ಯಾದಗಿರಿ ಜಿಲ್ಲಾದ್ಯಂತ ವರುಣನ ಅಬ್ಬರ: ಹೊಲ, ಗದ್ದೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ
ಯಾದಗಿರಿ(ಸೆ.26): ನಗರ ಸೇರಿದಂತೆ ಜಿಲ್ಲೆಯ ಶಹಪೂರ, ವಡಗೇರಾ, ಗುರುಮಠಕಲ್ ಸುರಪುರ, ಹುಣಸಗಿ ತಾಲೂಕುಗಳಲ್ಲಿ ಭೀಕರ ಮಳೆಯಾಗುತ್ತಿದೆ. ಇಂದು(ಶನಿವಾರ) ಬೆಳಗ್ಗೆಯಿಂದಲೂ ಸಹ ಹಲವೆಡೆ ಜಿಟಿಜಿಟಿ ಮಳೆ ಮುಂದುವರಿದಿದೆ. ಇದರಿಂದ ಜಿಲ್ಲಾದ್ಯಂತ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಯಾದಗಿರಿ ಹೋಬಳಿಯಲ್ಲಿ 64.55 ಮಿ.ಮಿ, ಶಹಾಪುರ 124.5 ಮಿ.ಮಿ, ಸುರಪುರ 64.55 ಮಿ.ಮಿ, ವಡಗೇರಾ 69.5 ಮಿ.ಮಿ ಹಾಗೂ ಗುರುಮಠಕಲ್ ಹೋಬಳಿಯಲ್ಲಿ 65 ಮಿ.ಮಿ ಮಳೆ ಆಗಿದೆ.
ಭಾರೀ ಮಳೆಯಿಂದಾಗಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ
ಅನೇಕ ಕಡೆಗಳಲ್ಲಿ ಮನೆಗಳು ಕುಸಿದಿವೆ, ಯರಗೋಳ ಗ್ರಾಮದ ದೊಡ್ಡಕೆರೆ ತುಂಬಿ ಕೋಡಿ ಹರಿದಿದೆ, ಹತ್ತು ವರ್ಷಗಳ ಹಿಂದೆ ಈ ರೀತಿ ಕೆರೆ ತುಂಬಿ ಕೋಡಿ ಹರಿದಿತ್ತು.
ಶಹಾಪೂರ ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿದೆ
ಸುರಪುರ ತಾಲೂಕಿನ ನಗನೂರು, ದೇವಿಕೇರಿ, ಬೈರೆಮಡ್ಡಿ, ವಡಗೇರಾ ತಾಲೂಕಿನ ಬೀರನೂರು, ಬೊಮ್ಮನಹಳ್ಳಿ ಮುಂತಾದ ಹೊಲ-ಗದ್ದೆಗಳಲ್ಲಿ ನಾಲ್ಕೈದು ಅಡಿ ನೀರು ನಿಂತಿದೆ.
ವರುಣನ ಅಬ್ಬರದಿಂದ ಭತ್ತ, ಹತ್ತಿ, ತೊಗರಿ, ಶೇಂಗಾ, ಮೆಣಸಿನಕಾಯಿ ಮುಂತಾದ ಬೆಳೆಗಳು ನೀರುಪಾಲು
ನಗನೂರು ಗ್ರಾಮದಲ್ಲಿ ಮನೆಗೆ ನೀರು ನುಗ್ಗಿದೆ, ದೇವಿ ಕೇರಿಯಲ್ಲಿ ಪ್ರೌಢಶಾಲೆ ಮೈದಾನ ಜಲಾವೃತಗೊಂಡಿದೆ.
ಸೈದಾಪುರ ಸಮೀಪದ ಬೆಳಗುಂದಿ ರಸ್ತೆ ಬಂದ್ ಆಗಿದೆ, ಗುರುಮಠಕಲ್ ತಾಲೂಕಿನ ಗುಂಜನೂರು ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ಯಾದಗಿರಿ ನಗರದ ಲುಂಬಿನಿ ಪಾರ್ಕ್‌ನಲ್ಲಿ ನೀರು ನುಗ್ಗಿದ್ದರಿಂದ ಕುಸಿದು ಬಿದ್ದ ಪಾದಚಾರಿ ಮಾರ್ಗ
ಶಹಾಪುರ ತಾಲೂಕಿನ ತಿಪ್ಪನಹಳ್ಳಿ ಸೇತುವೆ ಮುಳುಗಿ ಹೋಗಿದೆ, ಗಂಗನಾಳ ಕೊಲ್ಲೂರು ಗ್ರಾಮಗಳಲ್ಲಿ ನೂರಾರು ಎಕರೆ ಜಮೀನು ಜಲಾವೃತಗೊಂಡಿವೆ, ಇಲ್ಲಿ ಬೆಳೆಯಲಾಗಿದ್ದ ಹತ್ತಿ, ಮೆಣಸಿನಕಾಯಿ ಬೆಳೆಗಳು ಕೊಚ್ಚಿಕೊಂಡು ಹೋಗಿವೆ.
ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯ ಪಾತ್ರದಲ್ಲಿ ಭಾರಿ ಮಳೆಯಿಂದಾಗಿ ಇಂದು ಮಧ್ಯಾಹ್ನ ಕೃಷ್ಣಾ ನದಿಗೆ 2 ಲಕ್ಷ ಕ್ಯೂಸೆಕ್ ಪ್ರಮಾಣದಷ್ಟು ನೀರನ್ನು ಹೊರಬಿಡಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದು, ಕೃಷ್ಣಾ ಪಾತ್ರದ ಗ್ರಾಮಸ್ಥರಿಗೆ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಜಲಾಶಯದಿಂದ ಈಗಾಗಲೇ 1.21 ಲಕ್ಷ ಕ್ಯೂಸೆಕ್ ಪ್ರಮಾಣದಷ್ಟು ನೀರನ್ನು ನದಿಗೆ ಹೊರಬಿಡಲಾಗಿದೆ.