- Home
- Karnataka Districts
- ಕೊಡಗಿನಲ್ಲಿ ಮಳೆಯ ಅಬ್ಬರ: ರಸ್ತೆ ಬಂದ್, ವಿದ್ಯುತ್ ಕಡಿತ, ಭೂಕುಸಿತ ಭೀತಿಯಿಂದ ಜನಜೀವನ ಅಸ್ತವ್ಯಸ್ತ
ಕೊಡಗಿನಲ್ಲಿ ಮಳೆಯ ಅಬ್ಬರ: ರಸ್ತೆ ಬಂದ್, ವಿದ್ಯುತ್ ಕಡಿತ, ಭೂಕುಸಿತ ಭೀತಿಯಿಂದ ಜನಜೀವನ ಅಸ್ತವ್ಯಸ್ತ
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ತ್ರಿವೇಣಿ ಸಂಗಮ ಸ್ನಾನಘಟ್ಟ, ಪಕ್ಕದ ಉದ್ಯಾನ ಮುಳುಗಿದೆ.

ಮಳೆ ಹೀಗೆಯೇ ಮುಂದುವರಿದಲ್ಲಿ ಭಾಗಮಂಡಲ ನಾಪೋಕ್ಲು, ಭಾಗಮಂಡಲ ಮತ್ತು ಮಡಿಕೇರಿ ರಸ್ತೆಗಳ ಮೇಲು ನೀರು ಹರಿಯಲಿದೆ. ಕಾವೇರಿ ನದಿಯಲ್ಲಿ ಒಂದೇ ದಿನಕ್ಕೆ ಆರು ಅಡಿ ನೀರು ಪ್ರಮಾಣ ಏರಿಕೆಯಾಗಿದೆ. ಕುಶಾಲನಗರ, ಸೋಮವಾರಪೇಟೆ ತಾಲ್ಲೂಕುಗಳಲ್ಲೂ ಭಾರೀ ಮಳೆಯಾಗುತ್ತಿದೆ. ಸೋಮವಾರಪೇಟೆ ಮಡಿಕೇರಿ ಮುಖ್ಯ ರಸ್ತೆ, ಹಾಗೆ ಸೋಮವಾರಪೇಟೆ ಕುಶಾಲನಗರ ರಸ್ತೆಯಲ್ಲೂ ಮರಗಳು ಧರೆಗುರುಳಿವೆ. ಇದರಿಂದ ಸಾಕಷ್ಟು ಸಮಯ ರಸ್ತೆ ಸಂಚಾರ ಬಂದ್ ಆಗಿದ್ದವು. ಮತ್ತೊಂದೆಡೆ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲೂ ಭಾರಿ ಮಳೆಯಾಗುತ್ತಿದೆ.
ಕುಶಾಲನಗರ ಸಿದ್ದಾಪುರ ನಡುವಿನ ವಾಲ್ನೂರು ಬಳಿ ಬೃಹತ್ ಗಾತ್ರದ ಎರಡು ಮರಗಳು ಮುರಿದು ಬಿದ್ದಿದ್ದರಿಂದ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಸ್ಥಳಕ್ಕೆ ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ಮತ್ತು ಅವರ ನೇತೃತ್ವದ ತಂಡ ಭೇಟಿ, ಕೂಡಲೇ ಮರ ತೆರವುಗೊಳಿಸಿದ್ದಾರೆ. ಮತ್ತೊಂದೆಡೆ ವಿರಾಜಪೇಟೆಯ ಭಾಗದಲ್ಲಿ ಸುರಿದ ಭಾರೀ ಮಳೆಗೆ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ವಿರಾಜಪೇಟೆ ಪಟ್ಟಣದ ವಿಜಯನಗರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಅಲ್ಲಿನ ನಿವಾಸಿಗಳು ಸಾಕಷ್ಟು ಪರದಾಡಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಅಬ್ಬರಿಸುತ್ತಿದ್ದು ಕೊಡಗಿನ ಜನರು ತತ್ತರಿಸುವಂತೆ ಆಗಿದೆ. ಇನ್ನೂ ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದ್ದು, ಜಿಲ್ಲೆಯಲ್ಲಿ 28 ನೇ ತಾರೀಖಿನವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕಳೆದ ಎರಡು ವರ್ಷಗಳ ಹಿಂದೆಯೇ ಎಫ್ಎಂಸಿ ಕಾಲೇಜು ರಸ್ತೆಯಲ್ಲಿ ಸಾಯಿ ಕ್ರೀಡಾಂಗಣದ ಎದುರು ಮಳೆಗೆ ಕುಸಿದಿದ್ದ ರಾಜಕಾಲುವೆ ತಡೆಗೋಡೆ ಮತ್ತೆ ಕುಸಿಯುವ ಆತಂಕ ಎದುರಾಗಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತೆ ಬಿರುಕುಗಳು ಕಾಣಿಸಿಕೊಂಡಿದ್ದು ಇಡೀ ಮಣ್ಣು ಕುಸಿದು ಕಾಲುವೆ ಮುಚ್ಚಿ ಹೋಗುವ ಆತಂಕ ಎದುರಾಗಿದೆ. ಕಾಮಗಾರಿ ಮಾಡಲಾಗುತ್ತಿದ್ದರೂ ಅದು ಪೂರ್ಣಗೊಂಡಿಲ್ಲ.
