- Home
- Karnataka Districts
- ಲಕ್ಕುಂಡಿ ಉತ್ಖನನ: ನಿಗೂಢ ಲೋಹದ ಉಂಡೆ, ನಾಣ್ಯಾಕಾರದ ಬಿಲ್ಲೆ ಪತ್ತೆ! ಭೂಗರ್ಭದಲ್ಲಿ ಇನ್ನೆಷ್ಟಿದೆ ರಹಸ್ಯ!
ಲಕ್ಕುಂಡಿ ಉತ್ಖನನ: ನಿಗೂಢ ಲೋಹದ ಉಂಡೆ, ನಾಣ್ಯಾಕಾರದ ಬಿಲ್ಲೆ ಪತ್ತೆ! ಭೂಗರ್ಭದಲ್ಲಿ ಇನ್ನೆಷ್ಟಿದೆ ರಹಸ್ಯ!
ಗದಗ ಜಿಲ್ಲೆಯ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನದ 8ನೇ ದಿನ, ಸುಟ್ಟ ಮಣ್ಣಿನ ಬಿಲ್ಲೆ, ನಿಗೂಢ ಮೂಳೆ ಹಾಗೂ ಅರ್ಧ ಕೆಜಿ ತೂಕದ ಲೋಹದ ಉಂಡೆಯಂತಹ ಪ್ರಾಚೀನ ಅವಶೇಷಗಳು ಪತ್ತೆಯಾಗಿವೆ. ಈ ಶೋಧವು ಇತಿಹಾಸಕಾರರು, ವಿದ್ಯಾರ್ಥಿಗಳಲ್ಲಿ ಕುತೂಹಲ ಸೃಷ್ಟಿಸಿದೆ.

ಗದಗ (ಜ.23): ಐತಿಹಾಸಿಕ ತಾಣ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ನಡೆಯುತ್ತಿರುವ ಉತ್ಖನನದ ಎಂಟನೇ ದಿನದ ಕಾರ್ಯಾಚರಣೆಯಲ್ಲಿ ಮತ್ತೆ ಕೆಲವು ಪ್ರಾಚೀನ ಅವಶೇಷಗಳು ಪತ್ತೆಯಾಗಿವೆ. ಸುಟ್ಟ ಮಣ್ಣಿನಿಂದ ತಯಾರಾದ 2 ರೂಪಾಯಿ ನಾಣ್ಯದ ಆಕಾರದ ಬಿಲ್ಲೆ, ಸುಮಾರು 2 ಇಂಚಿನಷ್ಟು ಉದ್ದವಿರುವ ನಿಗೂಢ ಮೂಳೆ ಹಾಗೂ ಅರ್ಧ ಕೆಜಿಯಷ್ಟು ತೂಕ ಹೊಂದಿರುವ ನಿಗೂಢ ಲೋಹದ ಉಂಡೆಯೊಂದು ಪತ್ತೆಯಾಗಿದೆ.
ಈ ಉತ್ಖನನ ಕಾರ್ಯವು ದಿನದಿಂದ ದಿನಕ್ಕೆ ಹೊಸ ಕುತೂಹಲಗಳನ್ನು ಕೆರಳಿಸುತ್ತಿದೆ. ಪುರಾತತ್ವ ಇಲಾಖೆ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ನಡೆಯುತ್ತಿರುವ ಈ ಶೋಧ ಕಾರ್ಯವು ಇಂದಿಗೆ ಯಶಸ್ವಿಯಾಗಿ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಭೂಗರ್ಭದಲ್ಲಿ ಅಡಗಿದ್ದ ಹಲವು ಆಸಕ್ತಿದಾಯಕ ವಸ್ತುಗಳು ಹೊರಬರುತ್ತಿವೆ.
ಕಳೆದ ಏಳು ದಿನಗಳಿಂದ ಸತತವಾಗಿ ಸುಮಾರು 7 ಅಡಿಗಳಷ್ಟು ಆಳದವರೆಗೆ ಉತ್ಖನನ ನಡೆಸಲಾಗಿದ್ದು, ಭೂಮಿಯ ಆಳಕ್ಕೆ ಇಳಿದಂತೆಲ್ಲಾ ಇತಿಹಾಸದ ಕುರುಹುಗಳು ಲಭ್ಯವಾಗುತ್ತಿವೆ. ಇಂದು ಸುಟ್ಟ ಮಣ್ಣಿನಿಂದ ತಯಾರಾದ 2 ರೂಪಾಯಿ ನಾಣ್ಯದ ಆಕಾರದ ಬಿಲ್ಲೆ, ಸುಮಾರು 2 ಇಂಚಿನಷ್ಟು ಉದ್ದವಿರುವ ನಿಗೂಢ ಮೂಳೆ ಹಾಗೂ ಅರ್ಧ ಕೆಜಿಯಷ್ಟು ತೂಕ ಹೊಂದಿರುವ ನಿಗೂಢ ಲೋಹದ ಉಂಡೆಯೊಂದು ಪತ್ತೆಯಾಗಿದೆ.
ಈ ಲೋಹದ ಉಂಡೆಯು ಯಾವುದಕ್ಕೆ ಸಂಬಂಧಿಸಿದ್ದು ಮತ್ತು ಇದು ಯಾವ ಕಾಲಕ್ಕೆ ಸೇರಿದ್ದು ಎಂಬ ಕುತೂಹಲ ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಮೇಲ್ವಿಚಾರಕರು ಇವುಗಳನ್ನು ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿದ್ದು, ಹೆಚ್ಚಿನ ವೈಜ್ಞಾನಿಕ ಸಂಶೋಧನೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಈವರೆಗೆ ಕವಡೆ, ಮಡಿಕೆ ತುಂಡುಗಳು ಮತ್ತು ವಿವಿಧ ಬಿಲ್ಲೆಗಳು ಇಲ್ಲಿ ಪತ್ತೆಯಾಗಿವೆ.
ವಿದ್ಯಾರ್ಥಿಗಳ ಮತ್ತು ವಿದೇಶಿಗರ ದೌಡು: ಐತಿಹಾಸಿಕ ಮಹತ್ವದ ಈ ಸ್ಥಳಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಉತ್ಖನನ ಪ್ರಕ್ರಿಯೆ ಹೇಗೆ ನಡೆಯುತ್ತದೆ ಮತ್ತು ಸಿಗುತ್ತಿರುವ ಅವಶೇಷಗಳ ಐತಿಹಾಸಿಕ ಮಹತ್ವವೇನು ಎಂಬ ಬಗ್ಗೆ ಮೇಲ್ವಿಚಾರಕರಿಂದ ವಿದ್ಯಾರ್ಥಿಗಳು ವಿವರಣೆ ಪಡೆದರು.
ಇನ್ನು ಫ್ರಾನ್ಸ್‌ನಿಂದ ಬಂದಿದ್ದ 15 ಪ್ರವಾಸಿಗರ ತಂಡವು ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡಿರುವುದು ಲಕ್ಕುಂಡಿಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ.

