸಿದ್ದಾರೆ. ಪದೇ ಪದೇ ಅರ್ಜಿ ಸಲ್ಲಿಸಿದರೂ ಫಲ ಸಿಗದಿದ್ದಾಗ, ತಾವು ಖರ್ಚು ಮಾಡಿರುವ ₹25,000 ಹಣವನ್ನೇ ಸರ್ಕಾರ ವಾಪಸ್ ನೀಡಲಿ ಎಂದು ಅವರು ಮುಖ್ಯಮಂತ್ರಿಗಳು ಮತ್ತು ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಪತ್ರ ಬರೆದಿದ್ದಾರೆ.
ನ್ಯಾಯ ಸಿಗುವವರೆಗೂ ಹೋರಾಟ:
‘ನನ್ನ ಪತ್ನಿ ಒಬ್ಬ ಅತಿಥಿ ಶಿಕ್ಷಕಿಯಾಗಿದ್ದರೂ ಅವಳಿಗೆ ಸರ್ಕಾರದ ಸವಲತ್ತು ಸಿಗುತ್ತಿಲ್ಲ ಎಂದರೆ ಸಾಮಾನ್ಯ ಜನರ ಪರಿಸ್ಥಿತಿ ಏನು?’ ಎಂದು ಪ್ರಶ್ನಿಸಿರುವ ಶರಣಪ್ಪ, ಪತ್ನಿಯ ಖಾತೆಗೆ ಗೃಹಲಕ್ಷ್ಮಿ ಹಣ ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