ಮಧ್ಯಭಾಗದಲ್ಲಿ ಮಾತ್ರವೇ ತಡೆಗೋಡೆ ನಿರ್ಮಿಸಲಾಗಿದೆ. ಇದರಿಂದ ಎರಡು ಬದಿಗಳಲ್ಲಿ ಭಾರೀ ಪ್ರಮಾಣದ ಮಣ್ಣು ಕುಸಿಯುವ ಹಂತ ತಲುಪಿದೆ. ತಡೆಗೋಡೆ ಪಕ್ಕಕ್ಕೆ ಸುರಿದಿರುವ ಮಣ್ಣು ಕಾಲುವೆಗೆ ಜಾರುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಜಾರಿದಲ್ಲಿ ರಸ್ತೆಯೂ ಕುಸಿಯುವ ಭೀತಿ ಇದೆ. ರಸ್ತೆ ಕುಸಿದಲ್ಲಿ ಸುಬ್ರಹ್ಮಣ್ಯನಗರ, ಎಫ್ಎಂಸಿ ಕಾಲೇಜು, ಗಾಳಿಬೀಡು ಸೇರಿದಂತೆ ಹಲವೆಡಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಬಂದ್ ಆಗಲಿದೆ. ಒಂದು ವೇಳೆ ಹಾಗೆಯೇ ಆದಲಿ, ವಿಜಯ ವಿನಾಯಕ ದೇವಾಲಯ ಮುಂಭಾಗದಿಂದ ಕಿರಿದಾದ ರಸ್ತೆಯಲ್ಲಿ ಎಲ್ಲಾ ವಾಹನಗಳ ಓಡಾಡಬೇಕಾದ ಪರಸ್ಥಿತಿ ನಿರ್ಮಾಣವಾಗಲಿದೆ.
ಬೇಸಿಗೆಯಲ್ಲಿಯೇ ಕಾಮಗಾರಿ ಮುಗಿಸದ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣ ಆಗಲು ಕಾರಣವಾಗಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತೀವ್ರಗೊಳ್ಳುತ್ತಿದ್ದು ಪರಿಸ್ಥಿತಿ ಏನಾಗುವುದೋ ಎನ್ನುವಂತೆ ಆಗಿದೆ. ಸದ್ಯ ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ತಡೆಗೋಡೆ ಕಾಮಗಾರಿಯನ್ನು ಸ್ಥಗಿತಮಾಡಲಾಗಿದೆ. ಕಳೆದ ಮಳೆಗಾಲದ ಸಂದರ್ಭದಲ್ಲೂ ಇದೇ ರೀತಿಯಾಗಿ ರಸ್ತೆಯನ್ನು ಬಂದ್ ಮಾಡಿ ಮತ್ತೊಂದು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಅವಧಿಗೂ ಮುನ್ನವೇ ಶುರುವಾದ ಮುಂಗಾರು ಮಳೆಗೆ ಕೊಡಗು ಜಿಲ್ಲೆ ತತ್ತರಿಸಿ ಹೋಗಿದೆ. ಭಾರೀ ಗಾಳಿ ಜೊತೆಗೆ ಗಂಟೆಗೆ 45 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ, ಸೋಮವಾರಪೇಟೆ, ವಿರಾಜಪೇಟೆ, ಪೊನ್ನಂಪೇಟೆ ಸೇರಿ ಹಲವೆಡೆ ಬೃಹತ್ ಗಾತ್ರದ ಮರ ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿವೆ.
ಮಡಿಕೇರಿಯ ಅಶೋಕಪುರದ ಚಟ್ಟಳ್ಳಿ ರಸ್ತೆಯಲ್ಲಿ ದೊಡ್ಡ ಗಾತ್ರದ ಮರವೊಂದು ಬುಡ ಸಹಿತ ಉರುಳಿ ಬಿದ್ದಿದೆ. ಬೃಹತ್ ಗಾತ್ರದ ಮರ ಬಿದ್ದ ಹಿನ್ನೆಲೆಯಲ್ಲಿ ಪಕ್ಕದಲ್ಲಿಯೇ ಇದ್ದ ವಿದ್ಯುತ್ ಲೈನ್ ಮೇಲೆ ಬಿದ್ದಿದ್ದರಿಂದ ಒಂದು ವಿದ್ಯುತ್ ಕಂಬ ತುಂಡಾಗಿ ಬಿದ್ದಿದ್ದರೆ, ಮತ್ತೊಂದು ವಿದ್ಯುತ್ ಕಂಬ ನೆಲದಿಂದಲೇ ಬಡಸಮೇತ ಬಿದ್ದಿದೆ. ಜೊತೆ ನೀರುಕೊಲ್ಲಿ ಎಂಬಲ್ಲಿಯೂ ಮರ ಮತ್ತು ವಿದ್ಯುತ್ ಕಂಬಗಳು ಬಿದ್ದಿವೆ. ಹೀಗಾಗಿ ಕೊಡಗು ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶಗಳು ಕತ್ತಲಲ್ಲಿ ಮುಳುಗುವಂತೆ ಆಗಿದೆ. ಇದುವರೆಗೆ ಬರೋಬ್ಬರಿ 197 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ಲೈನ್ ಸರಿಪಡಿಸಲು ಕೆಇಬಿ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕೆಇಬಿ ಸಿಬ್ಬಂದಿ ಮಳೆ ಲೆಕ್ಕಿಸದೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್, ಸುವರ್ಣ ನ್ಯೂಸ್