- Home
- Karnataka Districts
- ಲಕ್ಕುಂಡಿ ನಿಧಿ ಸಿಕ್ಕ ಜಾಗಕ್ಕೆ ಫ್ರಾನ್ಸ್ ಪ್ರವಾಸಿಗರ ಭೇಟಿ, ಚಿನ್ನ ಶೋಧಕ್ಕೆ ಮೆಟಲ್ ಡಿಟೆಕ್ಟರ್ ಹಿಡಿದು ಬಂದರಾ?
ಲಕ್ಕುಂಡಿ ನಿಧಿ ಸಿಕ್ಕ ಜಾಗಕ್ಕೆ ಫ್ರಾನ್ಸ್ ಪ್ರವಾಸಿಗರ ಭೇಟಿ, ಚಿನ್ನ ಶೋಧಕ್ಕೆ ಮೆಟಲ್ ಡಿಟೆಕ್ಟರ್ ಹಿಡಿದು ಬಂದರಾ?
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಅರ್ಧ ಕೆಜಿ ಚಿನ್ನದ ನಿಧಿ ಪತ್ತೆಯಾಗಿದ್ದು, ಈ ಸ್ಥಳವು ಈಗ ಜಾಗತಿಕ ಗಮನ ಸೆಳೆಯುತ್ತಿದೆ. ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಅವರ ಕಾರ್ಯಕ್ಕೆ ಫ್ರಾನ್ಸ್ ಪ್ರವಾಸಿಗರು 'ಮಿರಾಕಲ್' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗದಗ (ಜ.23): ಜಿಲ್ಲೆಯ ಐತಿಹಾಸಿಕ ತಾಣವಾದ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು ದಿನದಿಂದ ದಿನಕ್ಕೆ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ನಿಧಿ ಸಿಕ್ಕಿದ ಜಾಗವನ್ನು ನೋಡುವುದಕ್ಕೆ ವಿದೇಶಿಗಳು ಕೂಡ ದೌಡಾಯಿಸಿದ್ದಾರೆ. ಇವರೇನಾದರೂ ಬಂಗಾರದ ನಿಧಿ ಹಿಂದೆ ಬಿದ್ದರೆ ಏನ್ ಗತಿ ಎಂಬುದು ಸ್ಥಳೀಯರ ಆತಂಕವಾಗಿದೆ.
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಅಡಗಿರುವ ಇತಿಹಾಸದ ಪುಟಗಳನ್ನು ತೆರೆಯಲು ಪುರಾತತ್ವ ಇಲಾಖೆ ಮತ್ತು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಜಂಟಿಯಾಗಿ ನಡೆಸುತ್ತಿರುವ ಈ ಕಾರ್ಯ ಈಗ ಜಾಗತಿಕ ಗಮನ ಸೆಳೆಯುತ್ತಿದೆ.
ಕಳೆದ ಏಳು ದಿನಗಳ ಹಿಂದೆ ಅರ್ಧ ಕೆಜಿ ಚಿನ್ನದ ನಿಧಿ ಸಿಕ್ಕ ಜಾಗವು ಈಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಇಂದು ಫ್ರಾನ್ಸ್ ದೇಶದಿಂದ ಆಗಮಿಸಿದ್ದ 15 ಪ್ರವಾಸಿಗರ ತಂಡವು ಉತ್ಖನನ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಕುತೂಹಲದಿಂದ ವೀಕ್ಷಿಸಿದರು.
ವಿಶೇಷವೆಂದರೆ, ತನಗೆ ಸಿಕ್ಕ ಅರ್ಧ ಕೆಜಿ ಚಿನ್ನದ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಯುವಕ ಪ್ರಜ್ವಲ್ ರಿತ್ತಿ ಅವರ ಕಾರ್ಯವನ್ನು ವಿದೇಶಿ ಪ್ರವಾಸಿಗರು 'ಮಿರಾಕಲ್' ಎಂದು ಬಣ್ಣಿಸಿದ್ದಾರೆ.
ಇಷ್ಟು ದೊಡ್ಡ ಮೊತ್ತದ ಚಿನ್ನ ಸಿಕ್ಕರೂ ಅದನ್ನು ಸ್ವಂತಕ್ಕೆ ಬಳಸದೆ ಇತಿಹಾಸದ ರಕ್ಷಣೆಗಾಗಿ ನೀಡಿದ ಪ್ರಜ್ವಲ್ ಎಲ್ಲರಿಗೂ ಮಾದರಿ' ಎಂದು ಏಷ್ಯನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡುತ್ತಾ ವಿದೇಶಿಗರು ಸಂತಸ ಹಂಚಿಕೊಂಡರು.
ಪ್ರಸ್ತುತ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆಯ ಉಸ್ತುವಾರಿಯಲ್ಲಿ ಬಿಗಿ ಭದ್ರತೆಯ ನಡುವೆ ಉತ್ಖನನ ಕಾರ್ಯ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರೋಚಕ ಇತಿಹಾಸ ಹೊರಬರುವ ನಿರೀಕ್ಷೆಯಿದೆ.

